Vikas Dubey: ಆತನ ತಪ್ಪಿಗೆ ತಕ್ಕ ಶಿಕ್ಷೆಯಾಯ್ತು!; ವಿಕಾಸ್​ ದುಬೆ ಅಂತ್ಯಕ್ರಿಯೆ ವೇಳೆ ಹೆಂಡತಿಯ ಆಕ್ರೋಶ

Vikas Dubey Encounter: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಅಂತ್ಯಕ್ರಿಯೆ ವೇಳೆ ಮಾಧ್ಯಮಗಳ ಮೇಲೆ ಹರಿಹಾಯ್ದ ವಿಕಾಸ್​ ದುಬೆ ಹೆಂಡತಿ ರಿಚಾ, ಹೌದು, ನನ್ನ ಗಂಡ ತಪ್ಪು ಮಾಡಿದ್ದ. ಇದೇ ರೀತಿ ಸಾಯಬೇಕೆಂಬುದು ಆತನ ಹಣೆಬರಹದಲ್ಲಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

Sushma Chakre | news18-kannada
Updated:July 11, 2020, 9:37 AM IST
Vikas Dubey: ಆತನ ತಪ್ಪಿಗೆ ತಕ್ಕ ಶಿಕ್ಷೆಯಾಯ್ತು!; ವಿಕಾಸ್​ ದುಬೆ ಅಂತ್ಯಕ್ರಿಯೆ ವೇಳೆ ಹೆಂಡತಿಯ ಆಕ್ರೋಶ
ವಿಕಾಸ್​ ದುಬೆ
  • Share this:
ನವದೆಹಲಿ (ಜು. 11): 'ಹೌದು, ನನ್ನ ಗಂಡ ಇದುವರೆಗೂ ಮಾಡಿದ್ದೆಲ್ಲವೂ ತಪ್ಪೇ... ಆತನ ಅಪರಾಧಗಳಿಗೆ ತಕ್ಕ ಶಿಕ್ಷೆಯಾಗಿದೆ' ಎಂದು ಕುಖ್ಯಾತ ರೌಡಿ ವಿಕಾಸ್​ ದುಬೆಯ ಹೆಂಡತಿ ತನ್ನ ಗಂಡನ ಅಂತ್ಯಕ್ರಿಯೆ ವೇಳೆ ಆಕ್ರೋಶ ಹೊರಹಾಕಿದ್ದಾರೆ. ವಿಕಾಸ್​ ದುಬೆ ಮೇಲೆ ನಿನ್ನೆ ಬೆಳಗ್ಗೆ ಉತ್ತರ ಪ್ರದೇಶದ ಕಾನ್ಪುರದ ಬಳಿ ಪೊಲೀಸರು ಎನ್​ಕೌಂಟರ್ ನಡೆಸಿದ್ದರು.

ಪೊಲೀಸ್ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯ ಅಂತ್ಯಕ್ರಿಯೆಯನ್ನು ನಿನ್ನೆ ಬಿಗಿ ಭದ್ರತೆಯಲ್ಲಿ ನೆರವೇರಿಸಲಾಯಿತು. ಈ ವೇಳೆ ಪೊಲೀಸರು ಮತ್ತು ಮಾಧ್ಯಮಗಳ ಮೇಲೆ ವಿಕಾಸ್​ ದುಬೆಯ ಹೆಂಡತಿ ರಿಚಾ ಹರಿಹಾಯ್ದ ಘಟನೆಯೂ ನಡೆಯಿತು. ವಿಕಾಸ್​ ದುಬೆಯವರ ದುರಂತ ಅಂತ್ಯದ ಬಗ್ಗೆ ಮಾಧ್ಯಮಗಳು ರಿಚಾ ಅವರ ಬಳಿ ಪ್ರತಿಕ್ರಿಯೆ ಕೇಳಿದರು. ಈ ವೇಳೆ ಕೋಪದಿಂದ ಮಾಧ್ಯಮಗಳ ವಿರುದ್ಧ ಕಿರುಚಾಡಿದ ರಿಚಾ, 'ಹೌದು, ಹೌದು, ಹೌದು ನನ್ನ ಗಂಡ ತಪ್ಪು ಮಾಡಿದ್ದ. ಇದೇ ರೀತಿ ಸಾಯಬೇಕೆಂಬುದು ಆತನ ಹಣೆಬರಹದಲ್ಲಿತ್ತು' ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Karnataka Rain: ಭಾರೀ ಮಳೆಯಿಂದ ಕೊಡಗಿನಲ್ಲಿ ರೆಡ್ ಅಲರ್ಟ್​ ಘೋಷಣೆ; ಕರಾವಳಿಯಲ್ಲಿ ಇನ್ನೆರಡು ದಿನ ಆರೆಂಜ್ ಅಲರ್ಟ್​

ಅಲ್ಲದೆ, ವಿಕಾಸ್​ ದುಬೆ ಎನ್​ಕೌಂಟರ್​ಗೆ ಮಾಧ್ಯಮಗಳೂ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇವೇಳೆ ವಿಕಾಸ್​ ದುಬೆ ಅಪ್ಪ ರಾಮ್​ ಕುಮಾರ್ ದುಬೆ ತಾವು ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದರು. ಹೀಗಾಗಿ, ವಿಕಾಸ್​ ದುಬೆಯ ಭಾವ ದಿನೇಶ್ ತಿವಾರಿ ಅಂತ್ಯಕ್ರಿಯೆ ನೆರವೇರಿಸಿದರು.

ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್​ಸ್ಟರ್ ವಿಕಾಸ್​ ದುಬೆಯನ್ನು ಬಂಧಿಸಿ ಕಾನ್ಪುರಕ್ಕೆ ಕರೆದೊಯ್ಯುವಾಗ ಪೊಲೀಸ್​ ವಾಹನ ಪಲ್ಟಿ ಹೊಡೆದಿತ್ತು. ಈ ವೇಳೆ ಪೊಲೀಸರ ಬಳಿಯಿದ್ದ ಗನ್ ಎತ್ತಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದ ವಿಕಾಸ್​ ದುಬೆಯನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿತ್ತು. ಗುರುವಾರ ಮಧ್ಯಪ್ರದೇಶದಲ್ಲಿ ವಿಕಾಸ್​ ದುಬೆಯನ್ನು ಬಂಧಿಸಲಾಗಿತ್ತು. ಆತನನ್ನು ಶುಕ್ರವಾರ ಬೆಳಗ್ಗೆ ಉಜ್ಜಯಿನಿಯಿಂದ ಕಾನ್ಪುರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ಅಪಘಾತ ಸಂಭವಿಸಿತ್ತು. ಆತ್ಮರಕ್ಷಣೆಗಾಗಿ ಎನ್‌ಕೌಂಟರ್‌ ಮಾಡಲಾಗಿದೆ ಎಂದು ಕಾನ್ಪುರ ಪೊಲೀಸರು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Vikas Dubey: ವಿಕಾಸ್​ ದುಬೆ ಎನ್​ಕೌಂಟರ್; ಎಮ್ಮೆಗಳು ಅಡ್ಡ ಬಂದಿದ್ದರಿಂದ ಕಾರು ಪಲ್ಟಿಯಾಯ್ತು ಎಂದ ಪೊಲೀಸರು
ರಸ್ತೆಗೆ ಎಮ್ಮೆಗಳು ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿತ್ತು. ಆಗ ನಮ್ಮ ಸಿಬ್ಬಂದಿಯ ಬಳಿಯಿದ್ದ ಗನ್ ಕಿತ್ತುಕೊಂಡು ವಿಕಾಸ್​ ದುಬೆ ಪರಾರಿಯಾಗಲು ಪ್ರಯತ್ನಿಸಿದ. ಆಗ ಪೊಲೀಸರು ಆತನನ್ನು ಸುತ್ತುವರೆದು ಶರಣಾಗುವಂತೆ ಎಚ್ಚರಿಸಿದರಾದರೂ ಆತ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ. ಈ ವೇಳೆ ದುಬೆಯನ್ನು ಎನ್​ಕೌಂಟರ್ ಮಾಡಬೇಕಾಗಿ ಬಂತು ಎಂದು ಪೊಲೀಸರು ಹೇಳಿದ್ದರು.
Published by: Sushma Chakre
First published: July 11, 2020, 9:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading