ತನಗೆ ಅಂಟಿರುವ ‘ಪರಾರಿ’ ಪಟ್ಟ ಕಳಚುವಂತೆ ಸುಪ್ರೀಂ ಕೋರ್ಟ್​ಗೆ ವಿಜಯ್ ಮಲ್ಯ ಮನವಿ

ಕಿಂಗ್​ಫಿಶರ್ ಏರ್​ಲೈನ್ಸ್ ಸಂಸ್ಥೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ತಾನು ಬ್ಯಾಂಕುಗಳಿಂದ ಸಾಲ ಪಡೆದಿದ್ದು. ಅಲ್ಲದೇ, ತನ್ನ ಯುನೈಟೆಡ್ ಬ್ರಿವೆರೀಸ್ ಸಂಸ್ಥೆಯಿಂದ ಸರಕಾರಕ್ಕೆ ಸಾಕಷ್ಟು ಲಾಭ ಸಿಕ್ಕಿದೆ ಎಂಬುದು ಮಲ್ಯ ವಾದ.

Vijayasarthy SN | news18india
Updated:December 6, 2018, 10:07 PM IST
ತನಗೆ ಅಂಟಿರುವ ‘ಪರಾರಿ’ ಪಟ್ಟ ಕಳಚುವಂತೆ ಸುಪ್ರೀಂ ಕೋರ್ಟ್​ಗೆ ವಿಜಯ್ ಮಲ್ಯ ಮನವಿ
ವಿಜಯ್ ಮಲ್ಯ
Vijayasarthy SN | news18india
Updated: December 6, 2018, 10:07 PM IST
ನವದೆಹಲಿ(ಡಿ. 06): ಬ್ರಿಟನ್​ನಿಂದ ಗಡೀಪಾರಾಗುವ ಭೀತಿಯಲ್ಲಿರುವ ವಿಜಯ್ ಮಲ್ಯಗೆ ಆದಷ್ಟೂ ಬೇಗ ತನ್ನ ಮೇಲಿನ ಕಳಂಕ ನೀಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ನಿಟ್ಟಿನಲ್ಲಿ, ತನ್ನ ಹೆಸರಿಗೆ ಮೆತ್ತಿಕೊಂಡಿರುವ ‘ಪರಾರಿ’ ಕಳಂಕದಿಂದ ತನ್ನನ್ನು ಮುಕ್ತಗೊಳಿಸಬೇಕೆಂದು ವಿಜಯ್ ಮಲ್ಯ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಭಾರತೀಯ ಬ್ಯಾಂಕುಗಳಿಂದ 9 ಸಾವಿರ ಕೋಟಿ ರೂ ಸಾಲ ಪಡೆದು ವಾಪಸ್ ಮಾಡದೆ ದೇಶಬಿಟ್ಟು ಹೋಗಿರುವ ವಿಜಯ್ ಮಲ್ಯ ಅವರನ್ನು ಜಾರಿ ನಿರ್ದೇಶನಾಲಯವು “ಪರಾರಿಯಾಗಿರುವ ಆರ್ಥಿಕ ಅಪರಾಧಿ” ಎಂದು ಕೇಸ್ ದಾಖಲಿಸಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಲ್ಯಗೆ ತಲೆನೋವು ತರುತ್ತಿದೆ. ಈಗ ಮಲ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆ ಶುಕ್ರವಾರ ಕೈಗೆತ್ತುಕೊಳ್ಳಲಿದೆ.

ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತ ಸರಕಾರ ಮಾಡಿಕೊಂಡಿರುವ ಮನವಿಯ ಕುರಿತು ಬ್ರಿಟನ್​ನ ವೆಸ್ಟ್​ಮಿನ್ಸ್​ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್​ನ ನ್ಯಾಯಾಧೀಶರು ಮುಂದಿನ ವಾರ ತೀರ್ಪು ನೀಡಲಿದ್ದಾರೆ. ಅಷ್ಟರೊಳಗೆ ವಿಜಯ್ ಮಲ್ಯ ತನ್ನ ಮೇಲಿರುವ ಕೆಲ ಕಳಂಕಗಳನ್ನ ನೀಗಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ, ವಿಜಯ್ ಮಲ್ಯ ಅವರು ತಾನು ತೆಗೆದುಕೊಂಡಿರುವ ಎಲ್ಲ ಸಾಲಗಳನ್ನು ವಾಪಸ್ ಮಾಡುವುದಾಗಿ ಭಾರತೀಯ ಅಧಿಕಾರಿಗಳಿಗೆ ಕೆಲವಾರು ಬಾರಿ ಮನವಿ ಮಾಡಿಕೊಂಡಿದ್ದೂ ಆಗಿದೆ.

ಕಿಂಗ್​ಫಿಶರ್ ಏರ್​ಲೈನ್ಸ್ ಸಂಸ್ಥೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ತಾನು ಬ್ಯಾಂಕುಗಳಿಂದ ಸಾಲ ಪಡೆದಿದ್ದು. ಅದರಿಂದ ತನಗೇನೂ ವೈಯಕ್ತಿಕ ಲಾಭ ಮಾಡಿಕೊಂಡಿಲ್ಲ. ಅಲ್ಲದೇ, ತನ್ನ ಯುನೈಟೆಡ್ ಬ್ರಿವೆರೀಸ್ ಸಂಸ್ಥೆಯಿಂದ ಸರಕಾರಕ್ಕೆ ಸಾಕಷ್ಟು ಲಾಭ ಸಿಕ್ಕಿದೆ ಎಂಬುದು ಮಲ್ಯ ವಾದ.

ಆದರೆ, ಇ.ಡಿ. ಮಾತ್ರ ಯಾವುದಕ್ಕೂ ಜಗ್ಗದೇ ತನ್ನ ಕಾರ್ಯಾಚರಣೆ ಮುಂದುವರಿಸಿದೆ. ಹಣ ಅವ್ಯವಹಾರ ನಿಯಂತ್ರಣ ಕಾಯ್ದೆಯ (ಪಿಎಂಎಲ್​ಎ) ನ್ಯಾಯಾಲಯದಲ್ಲಿ ವಿಜಯ್ ಮಲ್ಯ ಅವರನ್ನು ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಜೂನ್ 22ರಂದು ಇ.ಡಿ. ಮನವಿ ಸಲ್ಲಿಸಿತ್ತು. ಹಾಗೆಯೇ, ವಿಜಯ್ ಮಲ್ಯಗೆ ಸೇರಿದ 12,500 ಕೋಟಿ ರೂ ಮೌಲ್ಯದ ಆಸ್ತಿಯೆಲ್ಲವನ್ನೂ ಜಫ್ತಿ ಮಾಡಲು ಅನುಮತಿಗೆ ಕೋರಿಗೆ ಸಲ್ಲಿಸಿತ್ತು. ಪಿಎಂಎಲ್​ಎ ಕೋರ್ಟ್ ಇ.ಡಿ. ಸಲ್ಲಿಸಿದ ಮನವಿಯನ್ನು ಪರಿಗಣಿಸಿ ವಿಚಾರಣೆ ನಡೆಸುತ್ತಿದೆ.

ವಿಜಯ್ ಮಲ್ಯ ಅವರು ಸ್ಟೇಟ್ ಬ್ಯಾಂಕ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕುಗಳಿಂದ 9 ಸಾವಿರ ಕೋಟಿ ರೂ ಸಾಲ ಪಡೆದುಕೊಂಡು, ಬಾಕಿ ತೀರಿಸಿಯೇ ಇಲ್ಲ. 2016ರ ಮಾರ್ಚ್ 2ರಂದು ಮಲ್ಯ ಭಾರತವನ್ನು ತೊರೆದು ಹೋಗುತ್ತಾರೆ. ಲಂಡನ್​ನಲ್ಲಿರುವ ಮಲ್ಯ ಆ ದೇಶದ ರಕ್ಷಣೆಯಲ್ಲಿದ್ದಾರೆ. ಆರ್ಥಿಕ ಅಪರಾಧ ಎಸಗಿರುವ ಮಲ್ಯ ಅವರನ್ನು ಗಡೀಪಾರು ಮಾಡಿ ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಭಾರತ ಸರಕಾರವು ವೆಸ್ಟ್​ಮಿನ್​ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿ ಮನವಿ ಮಾಡಿತ್ತು. ಈ ಕೇಸ್​ನ ವಿಚಾರಣೆ ಸೆಪ್ಟೆಂಬರ್​ನಲ್ಲೇ ಮುಕ್ತಾಯವಾಗಿದೆ. ಡಿ. 10ರಂದು ಈ ಬ್ರಿಟನ್ ಕೋರ್ಟ್ ತನ್ನ ತೀರ್ಪು ನೀಡಲಿದೆ.
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ