ಭಾರತದಿಂದ ಪರಾರಿಯಾಗುವ ಮುನ್ನ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದ ಮಲ್ಯ; ರಾಹುಲ್ ಗಾಂಧಿ

news18
Updated:August 26, 2018, 8:25 AM IST
ಭಾರತದಿಂದ ಪರಾರಿಯಾಗುವ ಮುನ್ನ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದ ಮಲ್ಯ; ರಾಹುಲ್ ಗಾಂಧಿ
news18
Updated: August 26, 2018, 8:25 AM IST
ನ್ಯೂಸ್ 18 ಕನ್ನಡ

ಲಂಡನ್ (ಆ.26): ಸಾವಿರಾರು ಕೋಟಿ ರೂ. ವಂಚಿಸಿ ಭಾರತದಿಂದ ಪರಾರಿಯಾಗುವ ಮುನ್ನ ವಿಜಯ್ ಮಲ್ಯ ಬಿಜೆಪಿಯ ನಾಯಕರನ್ನು ಭೇಟಿಯಾಗಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಆರೋಪ ಮಾಡಿದ್ದಾರೆ. ಆದರೆ, ಮಲ್ಯ ಭೇಟಿ ಮಾಡಿದ್ದ ಆ ಬಿಜೆಪಿ ನಾಯಕ ಯಾರು ಎಂಬುದನ್ನು ಮಾತ್ರ ಅವರು ತಿಳಿಸಲಿಲ್ಲ.

ಲಂಡನ್​ನಲ್ಲಿ ಏರ್ಪಡಿಸಿದ್ದ ಭಾರತೀಯ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಮಲ್ಯ ಅವರಂತಹ ಉದ್ಯಮಿಗಳಿಗೆ ಆದ್ಯತೆ ನೀಡುತ್ತಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಮಲ್ಯ ಭಾರತದಿಂದ ಪಲಾಯನಗೈಯ್ಯುವ ಮುನ್ನ ಅವರು ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಿದ್ದರು. ನಾನು ಅವರ ಹೆಸರುಗಳನ್ನು ಹೇಳಲಾರೆ. ಇದಕ್ಕೆ ಬಿಜೆಪಿಯೇ ಉತ್ತರಿಸಬೇಕು ಎಂದು ರಾಹುಲ್ ಸವಾಲು ಹಾಕಿದರು.

ಬ್ಯಾಂಕ್​ಗಳಿಂದ 9 ಸಾವಿರ ಕೋಟಿ ರೂ. ಸಾಲ ಪಡೆದು ಮರುಪಾವತಿಸದೆ ವಿಜಯ್ ಮಲ್ಯ 2016ರ ಮಾರ್ಚ್​ನಲ್ಲಿ ಭಾರತದಿಂದ ಪರಾರಿಯಾಗಿ ಲಂಡನ್​ನಲ್ಲಿ ತಲೆಮರೆಸಿಕೊಂಡಿದ್ದರು.

ಆದಾಗ್ಯೂ, ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರಲು ಸಂಬಂಧಿತ ಸಂಸ್ಥೆಗಳು ಸಾಕಷ್ಟು ಪ್ರಯತ್ನ ನಡೆಸಿವೆ. ಮಲ್ಯರನ್ನು ಹಸ್ತಾಂತರಿಸುವಂತೆ ಸಿಬಿಐ ಇಂಗ್ಲೆಂಡ್​ಗೆ ಮನವಿ ಮಾಡಿತ್ತು. ಆದರೆ, ಭಾರತದ ಜೈಲುಗಳಲ್ಲಿ ಸೂರ್ಯನ ಬೆಳಕು ಇಲ್ಲ, ಶುದ್ಧ ಗಾಳಿ ಇಲ್ಲ ಎಂದು ಮಲ್ಯ ಲಂಡನ್ ನ್ಯಾಯಾಲಯದಲ್ಲಿ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ, ಭಾರತದ ಜೈಲಿನ ವಿಡಿಯೋವನ್ನು ಕಳುಹಿಸುವಂತೆ ನ್ಯಾಯಾಲಯ ಸಿಬಿಐಅನ್ನು ಕೇಳಿತ್ತು. ಅದರಂತೆ ಸಿಬಿಐ ಕೂಡ ಮುಂಬೈನ ಅರ್ಥರ್ ರಸ್ತೆಯ ಜೈಲಿನ ಬರಾಕ್​ ನಂ.12ರಲ್ಲಿ ಇರುವ ಸೌಲಭ್ಯಗಳನ್ನು ಚಿತ್ರೀಕರಿಸಿ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಮಲ್ಯರನ್ನು ಬಂಧಿಯಾಗಿ ಇಡುವ ಈ ಜೈಲು ಕೋಣೆಯಲ್ಲಿ ಟೀವಿ, ಅಟ್ಯಾಚ್ಡ್ ಟಾಯ್ಲೆಟ್, ಬೆಡ್ ಮತ್ತು ಸಾಕಷ್ಟು ಶುದ್ಧ ಗಾಳಿ ಬರುವ ವ್ಯವಸ್ಥೆ ಇದೆ. ಈ ಪ್ರಕರಣದ ವಿಚಾರಣೆ ಮುಂದಿನ ಸೆಪ್ಟೆಂಬರ್ 12ರಂದು ನಡೆಯಲಿದೆ.
Loading...

ಈ ಪ್ರಕರಣ ಸಂಬಂಧವೂ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಭಾರತದ ಜೈಲುಗಳು ಕಠಿಣ ಸ್ಥಳಗಳು. ವಿಜಯ್ ಮಲ್ಯ ಅವರಂತಹ ಆರ್ಥಿಕ ಭ್ರಷ್ಟಾಚಾರಿಗೆ ವಿಶೇಷವಾಗಿ ಉಪಚರಿಸುವ ಅವಶ್ಯಕತೆ ಇಲ್ಲ. ಎಲ್ಲ ಖೈದಿಗಳನ್ನು ಉಪಚರಿಸುವಂತೆ ಮಲ್ಯರನ್ನು ಉಪಚರಿಸಬೇಕು ಎಂದು ಹೇಳಿದ್ದಾರೆ.

ಮೋದಿ ಸರ್ಕಾರ ವಿಜಯ್​ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಂತಹ ಆರ್ಥಿಕ ಅಪರಾಧಿಗಳಿಗೆ ಸಹನಾಭೂತಿ ತೋರುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಜೊತೆಗೆ ಪ್ರಧಾನಿ ಸಂಬಂಧ ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...