TamilNadu Politics: ನಟ ರಾಜಕಾರಣಿ ಕಮಲಹಾಸನ್​ ಪಕ್ಷದ ಉಪಾಧ್ಯಕ್ಷ ಅರುಣಾಚಲಂ ಬಿಜೆಪಿಗೆ ಸೇರ್ಪಡೆ!

ಚೆನ್ನೈನ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಮ್ಮುಖದಲ್ಲಿ ಕಮಲಹಾಸನ್​ ನೇತೃತ್ವದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಪ್ರಧಾನ ಕಾರ್ಯದರ್ಶಿ ಎ. ಅರುಣಾಚಲಂ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಕಮಲಹಾಸನ್.

ಕಮಲಹಾಸನ್.

  • Share this:
    ಚೆನ್ನೈ (ಡಿಸೆಂಬರ್​ 25): ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳೂ ಚುನಾವಣಾ ಪ್ರಚಾರದಲ್ಲಿ ನಿರತವಾಗಿವೆ. ಆದರೆ, ಈ ಬಾರಿ ತಮಿಳುನಾಡಿನಲ್ಲಿ ಖಾತೆ ತೆಗೆಯಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿಗೆ ದ್ರಾವಿಡ ನಾಡಿನಲ್ಲಿ ತಳಮಟ್ಟದಿಂದ ಪಕ್ಷ ಬಲವಾಗಿಲ್ಲ. ಹೀಗಾಗಿ ಚಿತ್ರ ನಟ ನಟಿ ಮತ್ತು ಬೇರೆ ಪಕ್ಷಗಳ ಹಿರಿಯ ನಾಯಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಯಾವ ಪಕ್ಷದಲ್ಲಿ ಸಣ್ಣ ಒಡಕಾದರೂ ಆ ಪಕ್ಷದ ಬಂಡಾಯ ನಾಯಕರಿಗೆ ಬಿಜೆಪಿ ರೆಡ್​ ಕಾರ್ಪೆಟ್ ಹಾಕಿ ಕಾಯುತ್ತಿದೆ. ಅವರನ್ನು ತಮ್ಮ ಪಕ್ಷಕ್ಕೆ ಪಕ್ಷಾಂತರ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಪರಿಸ್ಥಿತಿ ಹೀಗಿರುವಾಗ ಪ್ರಸ್ತುತ ಬೆಳವಣಿಗೆಯಲ್ಲಿ ಚಿತ್ರ ನಟ ರಾಜಕಾರಣಿ ಕಮಲಹಾಸನ್​ ಅವರ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣಾಚಲಂ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯುವಲ್ಲಿ ಸ್ಥಳೀಯ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.

    2021ರ ತಮಿಳುನಾಡು ವಿಧಾನಸಭೆ ಚುನಾವಣೆ ಕಣ ದಿನ ದಿನಕ್ಕೂ ರಂಗೇರುತ್ತಿದೆ. ಸಿನಿಮಾ ನಟರು, ಪಕ್ಷಗಳ ಒಡಕುಗಳು, ಹೊಸ ಹೊಸ ಪಕ್ಷಗಳ ಹುಟ್ಟು ಇವುಗಳ ಆಚೆಗೂ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ತನ್ನ ಹಳೆಯ ಅಭ್ಯಾಸದಂತೆ ಇತರ ಪಕ್ಷಗಳಿಂದ ಮುಖಂಡರನ್ನು ಸೆಳೆಯಲು ಮುಂದಾಗಿದೆ.

    ನಟ, ರಾಜಕಾರಣಿ ಕಮಲ್ ಹಾಸನ್ ಈ ಬಾರಿಯ ವಿಧಾನಸಭಾ ಚುನಾವಣಾ ಆಖಾಡಕ್ಕೆ ಇಳಿದಿದ್ದಾರೆ. ಆದರೆ, ಅವರ ಮಕ್ಕಳ ನಿಧಿ ಮಯ್ಯಂ ಪಕ್ಷದ ನಾಯಕ, ಪ್ರಧಾನ ಕಾರ್ಯದರ್ಶಿ ಎ. ಅರುಣಾಚಲಂ ಇದೀಗ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಅಚ್ಚರಿಕೆ ಕಾರಣವಾಗಿದ್ದಾರೆ.

    ಕಮಲ್ ಹಾಸನ್ ತಮಿಳುನಾಡಿನಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರ ನಡೆಸುತ್ತಿರುವ ಹೊತ್ತಿನಲ್ಲೇ ತನ್ನ ಪಕ್ಷದ ಹಿರಿಯ ಮುಖಂಡರು ಭಾರತೀಯ ಜನತಾ ಪಾಟಿಗೆ ಸೇರ್ಪಡೆಗೊಂಡಿರುವುದು ಕಮಲ್ ಹಾಸನ್‌ ಅವರಿಗೆ ಚುನಾವಣೆಗೂ ಮುನ್ನವೇ ಹಿನ್ನಡೆಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

    ಚೆನ್ನೈನ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಮ್ಮುಖದಲ್ಲಿ ಕಮಲಹಾಸನ್​ ನೇತೃತ್ವದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಪ್ರಧಾನ ಕಾರ್ಯದರ್ಶಿ ಎ. ಅರುಣಾಚಲಂ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

    ಅರುಣಾಚಲಂ, ತೂತುಕುಡಿ ಜಿಲ್ಲೆಯ ಒಂದು ಹಳ್ಳಿಯವರಾಗಿದ್ದು, ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ್ ನೀಧಿ ಮಯ್ಯಂಗೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚುನಾವಣಾ ಪ್ರಚಾರ ಆರಂಭಿಸಿದ್ದ ವೇಳೆ ಪಕ್ಷದ ಮುಖಂಡ ಕಮಲ್ ಹಾಸನ್, ಪ್ರಚಾರ ಕಾರ್ಯಗಳಲ್ಲಿ ಅರುಣಾಚಲಂ ಅವರಿಗೆ ಪ್ರಾಮುಖ್ಯತೆ ನೀಡಲಾಗಿಲ್ಲ ಮತ್ತು ಕಮಲ್ ಹಾಸನ್ ಪಕ್ಷ ಮುನ್ನಡೆಸುತ್ತಿರುವ ಬಗ್ಗೆ ಇತರರಿಗೆ ಅಸಮಾಧಾನ ಇದೆ ಎಂದು ಮಾಹಿತಿ ದೊರೆತಿದೆ.

    ಕಮಲಹಾಸನ್ ಈ ತಿಂಗಳ ಆರಂಭದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಈಗ ಎರಡನೇ ಹಂತದಲ್ಲಿದೆ ಪ್ರಚಾರ ಕಾರ್ಯ ನಡೆಯುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ತೀವ್ರ ಟೀಕೆ, ಆರೋಪಗಳನ್ನು ಮಾಡುತ್ತಿದ್ದಾರೆ.

    ಇದನ್ನೂ ಓದಿ : ರೈತರ ಭೂಮಿ ಕಬಳಿಸುತ್ತೇವೆಂಬ ಸುಳ್ಳು ಸೃಷ್ಟಿ: ಪಿಎಂ ಕಿಸಾನ್ ಕಾರ್ಯಕ್ರಮದಲ್ಲಿ ಪ್ರಧಾನಿ ಆಕ್ರೋಶ

    ತಮಿಳುನಾಡು ರಾಜಕೀಯದಲ್ಲಿ ವೇಗದ ಬೆಳವಣಿಗೆಗಳು ನಡೆಯುತ್ತಿವೆ. ಚುನಾವಣೆಗೆ ಕೆಲವೇ ದಿನಗಳಲ್ಲಿ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದ್ದು, ಎಲ್ಲ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ಆರಂಭಿಸಿವೆ. ನಟ ರಜನಿಕಾಂತ್ ಇದೇ ತಿಂಗಳ ಅಂತ್ಯದಲ್ಲಿ ತಮ್ಮ ಪಕ್ಷವನ್ನು ಘೋಷಣೆ ಮಾಡಲಿದ್ದಾರೆ.

    ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ಒಟ್ಟಿಗೆ ಚುನಾವಣೆ ಎದುರಿಸುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಇದರ ಬಗ್ಗೆ ಇನ್ನು ಯಾವುದೇ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಿಲ್ಲ. ಆದರೆ, “ನಮ್ಮ ಸಿದ್ಧಾಂತವು ಹೊಂದಿಕೆಯಾಗುವಂತಿದ್ದರೆ, ನಮ್ಮ ಮೈತ್ರಿಯಿಂದ ಜನರಿಗೆ ಪ್ರಯೋಜನವಾಗುವಂತಿದ್ದರೇ, ನಮ್ಮ ಅಹಂಕಾರವನ್ನು ಬದಿಗಿಟ್ಟು ಪರಸ್ಪರ ಸಹಕರಿಸಲು ನಾವು ಸಿದ್ಧ” ಎಂದು ಕಮಲ್ ಹಾಸನ್ ಸುದ್ದಿಗಾರರಿಗೆ ತಿಳಿಸಿದ್ದರು.
    Published by:MAshok Kumar
    First published: