ನವದೆಹಲಿ: ಧರ್ಮಸ್ಥಳದ (Dharmasthala) ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Veerendra Heggade) ಗುರುವಾರ ರಾಜ್ಯಸಭೆಯಲ್ಲಿ (Rajya Shaba) ಭಾಗವಹಿಸಿ ಭಾಷಣ ಮಾಡಿದ್ದು, ನರೇಂದ್ರ ಮೋದಿ (Narendra Modi) ಸರ್ಕಾರ, ಅದರ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಸರ್ಕಾರದಿಂದ ದೇಶದಲ್ಲಿ ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿದೆ. ಯೋಗ (Yoga) ಮತ್ತು ಆಯುರ್ವೇದ (Ayurved) ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ. ಭಾರತೀಯ ಆಧ್ಯಾತ್ಮಿಕ ಗುರುಗಳು ವಿದೇಶಕ್ಕೆ ಹೋಗಿ ಅಲ್ಲಿ ನಮ್ಮ ಸಂಸ್ಕೃತಿಯನ್ನು ಪಸರಿಸುತ್ತಿದ್ದಾರೆ. ಭಾರತದ ಸಂಸ್ಕೃತಿ, ಆಧ್ಯಾತ್ಮಿಕತೆ ಬಗ್ಗೆ ತಿಳಿಸುತ್ತಿದ್ದಾರೆ. ಇದು ನಿಜವಾದ ಭಾರತೀಯರಯ ಹೆಮ್ಮೆ ಪಡೆಯುವಂತಹ ವಿಚಾರ ಎಂದು ತಿಳಿಸಿದರು.
ರಾಜ್ಯಸಭೆ ಕಲಾಪದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆ ವೇಳೆ ಮಾತನಾಡಿದ ಹೆಗ್ಗಡೆಯವರು " ಮೋದಿ ಸರ್ಕಾರ ಕಾಯಕ ಯೋಗಿ ಬಸವಣ್ಣನವರ ಕಾಯಕವೇ ಕೈಲಾಸದಡಿ ಕೆಲಸ ಮಾಡುತ್ತಿದೆ. ಭಾರತದ ಮೇಲೆ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ಬೀರುತ್ತಿದೆ. ಇದೀಗ ಭಾರತದ ಯೋಗ ಮತ್ತು ಆಯುರ್ವೇದ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಪ್ರಭಾವ ಭೀರುತ್ತಿದೆ. ಸ್ವತಃ ಮೋದಿಯವರೇ ಯೋಗವನ್ನು ಪ್ರಚಾರ ಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮೀಣ ಮಟ್ಟದಿಂದಲೇ ಉತ್ತಮ ಬದಲಾವಣೆ ತರಲಾಗಿದೆ, ಮೋದಿಯವರ ಏಕ್ ಭಾರತ್ ಶ್ರೇಷ್ಠ ಭಾರತ್ ಕಲ್ಪನೆಯನ್ನು ಅದ್ಭುತವಾಗಿದೆ. ಭಾಷಗಳು ನಮ್ಮನ್ನು ಬೇರ್ಪಡಿಸಲ್ಲ, ಬದಲಾಗಿ ಒಂದು ಗೂಡಿಸುತ್ತದೆ ಎಂದರು.
ಧಾರ್ಮಿಕ ಕ್ಷೇತ್ರದಲ್ಲಿ ಬದಲಾವಣೆ
ಅಭಿವೃದ್ಧಿ ವಿಚಾರವಾಗಿ ಮಾತನಾಡಿ, ಸರ್ಕಾರದ ಯೋಜನೆಗಳು ಜನಪರವಾಗಿವೆ. ಸಾಮಾನ್ಯ ಜನರ ಜೀವನದ ಗುಣಮಟ್ಟ ಅಭಿವೃದ್ಧಿಯಾಗಲು ಸಹಕಾರಿಯಾಗಿದೆ ಎಂದ ಅವರು ಧಾರ್ಮಿಕ ಕ್ಷೇತ್ರದಲ್ಲಿನ ಬದಲಾವಣೆಗಳನ್ನು ನೋಡಿ ತುಂಬಾ ಖುಷಿಯಾಗುತ್ತಿದೆ. ಕಾಶಿ, ಅಯೋಧ್ಯೆ, ಕೇದಾರ, ವಾರಣಾಸಿಯಲ್ಲಿ ಬದಲಾವಣೆಯಾಗಿದೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ಕಡೆಗಣಿಸುತ್ತಿಲ್ಲ ಎನ್ನುವುದು ನಾವು ಹೆಮ್ಮೆ ಪಡುವ ವಿಚಾರ ಎಂದು ತಿಳಿಸಿದರು.
ಇದನ್ನೂ ಓದಿ: Narendra Modi: ಯುಪಿಎ ಆಡಳಿತದಲ್ಲಿ ಭ್ರಷ್ಟಾಚಾರ, ಹಣದುಬ್ಬರ ಹೆಚ್ಚಾಗಿತ್ತು: ಪ್ರಧಾನಿ ವಾಗ್ದಾಳಿ
ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದ ಹೆಗ್ಗಡೆ
ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ವೀರೇಂದ್ರ ಹೆಗ್ಗಡೆಯವರು ಪ್ರಮಾಣ ವಚನವನ್ನು ಕನ್ನಡದಲ್ಲಿ ಸ್ವೀಕರಿಸಿದ್ದರು. ಕನ್ನಡದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಗೆ ಬಿಳಿ ಬಣ್ಣದ ಪಂಚೆ, ಶರ್ಟ್, ಶಲ್ಯ ಧರಿಸಿ ಹೋಗಿದ್ದು ವಿಶೇಷವಾಗಿತ್ತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ನಮಸ್ಕರಿಸಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ, ಸಹಿ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಿದರು.
ಕಳೆದ ಜುಲೈನಲ್ಲಿ ಕೇಂದ್ರ ಸರ್ಕಾರ ವೀರೇಂದ್ರ ಹೆಗ್ಗಡೆ ಅವರ ಜೊತೆಗೆ ಸಂಗೀತ ನಿರ್ದೇಶಕ ಇಳೆಯರಾಜ, ಅಥ್ಲೀಟ್ ಪಿಟಿ ಉಷಾ, ಹಾಗೂ ಚಲನಚಿತ್ರ ಕಥೆ-ಸಂಭಾಷಣೆಕಾರ ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು.
ಕನ್ನಡದಲ್ಲಿ ಮಾತನಾಡಿದ ಜಗ್ಗೇಶ್
ರಾಜ್ಯಸಭೆಯಲ್ಲಿ ಭಾಗವಹಿಸಿದ್ದ ನಟ ಜಗ್ಗೇಶ್ ಕೂಡ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು. ಎಲ್ಲಾದರು ಇರು, ಎಂತಾದರೂ ಇರು, ಎಂದೆಂದಿಗೂ ನೀನು ಕನ್ನಡಿಗನಾಗಿರು ಎಂದು ಕುವೆಂಪು ಅವರ ಕವನವನ್ನು ವಾಚಿಸುವ ಮೂಲಕ ಜಗ್ಗೇಶ್ ಮಾತು ಆರಂಭಿಸಿದ್ದು ವಿಶೇಷವಾಗಿತ್ತು.
ಮೋದಿ ಅವರು ಅದ್ಭುತವಾದ ಅಭಿವೃದ್ಧಿ ಭಾರತದ ಕಲ್ಪನೆ, ದೇಶಕ್ಕಾಗಿ ಅವರು ಪಡುವ ಶ್ರಮದ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಮೋದಿಯವರು ಭಾರತವನ್ನು ಅದ್ಭುತವಾಗಿ ಕಟ್ಟುತ್ತಿದ್ದರೆ ಕೆಲಸಕ್ಕೆ ಬಾರದ ಒಂದು ವಿಚಾರವನ್ನು ತೆಗೆದುಕೊಂದು ಸದನದಲ್ಲಿ ಆಡುವ ಮಾತಿಗೆ ಮನ್ನಣೆ ಸಿಗದಂತೆ ಮಾಡಲಾಗುತ್ತಿದೆ ಎಂದು ಅದಾನಿ ವಿಚಾರವಾಗಿ ನಡೆದ ಗದ್ದಲಕ್ಕೆ ಬೇಸರ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳಿಂದ ಗದ್ದಲ
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯುತ್ತಿದ್ದ ವೇಳೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ವಿರೋಧ ಪಕ್ಷಗಳು ಮೋದಿ ಅದಾನಿ ಭಾಯ್ ಭಾಯ್ ಎಂದು ಘೋಷಣೆ ಕೂಗಿದರು. ಆದರೆ ಮೋದಿ ನೀವು ಕೆರಸರನ್ನು ಎಷ್ಟೇ ಎರಚಿದರೂ ಕಮಲ ಅರಳುತ್ತದೆ ಎಂದು ಹೇಳಿದರು.
ಸರ್ಕಾರದ ಹಲವು ಜನಪರ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಿವೆ. ನಮ್ಮ ಸರ್ಕಾರದಲ್ಲಿ ತಂತ್ರಜ್ಞಾನದ ನೆರವಿನಿಂದ ಕೆಲಸ ಮಾಡುತ್ತಿದ್ದು, ಸಾಮಾನ್ಯ ಜನರಿಗೆ ಆದ್ಯತೆ ನೀಡಿದ್ದೇವೆ. ಕಾಂಗ್ರೆಸ್ ಗರೀಬಿ ಹಠಾವೋ ಘೋಷಣೆ ಮಾಡಿ ನಾಲ್ಕು ದಶಕಗಳೇ ಕಳೆದರೂ ಏನನ್ನು ಮಾಡಿರಲಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬುದು ಕೇಂದ್ರ ಸರ್ಕಾರದ ಸಂಕಲ್ಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ