ರೈಲು ಪ್ರಯಾಣವೆಂದರೆ ನೆನಪುಗಳ ಬುತ್ತಿ ಎಂದೇ ಹೇಳಬಹುದು. ಅಗಲವಾದ ಕಿಟಕಿಯೊಳಗಿನಿಂದ ರೈಲಿನ ವೇಗಕ್ಕೆ ಓಡುವ ಹೊರಗಿನ ಪ್ರಪಂಚವನ್ನು ಕಣ್ತುಂಬಿಕೊಳ್ಳುವುದು, ಓಡಾಡಲು ವಿಶಾಲವಾದ ಜಾಗ, ಕಾಲು ಚಾಚಿ ಮಲಗುವಷ್ಟು ಅನುಕೂಲ, ಸ್ನೇಹಿತರು ಕುಟುಂಬದವರೊಂದಿಗೆ ಹರಟೆ, ಜೊತೆಯಾಗಿ ಮನೆಯಿಂದ ತಂದ ತಿಂಡಿ ಆಹಾರ ಪದಾರ್ಥಗಳನ್ನು ಸೇವಿಸುವುದು ಅಂತೆಯೇ ರೈಲಿನಲ್ಲಿಯೇ ಮಾರಾಟವಾಗುವ ಚಹಾ, ವಡೆ ಸವಿಯುವುದು, ಕೆಲವೊಮ್ಮೆ ಎಲ್ಲೋ ಹೋಗಬೇಕಿದ್ದವರು ಟ್ರೈನ್ ಅದಲು ಬದಲಾಗಿ ಇನ್ನೆಲ್ಲೋ ಹೋಗೋದು ಹೀಗೆ ರೈಲು ಪ್ರಯಾಣವೆಂಬುದು ತನ್ನದೇ ಸುಂದರ ಅನುಭೂತಿಗಳನ್ನು ಹೊಂದಿದೆ.
ವಂದೇ ಭಾರತ್ ರೈಲು ಸಾಗುವ ವಿಡಿಯೋ ಟ್ವೀಟ್ ಮಾಡಿದ ಪಿಯೂಷ್ ಗೋಯಲ್
ಇದೀಗ ಸರಕಾರ ವಂದೇ ಭಾರತ್ ರೈಲುಗಳನ್ನು ಪರಿಚಯಿಸುವ ಮೂಲಕ ರೈಲು ಪ್ರಯಾಣಕ್ಕೆ ಇನ್ನಷ್ಟು ಗರಿಮೆ ಹಾಗೂ ಹೊಸತನವನ್ನು ತಂದಿದೆ. ಪ್ರಯಾಣಿಕರಿಗೆ ಇನ್ನಷ್ಟು ಸೌಲಭ್ಯಗಳನ್ನು ತಂದಿರುವ ರೈಲ್ವೇ ಸಚಿವಾಲಯ ಆರಾಮ ಪ್ರಯಾಣಕ್ಕಾಗಿ ಹೆಚ್ಚು ವೇಗದ ವಂದೇ ಭಾರತ್ ರೈಲುಗಳನ್ನು ಪರಿಚಯಿಸಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ವಂದೇ ಭಾರತ್ ರೈಲಿನ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ರೈಲಿನ ಹೊಳೆಯುವ ಬಿಳಿ ಬಣ್ಣ, ಅದು ಹಾದು ಹೋಗುವ ನದಿಯಲ್ಲಿನ ನೀರಿನಲ್ಲಿ ಪ್ರತಿಬಿಂಬತವಾಗಿದ್ದು, ಸುಂದರ ನೋಟವನ್ನು ಕಣ್ತುಂಬಿಸುವಂತೆ ಮಾಡಿದೆ. ವೀಡಿಯೋ 25,000 ಲೈಕ್‌ಗಳನ್ನು ಗಳಿಸಿದೆ ಮತ್ತು 3,000 ಬಾರಿ ಶೇರ್ ಮಾಡಲಾಗಿದೆ.
ಇದನ್ನೂ ಓದಿ: Viral News: ರೈಲ್ವೆ ನಿಲ್ದಾಣದ ಎಲ್ಲಾ ಟಿವಿಗಳಲ್ಲಿ 3 ನಿಮಿಷ ಅಶ್ಲೀಲ ವಿಡಿಯೋ ಪ್ರಸಾರ! ತಬ್ಬಿಬ್ಬಾದ ಪ್ರಯಾಣಿಕರು
ಸಾರ್ವಜನಿಕ ವಾಹನಗಳ ಮುತುವರ್ಜಿ ನಾಗರಿಕರದ್ದಾಗಿದೆ
ಆದರೆ ಇಷ್ಟೆಲ್ಲಾ ಅಂದವಾಗಿರುವ ಹಾಗೂ ಪ್ರಯಾಣಿಕರ ಸೌಲಭ್ಯಕ್ಕೆ ತಕ್ಕಂತೆ ನಿರ್ಮಾಣಗೊಂಡಿರುವ ವಂದೇ ಭಾರತ್ ರೈಲಿಗೆ ನಾವು ಅರ್ಹರೇ ಎಂಬ ಪ್ರಶ್ನೆ ಮೂಡಿದೆ? ಏಕೆಂದರೆ ಯಾವುದೇ ಸಾರ್ವಜನಿಕ ಸ್ವತ್ತನ್ನು ನಮ್ಮದೆಂಬ ಗೌರವದಿಂದ ಕಾಣುತ್ತಿಲ್ಲ, ಇದು ವಂದೇ ಭಾರತ್ ರೈಲಿನಲ್ಲೂ ಉಂಟಾಗಿದೆ.
ಸಾರ್ವಜನಿಕ ಬಸ್, ರೈಲು ಹೀಗೆ ಯಾವುದೇ ವಾಹನವಾಗಿರಬಹುದು, ಹೊಸದರಲ್ಲಿದ್ದಂತೆ ಆ ವಾಹನಗಳು ನಂತರ ಇರುವುದಿಲ್ಲ ಪಾನ್ ಗುಟ್ಕಾ ಕಲೆಗಳು, ಗೀಚುಗಳು, ಹರಿದ ಸೀಟುಗಳು, ಎಲ್ಲೆಂದರಲ್ಲಿ ಕಂಡುಬರುವ ಕಸ ಇದೆಲ್ಲಾ ಅದರಲ್ಲಿ ಪ್ರಯಾಣಿಸುವ ಅಂದರೆ ನಮ್ಮದೇ ಕೆಲಸವಾಗಿದೆ. ಸಾರ್ವಜನಿಕ ಸಾರಿಗೆಯನ್ನು ನಮ್ಮದೇ ಸಾರಿಗೆ ಎಂಬ ಪ್ರೀತಿಯಿಂದ ನಾವು ಕಾಣುತ್ತಿಲ್ಲ ಇದೇ ಸನ್ನಿವೇಶ ದುಸ್ಥಿತಿ ಇದೀಗ ವಂದೇ ಭಾರತ್ ರೈಲಿಗೂ ಉಂಟಾಗಿದೆ.
ಸಾರ್ವಜನಿಕ ವಾಹನಗಳನ್ನು ಹತ್ತಿದೊಡನೆಯೇ ಒಂದಲ್ಲ ಒಂದು ಕೀಟಲೆಗಳನ್ನು ನಡೆಸುವ ಪ್ರಯಾಣಿಕರು ಇದು ನಮ್ಮದೇ ಸ್ವಂತ ವಾಹನ ಎಂಬ ಕಾಳಜಿ ವಹಿಸುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಹಾಳುಗೆಡವುವ ಪ್ರಯತ್ನವನ್ನೇ ಮಾಡುತ್ತಾರೆ. ಇನ್ನು ಗಲಭೆ, ಸ್ಟ್ರೈಕ್‌ಗಳ ಸಮಯದಲ್ಲಿ ಕೂಡ ಬೆಂಕಿಗೆ ಆಹುತಿಯಾಗುವುದು ಅಥವಾ ಕಲ್ಲೇಟುಗಳ ದಾಳಿಗೆ ಒಳಗಾಗುವುದು ನಮ್ಮದೇ ಸಾರ್ವಜನಿಕ ವಾಹನಗಳಾಗಿವೆ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.
ಫುಡ್ ಟ್ರೇಯಲ್ಲಿ ಕುಳಿತು ಹರಟೆ ಹೊಡೆದ ಮಹಿಳೆ
ಪ್ರಯಾಣಿಕರು ಹಂಚಿಕೊಂಡ ವಂದೇ ಭಾರತ್ ರೈಲಿನೊಳಗಿನ ದೃಶ್ಯ ನಿಜಕ್ಕೂ ಆಘಾತಕಾರಿಯಾದುದು ಹಾಗೂ ವಿದ್ಯಾವಂತರಾದವರು ಛೀಮಾರಿ ಹಾಕಿಸಿಕೊಳ್ಳಬೇಕಾದ ಘಟನೆಯಾಗಿದೆ. ಮಹಿಳೆಯೊಬ್ಬರು ರೈಲಿನೊಳಗಿರುವ ಫುಡ್ ಟ್ರೇ ಮೇಲೆ ಕುಳಿತುಕೊಂಡು ತನ್ನ ಕಾಲುಗಳನ್ನು ಸೀಟಿನ ಮೇಲೆ ಇರಿಸಿಕೊಂಡು ಗೆಳತಿಯೊಂದಿಗೆ ಹರಟೆ ಹೊಡೆಯುತ್ತಿರುವ ದೃಶ್ಯವನ್ನು ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ.
ಮಾರ್ಚ್ 5 ರಂದು ಮಾಡಿದ 3 ನಿಮಿಷ ವಿಡಿಯೋ ಇದಾಗಿದ್ದು ರೈಲು ಕಾತ್ರಾದಿಂದ ನವ ದೆಹಲಿಗೆ ಪ್ರಯಾಣಿಸುತ್ತಿತ್ತು. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಉತ್ತರ ರೈಲ್ವೇ, ರೈಲಿನ ಸ್ವತ್ತುಗಳನ್ನು ನಿರ್ವಹಿಸುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: Railway Stations: ಇವು ಭಾರತದಲ್ಲಿನ ಅತ್ಯಂತ ಹಳೆಯ ಕಾಲದ ರೈಲು ನಿಲ್ದಾಣಗಳು, ಬ್ರಿಟಿಷರೇ ನಿರ್ಮಾಣ ಮಾಡಿದ್ದಂತೆ!
2017 ರಲ್ಲಿ ಗೋವಾದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ದೇಶದ ಮೊದಲ ಸೆಮಿ-ಹೈ-ಸ್ಪೀಡ್, ಅರೆ-ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್‌ನಲ್ಲಿ ಕೂಡ ಇಂತಹುದೇ ಘಟನೆಗಳು ವರದಿಯಾಗಿವೆ. ರೈಲಿನಲ್ಲಿದ್ದ ಪ್ರಯಾಣಿಕರು ಹೆಡ್‌ಫೋನ್‌ಗಳನ್ನು ಕದ್ದರು, LCD ಪರದೆಗಳನ್ನು ಹಾನಿಗೊಳಿಸಿದರು ಮತ್ತು ಶೌಚಾಲಯಗಳನ್ನು ಕೊಳಕು ಮಾಡಿದ್ದಾರೆ. ಪ್ರಯಾಣಿಕರಿಗಾಗಿ ಮನರಂಜನೆಗಾಗಿ ಒದಗಿಸಲಾದ 12 ಉತ್ತಮ ಗುಣಮಟ್ಟದ ಹೆಡ್‌ಫೋನ್‌ಗಳನ್ನು ಪ್ರಯಾಣಿಕರು ಕದ್ದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.
ರೈಲಿನೊಳಗಿನ ವಸ್ತುಗಳ ಶೋಚನೀಯ ಸ್ಥಿತಿ
ತದನಂತರ ಪ್ರಯಾಣಿಸಿದ ಪ್ರಯಾಣಿಕರು ಹೆಡ್‌ಫೋನ್‌ಗಳು ಕಾಣೆಯಾದ ಕಾರಣ ರೈಲಿನಲ್ಲಿ ಒದಗಿಸಲಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಿಂದ ಪ್ರಯೋಜನವಾಗುತ್ತಿಲ್ಲ ಎಂದು ದೂರು ನೀಡಿದ ನಂತರ ಈ ವಿಷಯ ರೈಲ್ವೆ ಅಧಿಕಾರಿಗಳ ಗಮನಕ್ಕೆ ಬಂದಿತು.
ಇಂತಹ ನಡವಳಿಕೆ ಸರಿಯೇ ಎಂಬುದು ಇಲ್ಲಿ ಪ್ರಶ್ನೆಯಾಗಿದೆ. ಕೆಲವು ಪ್ರಯಾಣಿಕರು ರೈಲ್ವೆ ಸೌಲಭ್ಯಗಳನ್ನು ಬಳಸುವಾಗ ಯಾವುದೇ ಕಾಳಜಿ ವಹಿಸುವುದಿಲ್ಲ, ಇದರಿಂದಾಗಿ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಪ್ರೀಮಿಯಂ, ಸೂಪರ್-ಫಾಸ್ಟ್ ರೈಲುಗಳಲ್ಲಿ ಮಾತ್ರವಲ್ಲದೆ ಇತರ ರೈಲುಗಳಲ್ಲಿಯೂ ಇಂತಹ ದೃಶ್ಯಗಳು ಸಾಮಾನ್ಯವಾಗಿವೆ.
ರೈಲ್ವೇ ಆಸ್ತಿ ಪ್ರತಿಯೊಬ್ಬರ ಆಸ್ತಿ
ರೈಲುಗಳಲ್ಲಿ ಪ್ರಯಾಣಿಸುವ ಜನರು ಸಹ ಪ್ರಯಾಣಿಕರು ವಿವೇಚನೆಯಿಂದ ರೈಲಿನಲ್ಲಿರುವ ವಸ್ತುಗಳನ್ನು ಬಳಸದೇ ಇರುವ ಕಾರಣ ಸೌಲಭ್ಯಗಳ ದುರ್ಬಳಕೆ ಆಗುತ್ತಿದೆ ಎಂಬುದು ರೈಲ್ವೇ ಅಧಿಕಾರಿಗಳ ಮಾತಾಗಿದೆ. ವಾಶ್‌ಬೇಸಿನ್‌ಗಳು ಕಸ ಕಡ್ಡಿಗಳಿಂದ ಮುಚ್ಚಿ ಹೋಗಿದ್ದು, ವಾಶ್‌ರೂಮ್ ಮಗ್‌ಗಳು ಕೂಡ ಶಿಥಿಲಾವಸ್ಥೆಯಲ್ಲಿವೆ. ಇದರೊಂದಿಗೆ ಹರಿದ ಪರದೆ, ಮುರಿದ ಆರ್ಮ್‌ಸ್ಟ್ರೆಸ್ಟ್‌ಗಳು ರೈಲ್ವೆ ಆಸ್ತಿಯನ್ನು ನಿಯಮಿತವಾಗಿ ದುರುಪಯೋಗ ಮಾಡಲಾಗುತ್ತಿದೆ ಎಂಬುದಕ್ಕೆ ಕೆಲವು ಉದಾಹರಣೆಗಳಾಗಿವೆ.
ರೈಲುಗಳ ಸಾಮಾನ್ಯ ನಿರ್ವಹಣೆ
ವಂದೇ ಭಾರತ್ ಎನ್‌ಜೆಪಿ-ಎಚ್‌ಡಬ್ಲ್ಯೂಎಚ್‌ನ ಸ್ಥಿತಿಯ ಕುರಿತು ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದು ರೈಲು ಪ್ರಯಾಣಿಸುವ ಮುನ್ನವೇ ಯಾವುದೇ ನಿರ್ವಹಣೆಯನ್ನು ನಡೆಸಿಲ್ಲ.
ಟ್ರೇಗಳು ಕೊಳಕಾಗಿವೆ ಮತ್ತು 4ಕಿಮೀ ನಂತರ ಹೌರಾ ಸ್ಟೇಶನ್ ಬಂದರ ನಂತರ ಕೂಡ ಯಾವುದೇ ಸ್ವಚ್ಛತೆಯನ್ನು ಸಿಬ್ಬಂದಿಯು ನಡೆಸುತ್ತಿಲ್ಲ. ಇದಕ್ಕಾಗಿ ನಾವು ಪ್ರೀಮಿಯಂ ಶುಲ್ಕ ಪಾವತಿಸುತ್ತಿದ್ದೇವೆ ಎಂಬುದಾಗಿ ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ.
ಕೊಳಕಾದ ಕೋಚ್ ಹಾಗೂ ಸ್ವಚ್ಛಗೊಳಿಸಲು ರೈಲ್ವೇ ಸಿಬ್ಬಂದಿ ನಿರಾಕರಿಸುತ್ತಿರುವುದರ ಬಗ್ಗೆ ಪ್ರಯಾಣಿಕರು ದೂರು ನೀಡಿದ್ದಾರೆ. 22222 CSMT ರಾಜಧಾನಿ ರೈಲಿನ ಸ್ಥಿತಿಯ ಬಗ್ಗೆ ಪ್ರಯಾಣಿಕರು ಟ್ವೀಟ್ ಮಾಡಿದ್ದು, ಹೌಸ್‌ಕೀಪಿಂಗ್ ತಂಡ ಬೋಗಿಯ ನೆಲವನ್ನು ಸ್ವಚ್ಛಗೊಳಿಸಲು ನಿರಾಕರಿಸುತ್ತಿದೆ ಹಾಗೂ ಇದು ನಮ್ಮ ಕೆಲಸವಲ್ಲ ಎಂದು ಅಧಿಕಾರದಿಂದ ಹೇಳುತ್ತಿದ್ದಾರೆ ಎಂದು ಪ್ರಯಾಣಿಕರು ಟ್ವೀಟ್ ಮಾಡಿ ದೂರು ನೀಡಿದ್ದಾರೆ.
ಕಲ್ಲು ತೂರಾಟ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ರಾಜಧಾನಿ ಹಾಗೂ ಶತಾಬ್ದಿಯಂತೆಯೇ ಕಲ್ಲು ತೂರಾಟಗಾರರಿಗೆ ಆಹಾರವಾಗಿದೆ. ಮಾರ್ಚ್ 11 ರಂದು, ಹೌರಾ-ಹೊಸ ಜಲಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.
ಇದರಿಂದ ಕೋಚ್‌ಗಳಲ್ಲಿರುವ ಗಾಜುಗಳ ಕಿಟಕಿಗಳಿಗೆ ಹಾನಿಯುಂಟಾಗಿತ್ತು. ಸೆಮಿ ಹೈಸ್ಪೀಡ್ ರೈಲಿನ ಮೇಲೆ ನಡೆದ ಪ್ರಥಮ ದಾಳಿ ಏನಲ್ಲ. ಫೆಬ್ರವರಿ 2019 ರಿಂದ ವಂದೇ ಭಾರತ್ ಆರಂಭವಾದಾಗಿನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ತೆಲಂಗಾಣ, ಬಿಹಾರ, ಯುಪಿ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ಕೂಡ ದಾಳಿ ನಡೆದಿದೆ.
ಪ್ರಜೆಗಳಿಗಾಗಿ ಎಷ್ಟೇ ಸೌಲಭ್ಯಗಳನ್ನು ಒದಗಿಸಿದರೂ ಅದನ್ನು ನಿರ್ವಹಿಸುವ ಹಾಗೂ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಬ್ದಾರಿ ನಾಗರಿಕರದ್ದಾಗಿದೆ. ಎಷ್ಟೇ ವೈಭವೋಪೇತ ರೈಲುಗಳನ್ನು ಆರಂಭಿಸಿದರೂ ಅದರಲ್ಲಿರುವ ಸೌಲಭ್ಯಗಳನ್ನು ಕಾಳಜಿಯಿಂದ ಜಾಗರೂಕತೆಯಿಂದ ಬಳಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ