ನವದೆಹಲಿ (ಜೂ. 29): ಲಾಕ್ಡೌನ್ನಿಂದಾಗಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಾಸ್ ಕರೆತರುವ ವಂದೇ ಭಾರತ್ ಮಿಷನ್ನಡಿ ಈಗಾಗಲೇ ಸಾವಿರಾರು ಭಾರತೀಯರು ತಮ್ಮ ಮನೆ ಸೇರಿಕೊಂಡಿದ್ದಾರೆ. ಇದೀಗ ಜುಲೈ 3ರಿಂದ 4ನೇ ಹಂತದ ವಂದೇ ಭಾರತ್ ಮಿಷನ್ ಆರಂಭವಾಗಲಿದೆ. ಈ ಮಿಷನ್ ಮೂಲಕ 17 ದೇಶಗಳಿಂದ ಭಾರತೀಯರನ್ನು ವಾಪಾಸ್ ಕರೆತರಲಾಗುವುದು.
ನಾನಾ ಕಾರಣಗಳಿಂದ ವಿದೇಶಗಳಿಗೆ ತೆರಳಿದ್ದ ಭಾರತೀಯರು ಲಾಕ್ಡೌನ್ ಬಳಿಕ ಅಲ್ಲೇ ಸಿಲುಕಿಕೊಂಡಿದ್ದರು. ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ 3 ತಿಂಗಳಿನಿಂದ ಅನೇಕ ಭಾರತೀಯರು ವಿದೇಶಗಳಲ್ಲಿ ಸಿಲುಕಿಕೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ ವಂದೇ ಭಾರತ್ ಮಿಷನ್ನಡಿ ಅವರನ್ನು ವಾಪಾಸ್ ಕರೆತರುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿತ್ತು. ಅದರ 4ನೇ ಹಂತ ಜುಲೈ 3ರಿಂದ 15ರವರೆಗೆ ನಡೆಯಲಿದೆ.
ಇದನ್ನೂ ಓದಿ: ಕರ್ನಾಟಕದಲ್ಲೇನೋ ಸಂಡೇ ಲಾಕ್ಡೌನ್; ಬೇರೆ ರಾಜ್ಯಗಳಲ್ಲಿ ಏನಿದೆ ಸ್ಥಿತಿ?
ವಂದೇ ಭಾರತ್ ಮಿಷನ್-4ರ ಅಡಿಯಲ್ಲಿ 114 ವಿಮಾನಗಳು ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರಲಿವೆ. ಅದರಲ್ಲಿ ಮುಖ್ಯವಾಗಿ 31 ವಿಮಾನಗಳು ಅಮೆರಿಕ, 19 ವಿಮಾನಗಳು ಇಂಗ್ಲೆಂಡ್, 9 ಕೆನಡಾ ಮತ್ತು 8 ವಿಮಾನಗಳು ಆಸ್ಟ್ರೇಲಿಯಾದಲ್ಲಿರುವವರನ್ನು ಕರೆತರಲಿವೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಸೌದಿ ಅರೇಬಿಯ, ಕೀನ್ಯಾ, ಬಾಂಗ್ಲಾದೇಶ, ಶ್ರೀಲಂಕಾ ಮುಂತಾದ 17 ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಜುಲೈ 3ರಿಂದ 170 ವಿಮಾನಗಳ ಮೂಲಕ ಕರೆತರಲಾಗುವುದು. ಈ ಮಿಷನ್ಗೆ ಕೈಜೋಡಿಸಲು ಖಾಸಗಿ ವಿಮಾನ ಸಂಸ್ಥೆಗಳು ಮುಂದಾಗಿವೆ ಎಂದು ಕೇಂದ್ರ ವಿಮಾನಯಾನ ಸಚಿವಾಲಯ ತಿಳಿಸಿದೆ.
ವಂದೇ ಭಾರತ್ ಮಿಷನ್ನಡಿ ಈಗಾಗಲೇ 498 ವಿಮಾನಗಳು ವಿದೇಶಗಳಿಗೆ ತೆರಳಿ ಭಾರತೀಯರನ್ನು ಕರೆತಂದಿವೆ. ಮೇ 7ರಿಂದ 16ರವರೆಗೆ ಮೊದಲ ಹಂತದ ವಂದೇ ಭಾರತ್ ಮಿಷನ್ ಆರಂಭಿಸಲಾಗಿತ್ತು. ಇದೀಗ ಗೋಏರ್, ಇಂಡಿಗೋದಂತಹ ಖಾಸಗಿ ವಿಮಾನಗಳು ಕೂಡ ವಿದೇಶೀಯರನ್ನು ಕರೆತರಲು ಮುಂದೆಬಂದಿವೆ. ಕೆನಡಾ, ಅಮೆರಿಕ, ಇಂಗ್ಲೆಂಡ್, ಕಜಕಿಸ್ಥಾನ, ಸೌದಿ ಅರೇಬಿಯಾ, ಜಪಾನ್ ಸೇರಿದಂತೆ ಒಟ್ಟು 17 ದೇಶಗಳಿಂದ ಜುಲೈ 15ರೊಳಗೆ ಭಾರತೀಯರನ್ನು ಕರೆತರಲಾಗುವುದು. ಹಾಗೇ, ಭಾರತದಲ್ಲಿ ಸಿಲುಕಿರುವ ಬೇರೆ ದೇಶದವರನ್ನು ಕೂಡ ವಾಪಾಸ್ ಕರೆದೊಯ್ಯಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ