ದಿಲ್ಲಿ ಪೋಸ್ಟ್ | ಚೀನಾ ವಿರುದ್ಧ ಕುರಿಗಳೊಂದಿಗೆ ಪ್ರತಿಭಟನೆ ಮಾಡಿದ್ದ ವಾಜಪೇಯಿ; 18 ಸಲ ಕ್ಸಿ ಜಿನ್‌ ಪಿಂಗ್ ಭೇಟಿ ಮಾಡಿರುವ ಮೋದಿ!

ಕುರಿಗಳನ್ನು ಬಿಟ್ಟು‌ ಚೀನಾವನ್ನು 'ಬಕ್ರಾ'ಗಳನ್ನಾಗಿ ಮಾಡಿದ್ದ ವಾಜಪೇಯಿ, ಪಾಕಿಸ್ತಾನಕ್ಕಿಂತಲೂ ಚೀನಾವೇ ಭಾರತದ ಶತ್ರು ಎಂದು ಪ್ರತಿಪಾದಿಸುತ್ತಿದ್ದ ಸಮಾಜವಾದಿ ನಾಯಕರು, ಚೀನಾ ಅಧ್ಯಕರನ್ನು 18 ಸಲ ಭೇಟಿ ಮಾಡಿರುವ ಮೋದಿ ಬಗ್ಗೆ ನ್ಯೂಸ್ 18 ಕನ್ನಡದ ದೆಹಲಿ ಪ್ರತಿನಿಧಿ ಧರಣೀಶ್ ಬೂಕನಕೆರೆ ಈ ವಾರದ 'ದಿಲ್ಲಿ ಪೋಸ್ಟ್' ಕಾಲಂನಲ್ಲಿ ಬರೆದಿದ್ದಾರೆ.

ದಿಲ್ಲಿ ಪೋಸ್ಟ್

ದಿಲ್ಲಿ ಪೋಸ್ಟ್

  • Share this:
ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ‌ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ನಡೆಸುವ ವಿಭಿನ್ನ ಪ್ರತಿಭಟನೆಗಳನ್ನು ಮಾಧ್ಯಮಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಸ್ಯದ ಸರಕೆಂಬಂತೆ ಕಾಣಲಾಗುತ್ತದೆ. ಆದರೆ ಹಿಂದೊಮ್ಮೆ ಭಾರತ-ಚೀನಾ ಗಡಿ ಸಮಸ್ಯೆ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಇಂಥದೇ ಪ್ರತಿಭಟನೆ ನಡೆಸಿದ್ದರು. ಆಗ ಚೀನಾ ಕೆಂಡಮಂಡಲವಾಗಿತ್ತು.

ಇದೇ ವಿಷಯವಾಗಿ ಎರಡೂ ದೇಶಗಳ ನಡುವೆ ಪತ್ರ ಸಮರವೇ ನಡೆದುಹೋಗಿತ್ತು. ಚೀನಾದ ಮಾನ‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿತ್ತು.
ಅದೇನೆಂದು ತಿಳಿಯುವ ಮುನ್ನ ಚೀನಾದ ಚಾಲಾಕಿತನವನ್ನು ತಿಳಿಯಲೇಬೇಕು.

ಚೀನಾ, ಭಾರತದೊಂದಿಗೆ ಜಗಳ ಮಾಡಲು, ಆ ಮುಖಾಂತರ ತಾನು ಏಷ್ಯಾ ಉಪಖಂಡದಲ್ಲೇ ಪ್ರಬಲರಾಷ್ಟ್ರ ಎಂಬ ಸಂದೇಶ ಸಾರಲು ಸದಾ ಹಪಹಪಿಸುತ್ತಿರುತ್ತದೆ. ಚೀನಾದ ಮುಖವಾಡವನ್ನು ಅಂತಾರಾಷ್ಟ್ರೀಯ ಸಮುದಾಯದ ಎದುರು ಬೆತ್ತಲುಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆ ಕೆಲಸವನ್ನು ಬಹಳ ಸಿಂಪಲ್ ಆಗಿ ಮತ್ತು ಬಹಳ ಪರಿಣಾಮಕಾರಿಯಾಗಿ ಮಾಡಿದ್ದವರು ಅಟಲ್ ಬಿಹಾರಿ ವಾಜಪೇಯಿ.

1962ರಲ್ಲಿ ಭಾರತವನ್ನು ಸೋಲಿಸಿದ್ದರೂ ಚೀನಾದ ಸಾಮ್ರಾಜ್ಯ ವಿಸ್ತರಣೆಯ ಕನಸು ವಿರಮಿಸಿರಲಿಲ್ಲ‌. ಮೂರೇ ವರ್ಷದ ಅಂತರದಲ್ಲಿ‌, ಅಂದರೆ 1965ರಲ್ಲಿ 'ಆಪರೇಷನ್ ಸಿಕ್ಕಿಂ' ಯೋಜನೆ ಹಮ್ಮಿಕೊಂಡಿತು.‌ ಸಿಕ್ಕಿಂ ಅನ್ನು ವಶಪಡಿಸಿಕೊಳ್ಳುವ ಪ್ರಯತ್ನ‌ ಆರಂಭಿಸಿತು. 1967ರಲ್ಲಿ 'ಭಾರತೀಯ ಸೈನಿಕರು ನಮ್ಮ ದೇಶದ 800 ಕುರಿಗಳು ಮತ್ತು 59 ಯಾಕ್ಸ್ ಗಳನ್ನು ಕಳ್ಳತನ ಮಾಡಿದ್ದಾರೆ' ಎಂಬ‌ ನೆಪ ಇಟ್ಟುಕೊಂಡು ಸಂಘರ್ಷಕ್ಕಿಳಿಯಿತು‌.

ಭಾರತೀಯ ಸೇನೆ ಇದನ್ನು ಖಡಾಖಂಡಿತವಾಗಿ ಅಲ್ಲಗೆಳೆಯಿತು. 'ಇದು ಚೀನಾದ ಕೀಳುಮಟ್ಟವನ್ನು ತೋರುತ್ತದೆ' ಎಂದು ಪ್ರತಿಕ್ರಿಯಿಸಿತು. ಆದರೆ ಚೀನಾಕ್ಕೆ ಇಂಥ ರಾಜತಾಂತ್ರಿಕವಾದ ಸೂಕ್ಷ್ಮವಾದ ಮಾತುಗಳು ವೇದ್ಯವಾಗಿರಲಿಲ್ಲ. ಆಗ ಅಖಾಡಕ್ಕಿಳಿದವರು ಅಟಲ್ ಬಿಹಾರಿ ವಾಜಪೇಯಿ.

ಆಗಷ್ಟೇ 42ರ ಹರೆಯದವರಾಗಿದ್ದ ವಾಜಪೇಯಿ ರಾತ್ರೋರಾತ್ರಿ ಸುಮಾರು 800 ಕುರಿಗಳ ಹಿಂಡಿನ ವ್ಯವಸ್ಥೆ ಮಾಡಿಕೊಂಡು ಬೆಳ್ಳಂಬೆಳಿಗ್ಗೆ ನವದೆಹಲಿಯ ಚೀನಾದ ರಾಯಭಾರ ಕಚೇರಿ ಎದುರು ಪ್ರತ್ಯಕ್ಷರಾದರು. ಕುರಿಗಳ ಕತ್ತಲ್ಲಿ 'ನನ್ನನ್ನು ತಿನ್ನಿರಿ, ಆದರೆ ಜಗತ್ತನ್ನು ಉಳಿಸಿ' ಎಂಬ ನಾಮಫಲಕಗಳು ನೇತಾಡುತ್ತಿದ್ದವು. ಈ ಘಟನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ಮುಖಭಂಗ ಅನುಭವಿಸಬೇಕಾಯಿತು.‌

ಆಕ್ರೋಶಭರಿತವಾದ ಚೀನಾ, ಅಂದಿನ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಪತ್ರ ಬರೆಯಿತು. 'ಈ ಮುಖಾಂತರ ಭಾರತವು ಚೀನಾವನ್ನು ಅವಹೇಳನ‌ ಮಾಡಲಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿತು. ಸರ್ಕಾರದ ಕುಮ್ಮಕ್ಕಿನಿಂದಲೇ ಚೀನಾಕ್ಕೆ ಇಂಥ ಅವಮಾನವಾಗಿದೆ ಎಂದು ಆರೋಪಿಸಿತು. ಕೂಡಲೇ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಾಜಪೇಯಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು.

ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಲಾಲಬಹುದ್ದೂರ್ ಶಾಸ್ತ್ರಿ ಅವರು, 'ಈ ಕುರಿಗಳ ಪ್ರತಿಭಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸ್ವಯಂಪ್ರೇರಿತವಾದ, ಶಾಂತಿಯುತವಾದ ಮತ್ತು ಉತ್ತಮ ಹಾಸ್ಯಮಯ ಪ್ರಜ್ಞೆಯ ಅಭಿವ್ಯಕ್ತಿಯಾಗಿದೆ' ಎಂದು ಹೇಳಿ ಚೀನಾಕ್ಕೆ ತಿರುಗೇಟು ನೀಡಿದರಲ್ಲದೆ ಪರೋಕ್ಷವಾಗಿ ಅಟಲ್ ಬಿಹಾರಿ ವಾಜಪೇಯಿ ನಡೆಗೂ‌ ಸಮರ್ಥನೆಯ ಮುದ್ರೆ ಒತ್ತಿದರು.

ಪಾಕಿಸ್ತಾನ ಅಥವಾ ಚೀನಾ?

ಪಾಕಿಸ್ತಾನ ಭಾರತದ ಶತ್ರುರಾಷ್ಟ್ರ ಎಂದು ವ್ಯಾಪಕವಾಗಿ ಬಿಂಬಿಸಲಾಗಿದೆ. ವಾಸ್ತವವಾಗಿ ಚೀನಾವೇ ಭಾರತದ ಪಾಲಿಗೆ ಹೆಚ್ಚು ಅಪಾಯಕಾರಿ.‌ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಮಾತ್ರ ಹೇಳುವ ಮಾತಲ್ಲ ಇದು. ಲಗಾಯತ್ತಿನಿಂದಲೂ ಚೀನಾವೇ ಅಸಲಿ ಶತ್ರು ರಾಷ್ಟ್ರ. ಇದನ್ನು ಮೊದಲು ಗ್ರಹಿಸಿ ಕ್ರಮಕ್ಕೆ ಮುಂದಾದವರು ಚೊಚ್ಚಲ ಪ್ರಧಾನಿ ಜವಾಹರಲಾಲ್ ನೆಹರು.

ನೆಹರು ಅವರ ಕಡುವಿರೋಧಿಗಳಾಗಿದ್ದ ಸಮಾಜವಾದಿ ನಾಯಕರಾದ ರಾಮಮನೋಹರ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಕೂಡ ಈ ಸಂಗತಿಯನ್ನು ಒಪ್ಪಿದ್ದರು. ಅದೇ ಕಾರಣಕ್ಕೆ ನೆರೆಯ ದೇಶದೊಂದಿಗಿನ ಸಂಬಂಧ ಸುಧಾರಿಸಲೆಂದೇ 1950ರಲ್ಲಿ ʼಹಿಂದೀ ಚೀನಿ ಭಾಯಿ ಭಾಯಿʼ ಎಂದು ಹೇಳಲಾಯಿತು. 1960ರಲ್ಲಿ ಚೀನಾ ಅಧ್ಯಕ್ಷ ಚೋ ಎನ್‌‌ ಲೈ ಅವರನ್ನು ಭಾರತಕ್ಕೆ ಆಹ್ವಾನಿಸಲಾಗಿತ್ತು.

ಸರ್ಕಾರದ ಕ್ರಮಗಳಿಗೆ ಆಗ ಲೋಹಿಯಾ, ಜಯಪ್ರಕಾಶ್ ನಾರಾಯಣ್, ದೀನ್ ದಯಾಳ್‌ ಉಪಾಧ್ಯಾಯ ಬೆಂಬಲ ನೀಡಿದ್ದರು. ಆದರೆ 1962ರಲ್ಲಿ ಚೀನಾ ಬೇರೆಯದೇ ವರಸೆ ಶುರು ಮಾಡಿ ಯುದ್ಧಕ್ಕೆ ನಾಂದಿ ಹಾಡಿತ್ತು.

ಇದಾದ ಬಳಿಕ ಜಾರ್ಜ್‌ ಫರ್ನಾಂಡಿಸ್‌ ಮತ್ತು ಅಟಲ್ ಬಿಹಾರಿ ವಾಜಪೇಯಿ ಕೂಡ ಪಾಕಿಸ್ತಾನಕ್ಕಿಂತ ಚೀನಾದ ಬಗ್ಗೆಯೇ ಹೆಚ್ಚು ಆತಂಕ‌ ವ್ಯಕ್ತಪಡಿಸಿದ್ದರು. ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್‌ ಫರ್ನಾಂಡಿಸ್‌ ಅವರಂತೂ ಚೀನಾ, ಟಿಬೆಟ್ ಅನ್ನು ವಶಪಡಿಸಿಕೊಂಡಿದ್ದನ್ನೇ ಸಹಿಸಬಾರದು ಎಂದಿದ್ದರು. ಚೀನಾದೊಂದಿಗಿನ ವಿದೇಶಾಂಗ ನೀತಿಯನ್ನು ಮರುಪರಿಶೀಲಿಸುವಂತೆಯೂ ಹೇಳಿದ್ದರು. ಆದರೆ, ಆ ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಅಷ್ಟೇ.

ಚೀನಾ ಅಧ್ಯಕ್ಷರೊಂದಿಗೆ ಮೋದಿ 18 ಸಲ ಭೇಟಿ

ಪ್ರಧಾನ ಮಂತ್ರಿ ಆದಮೇಲೆ ಕಳೆದ 6 ವರ್ಷದಲ್ಲಿ‌ ನರೇಂದ್ರ ಮೋದಿ 5 ಸಲ ಚೀನಾಕ್ಕೆ ಭೇಟಿ ನೀಡಿದ್ದಾರೆ. ಚೀನಾಕ್ಕೆ ಅತಿಹೆಚ್ಚು ಭೇಟಿ ನೀಡಿದ ಪ್ರಧಾನಿ ಎಂಬ ದಾಖಲೆ ಮೋದಿ ಅವರದ್ದೇ. ಇದಲ್ಲದೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರನ್ನು ಭಾರತಕ್ಕೂ ಆಹ್ವಾನಿಸಿದ್ದಾರೆ. ತಮ್ಮ ತವರೂರು ವಡ್ನಗರಕ್ಕೂ ಕರೆದುಕೊಂಡು‌‌ ಹೋಗಿದ್ದಾರೆ. ಕ್ಸಿ ಜಿನ್‌ ಪಿಂಗ್‌ ಅವರ ಹಳ್ಳಿಗೂ‌ ಭೇಟಿ ನೀಡಿದ್ದಾರೆ.

ಇದನ್ನು ಓದಿ: ದಿಲ್ಲಿ ಪೋಸ್ಟ್ | ಹರಿಪ್ರಸಾದ್ ಎಂಟ್ರಿ ಸಿದ್ದು-ಡಿಕೆಶಿ ಜೋಡಿಗೆ ಕುತ್ತು; ಕತೆ, ಚಿತ್ರಕಥೆ, ನಿರ್ದೇಶನ- ಜಿ.ಸಿ.ಚಂದ್ರಶೇಖರ್

ಅಲ್ಲದೆ ಕ್ಸಿ ಜಿನ್‌ ಪಿಂಗ್‌ ಅವರೊಂದಿಗೆ ಮಾಮಲ್ಲಪುರಂ ಸಮುದ್ರ ತೀರದಲ್ಲಿ ವಿಹರಿಸಿದ್ದಾರೆ. ಅದಕ್ಕೋಸ್ಕರ ಸಮುದ್ರ ತೀರದಲ್ಲಿ ‌ಬಿದ್ದಿದ್ದ ಕಸವನ್ನು ಎತ್ತಿಹಾಕಿ ಸುದ್ದಿಯಾಗಿದ್ದಾರೆ.‌ ʼಮೇಕ್‌ ಇನ್‌ ಇಂಡಿಯಾʼ ಮಂತ್ರ ಪಠಿಸುವ ಮೋದಿ ವಿವಿಧ ಸಂದರ್ಭಗಳಲ್ಲಿ ಒಟ್ಟು 18 ಬಾರಿ ಕ್ಸಿ ಜಿನ್‌ ಪಿಂಗ್‌ ಅವರನ್ನು ಭೇಟಿಯಾಗಿದ್ದಾರೆ. ಆದರೆ, ಇದರಿಂದ ಭಾರತಕ್ಕೆ ದೊರೆತ ಫಲವೇನು? ಎಂಬ ಪ್ರಶ್ನೆಗೆ ಗಾಲ್ವಾನ್ ಬಿಕ್ಕಟ್ಟು ಉತ್ತರವಾಗಿ ನಮ್ಮ ಎದುರು ನಿಂತಿದೆ.
Published by:MAshok Kumar
First published: