Uttarakhand Flood | ಉತ್ತರಾಖಂಡದಲ್ಲಿ ಹಿಮನದಿ ಸ್ಫೋಟ; ಸಾವಿನ ಸಂಖ್ಯೆ 14ಕ್ಕೆ ಏರಿಕೆ, 170 ಜನ ನಾಪತ್ತೆ

Uttarakhand Glacier Burst: ಉತ್ತರಾಖಂಡದ ಅಲಕಾನಂದ ಮತ್ತು ದೌಲಿಗಂಗ ಹಿಮನದಿ ಸ್ಫೋಟದಿಂದ ಭಾರೀ ಪ್ರವಾಹ ಉಂಟಾಗಿದ್ದು, 14 ಜನರು ಸಾವನ್ನಪ್ಪಿದ್ದಾರೆ. 170ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಈ ನೈಸರ್ಗಿಕ ದುರಂತದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಉತ್ತರಾಖಂಡದ ಹಿಮನದಿ ಸ್ಫೋಟದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ

ಉತ್ತರಾಖಂಡದ ಹಿಮನದಿ ಸ್ಫೋಟದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ

  • Share this:
ನವದೆಹಲಿ (ಫೆ. 8): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಹಿಮನದಿ ಸ್ಫೋಟದಿಂದ ಭಾರೀ ಪ್ರವಾಹ ಉಂಟಾಗಿದೆ. ಈ ದುರಂತದಲ್ಲಿ 14 ಜನರು ಸಾವನ್ನಪ್ಪಿದ್ದು, 170 ಜನರು ನಾಪತ್ತೆಯಾಗಿದ್ದಾರೆ. ಅಲಕಾನಂದ ಮತ್ತು ದೌಲಿಗಂಗದಲ್ಲಿ ನಡೆದ ನೈಸರ್ಗಿಕ ದುರಂತದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಉತ್ತರಾಖಂಡದಲ್ಲಿ ಜೋಶಿ ಮಠದ ಬಳಿ ಹಿಮನದಿ ಸ್ಫೋಟಗೊಂಡು ಹಲವು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಂಗಾ ನದಿಯ ತಟದಲ್ಲಿರುವ ಎಲ್ಲ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಹಿಮಪಾತ ಮತ್ತು ಪ್ರವಾಹದಿಂದ ರಿಷಿಗಂಗಾ ಜಲವಿದ್ಯುತ್ ಯೋಜನೆ ಮತ್ತು ಎನ್​ಟಿಪಿಸಿ ಕೊಚ್ಚಿಹೋಗಿದೆ. ಈ ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದು, ಅವರ ಮೃತದೇಹಗಳನ್ನು ಹೊರಗೆಳೆಯಲಾಗಿದೆ. ಇನ್ನೂ 170 ಮಂದಿ ನಾಪತ್ತೆಯಾಗಿದ್ದಾರೆ. ರಿಷಿಗಂಗಾ ಹೈಡ್ರೋ ಪವರ್ ಪ್ರಾಜೆಕ್ಟ್​ನ 22 ಕಾರ್ಮಿಕರು ಮತ್ತು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ (ಎನ್​ಟಿಪಿಸಿ)ಯ 148 ಕಾರ್ಮಿಕರು ನಾಪತ್ತೆಯಾಗಿದ್ದು, ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.ಉತ್ತರಾಖಂಡದ ನಂದಾ ದೇವಿ ಹಿಮನದಿಯ ಒಂದು ಭಾಗವು ಹಿಮನದಿ ಸ್ಫೋಟದಲ್ಲಿ ಒಡೆದಿದೆ. ಹಾಗಾಗಿ, ಗಂಗಾ ನದಿಯ ದಡದಲ್ಲಿರುವ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಅಗತ್ಯ ಬಿದ್ದರೆ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪಿಎಸಿ ಪ್ರವಾಹ ನಿರ್ವಹಣಾ ತಂಡಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.ಉತ್ತರಾಖಂಡ ಪ್ರವಾಹದ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಾಖಂಡದಲ್ಲಿನ ನೈಸರ್ಗಿಕ ವಿಕೋಪವನ್ನು ನಿಭಾಯಿಸಲು, ಉತ್ತರ ಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಈ ದುರಂತದಲ್ಲಿ ಸಾವನ್ನಪ್ಪಿರುವವರಿಗೆ ಶಾಂತಿ ಸಿಗಲಿ. ಆದಷ್ಟು ಬೇಗ ಪ್ರವಾಹ ನಿಯಂತ್ರಣಕ್ಕೆ ಬರಲು ಸಹಾಯ ಮಾಡುತ್ತೇವೆ ಎಂದಿದ್ದಾರೆ.ಅಲಕಾನಂದ ನದಿಯ ನೀರು ತಗ್ಗು ಪ್ರದೇಶಗಳನ್ನು ತಲುಪಲು ಬಹಳ ಸಮಯ ಬೇಕಾಗಬಹುದು. ಹರಿದ್ವಾರದ ನಂತರ, ನಾವು ನರೋರಾ ಮತ್ತು ಬಿಜ್ನೋರ್‌ನ ಬ್ಯಾರೇಜ್‌ಗಳಲ್ಲಿ ನೀರಿನ ಪ್ರಮಾಣದ ಮೇಲ್ವಿಚಾರಣೆ ನಡೆಸುತ್ತೇವೆ. ಕೆಳಹಂತದ ಪ್ರದೇಶಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಗೃಹ ಇಲಾಖೆಯ ಅಧಿಕಾರಿಗಳು ಹೇಳಿದ್ದರು. ಆದರೆ, ಪ್ರವಾಹದ ಪ್ರಮಾಣ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.ರಿಷಿ ಗಂಗಾ ಜಲವಿದ್ಯುತ್ ಯೋಜನೆಗೆ ನಡೆಯುತ್ತಿದ್ದ ಕಾಮಗಾರಿ ಸ್ಥಳಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮವಾಗಿ, ಇಲ್ಲಿದ ಜನರು ಹಾಗೂ ಕಾಮಗಾರಿಗೆ ಬಳಸುತ್ತಿದ್ದ ಉಪಕರಣ, ವಾಹನ ಸೇರಿದಂತೆ ಎಲ್ಲವೂ ಕೊಚ್ಚಿ ಹೋಗಿದೆ. ಅಲಕಾನಂದ ನದಿಯಲ್ಲೂ ಪ್ರವಾಹ ಭೀತಿ ಎದುರಾಗಿದ್ದು, ಹಲವರನ್ನು ರಕ್ಷಿಸಲಾಗಿದೆ. ಇಂದು ಕೂಡ ಎನ್​ಡಿಆರ್​ಎಫ್​ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Published by:Sushma Chakre
First published: