ಉತ್ತರಾಖಂಡ್ ನೀರ್ಗಲ್ಲು ಸ್ಫೋಟ: ಸಾವಿನ ಸಂಖ್ಯೆ 51ಕ್ಕೆ ಏರಿಕೆ

ಕಳೆದ ಭಾನುವಾರದಂದು ಉತ್ತರಾಖಂಡ್​ನ ಚಮೋಲಿ ಜಿಲ್ಲೆಯಲ್ಲಿ ಹಿಮಬಂಡೆ ಸ್ಫೋಟಗೊಂಡು ನದಿ ಪ್ರವಾಹ ಸೃಷ್ಟಿಯಾಗಿತ್ತು. ಆ ದುರಂತದಲ್ಲಿ ನೂರಾರು ಮಂದಿ ಸಾವನ್ನಪ್ಪಿರುವ ಶಂಕೆ ಇದೆ. ಈಗ 51 ಮೃತದೇಹಗಳು ಸಿಕ್ಕಿವೆ.

ಉತ್ತರಾಖಂಡ್ ಪ್ರವಾಹ ದುರಂತ

ಉತ್ತರಾಖಂಡ್ ಪ್ರವಾಹ ದುರಂತ

 • Share this:
  ನವದೆಹಲಿ(ಫೆ. 15): ವಾರದ ಹಿಂದೆ ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಬಂಡೆ ಸ್ಫೋಟ ಮತ್ತು ಪ್ರವಾಹ ದುರಂತ ಘಟನೆಯಲ್ಲಿ ಮಡಿದವರ ಸಂಖ್ಯೆ ಏರುತ್ತಲೇ ಇದೆ. ನಿನ್ನೆ ಭಾನುವಾರ ತಪೋವನ್ ಸುರಂಗದಲ್ಲಿ ಆರು ಮೃತದೇಹಗಳು ಪತ್ತೆಯಾಗಿವೆ. ರೈನಿ ಗ್ರಾಮದಲ್ಲಿ ಏಳು ಮಂದಿಯ ಶವ ಸಿಕ್ಕಿವೆ. ಇದರೊಂದಿಗೆ ಈವರೆಗೆ ಸಿಕ್ಕಿರುವ ಮೃತ ದೇಹಗಳ ಸಂಖ್ಯೆ 51ಕ್ಕೆ ಏರಿದೆ. ಇವುಗಳ ಪೈಕಿ 24 ಮಂದಿಯನ್ನ ಗುರುತು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೂ 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಇವರು ಬದುಕಿರುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನಲಾಗುತ್ತಿದೆ. ರಕ್ಷಣೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

  ತಪೋವನ್​ನಲ್ಲಿ ಎನ್​ಟಿಪಿಸಿಯಿಂದ 520 ಮೆಗಾ ವ್ಯಾಟ್​ನ ಬೃಹತ್ ವಿದ್ಯುತ್ ಯೋಜನೆ ನಡೆಯುತ್ತಿತ್ತು. ಎಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಇಲ್ಲಿ ಮಡುಗಟ್ಟಿರುವ ಕೆಸರನ್ನ ಹೊರಗೆಳೆಯುವಾಗ ನಿನ್ನೆ ಹಲವು ಶವಗಳು ಸಿಕ್ಕಿವೆ. ಇಲ್ಲಿ ಇನ್ನೂ 39 ಮಂದಿ ಸಿಲುಕಿರುವ ಶಂಕೆ ಇದೆ. ಕೆಸರು ಸಂಪೂರ್ಣವಾಗಿ ಹೊರಹಾಕಿದ ಬಳಿಕ ಚಿತ್ರಣ ಸ್ಪಷ್ಟವಾಗಲಿದೆ.

  ಇದನ್ನೂ ಓದಿ: LPG Price Hike - ಇವತ್ತಿನಿಂದ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಏರಿಕೆ; ಇಲ್ಲಿದೆ ಹೊಸ ದರ

  ಕೆಸರು ಹೊರಹಾಕಲು ವಿವಿಧ ತಂತ್ರಗಳನ್ನ ಉಪಯೋಗಿಸಲಾಗುತ್ತಿದೆ. ಸುರಂಗದ ಮೊದಲ 125 ಮೀಟರ್​ನಷ್ಟು ದೂರದ ಪ್ರದೇಶದಲ್ಲಿ ಜೆಸಿಬಿ ಮೂಲಕ ಕೆಸರು ಹೊರಹಾಕಲಾಗಿದೆ. ಆದರೆ, ಆ ಬಳಿಕ ಸುರಂಗ ಕಿರಿದಾಗುತ್ತಿರುವುದರಿಂದ ಸಣ್ಣ ಯಂತ್ರಗಳ ಮೂಲಕ ಕೆಸರು ಹೊರಹಾಕಲಾಗುತ್ತಿದೆ. ಈ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ.

  ಕಳೆದ ಭಾನುವಾರದಂದು ಚಮೋಲಿ ಜಿಲ್ಲೆಯಲ್ಲಿ ಧೌಲಿಗಂಗಾ ನದಿಯ ಹಿಮಬಂಡೆ ಸ್ಫೋಟಗೊಂಡ ಪರಿಣಾಮ ಗಂಗಾ ನದಿಯ ಉಪನದಿಗಳಾದ ಧೌಲಿಗಂಗಾ ಮತ್ತು ಅಲಕನಂದ ನೀರು ಉಕ್ಕೇರಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ನದಿ ಪಾತ್ರದ ಅನೇಕ ಪ್ರದೇಶಗಳಿಗೆ ಪ್ರವಾಹ ನುಗ್ಗಿತ್ತು. ಸಾಧ್ಯವಾದಷ್ಟೂ ಬೇಗ ನದಿ ಪಾತ್ರದ ಪ್ರದೇಶಗಳಲ್ಲಿದ್ದ ಜನರನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿತ್ತು. ಹೀಗಾಗಿ ಹೆಚ್ಚಿನ ಅನಾಹುತ ಆಗಲಿಲ್ಲ. ಈ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಮುಖ್ಯಮಂತ್ರಿಗಳು 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
  Published by:Vijayasarthy SN
  First published: