Tirath Singh Rawat: ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ತಿರಾತ್ ಸಿಂಗ್ ರಾವತ್ ಇಂದು ಸಂಜೆ ಪ್ರಮಾಣವಚನ ಸ್ವೀಕಾರ

Uttarakhand Crisis: ಉತ್ತರಾಖಂಡದ ಸಿಎಂ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್ ರಾವತ್ ನಿನ್ನೆ ಸಂಜೆ ರಾಜೀನಾಮೆ ನೀಡಿದ್ದರು. ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಸಂಸದ ತಿರಾತ್ ಸಿಂಗ್ ರಾವತ್ ಆಯ್ಕೆಯಾಗಿದ್ದು, ಇಂದು ಸಂಜೆ 4 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ತಿರಾತ್ ಸಿಂಗ್ ರಾವತ್

ತಿರಾತ್ ಸಿಂಗ್ ರಾವತ್

  • Share this:
ಡೆಹ್ರಾಡೂನ್ (ಮಾ. 10): ಉತ್ತರಾಖಂಡದ ಸರ್ಕಾರದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿನಿಂದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನಿನ್ನೆ ಸಂಜೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ? ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬಿಜೆಪಿ ಸಂಸದ ತಿರಾತ್ ಸಿಂಗ್ ರಾವತ್ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

2013 ಮತ್ತು 2015ರಲ್ಲಿ ಉತ್ತರಾಖಂಡದ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ತಿರಾತ್ ಸಿಂಗ್ ರಾವತ್ ಇದಕ್ಕೂ ಮೊದಲು ಶಾಸಕರಾಗಿಯೂ ಆಯ್ಕೆಯಾಗಿದ್ದರು. ಇದೀಗ ಬಿಜೆಪಿ ಸಂಸದರಾಗಿರುವ ಅವರನ್ನು ಉತ್ತರಾಖಂಡದ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಹಲವರು ಲಾಬಿ ನಡೆಸಿದ್ದರು. ಇದರ ಜೊತೆಗೆ ಧನ್ ಸಿಂಗ್ ರಾವತ್, ಭಗತ್ ಸಿಂಗ್ ಕೋಶಿಯಾರಿ, ರಮೇಶ್ ಪೋಕ್ರಿಯಾಲ್ ನಿಶಾಂಕ್, ಸಪ್ತಲ್ ಮಹಾರಾಜ್ ಸೇರಿದಂತೆ ಹಲವರ ಹೆಸರು ಮುಖ್ಯಮಂತ್ರಿ ರೇಸ್​ನಲ್ಲಿತ್ತು. ಕೊನೆಗೆ 56 ವರ್ಷದ ತಿರಾತ್ ಸಿಂಗ್ ರಾವತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.ವಿಧಾನಸಭಾ ಚುನಾವಣೆಗೆ ಸಮೀಪಿಸುತ್ತಿರುವಾಗಲೇ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರ ಕಾರ್ಯವೈಖರಿಯ ಬಗ್ಗೆ ಉತ್ತರಾಖಂಡ ಸರ್ಕಾರದ ಸಚಿವರು, ಶಾಸಕರು ಅಸಮಾಧಾನ ಹೊರಹಾಕಿದ್ದರು. ಬಿಜೆಪಿಯೊಳಗೆ ಎದ್ದ ಭಿನ್ನಮತದಿಂದ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಬೇಕಾಯಿತು. 2017ರಲ್ಲಿ ಅಧಿಕಾರಕ್ಕೆ ಬಂದ ತ್ರಿವೇಂದ್ರ ಸಿಂಗ್ ರಾವತ್ ಅವರ ಸರ್ಕಾರದಲ್ಲಿ ಕಳೆದೊಂದು ವರ್ಷದಿಂದ ಅಸಮಾಧಾನ ಹೆಚ್ಚಾಗಿತ್ತು.

ತ್ರಿವೇಂದ್ರ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸದಿದ್ದರೆ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಉತ್ತರಾಖಂಡದ ಹಲವು ಸಚಿವರು, ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡಿದ್ದರಿಂದ ಬಿಜೆಪಿ ಹೈಕಮಾಂಡ್ ತ್ರಿವೇಂದ್ರ ಸಿಂಗ್ ಅವರಿಗೆ ರಾಜೀನಾಮೆ ನೀಡಲು ಸೂಚಿಸಿತು. ಇಂದು ಸಂಜೆ 4 ಗಂಟೆಗೆ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ತಿರಾತ್ ಸಿಂಗ್ ರಾವತ್ ಅಧಿಕಾರ ಸ್ವೀಕರಿಸಲಿದ್ದಾರೆ.
Published by:Sushma Chakre
First published: