Tirath Singh Rawat Resign| ಅಧಿಕಾರ ವಹಿಸಿಕೊಂಡ 4 ತಿಂಗಳಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಉತ್ತರಾಖಂಡ ಸಿಎಂ!

ರಾಜ್ಯಪಾಲರು ಸಮಯ ನೀಡುವ ಮುನ್ನವೇ ತೀರಥ್ ಸಿಂಗ್ ತಮ್ಮ ರಾಜೀನಾಮೆ ಪತ್ರದ ಪ್ರತಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರಿಗೂ ನೀಡಿದ್ದಾರೆ ಎಂದು ತಿಳಿದುಬಂದಿದೆ.

ತೀರಥ್ ಸಿಂಗ್.

ತೀರಥ್ ಸಿಂಗ್.

 • Share this:
  ಡೆಹ್ರಾಡೂನ್; ಉತ್ತರಾಖಂಡ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ 4 ತಿಂಗಳಲ್ಲೇ ಸಿಎಂ ತೀರಥ್​ ಸಿಂಗ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಇಳಿಸಂಜೆ ಉತ್ತರಾಖಂಡ ರಾಜ್ಯಪಾಲರಿಗೆ ತನ್ನ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಅಸಲಿಗೆ ಉತ್ತರಾಖಂಡ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಆದರೆ, ಚುನಾವಣೆಗೆ ಮುನ್ನವೇ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಹಲವು ಬಿಕ್ಕಟ್ಟಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ತಮ್ಮ ರಾಜೀನಾಮೆ ಬಗ್ಗೆ ಮಾತನಾಡಿರುವ ತೀರಥ್ ಸಿಂಗ್, "ಸಾಂವಿಧಾನಿಕ ಬಿಕ್ಕಟ್ಟಿನಿಂದಾಗಿ, ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸರಿಯೆಂದು ಭಾವಿಸಿದ್ದೇನೆ. ಅಲ್ಲದೆ, COVID-19 ಕಾರಣ ಉಪ ಚುನಾವಣೆಗಳನ್ನೂ ನಡೆಸಲು ಸಾಧ್ಯವಿಲ್ಲ" ಎಂದು ಅವರು ಹಿಂದಿಯಲ್ಲಿ ಸಂಕ್ಷಿಪ್ತ ಹೇಳಿಕೆ ನೀಡಿದ್ದಾರೆ.

  ತೀರಥ್‌‌ ರಾವತ್ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿದ್ದು, ಬಿಜೆಪಿ ನಾಯಕರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ. ನಿನ್ನೆ ಮಧ್ಯಾಹ್ನ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಭೇಟಿಯ ನಂತರ ಅವರು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರೊಂದಿಗೆ ಭೇಟಿಗೆ ಸಮಯ ಕೇಳಿದ್ದಾರೆ. ಆದರೆ, ರಾಜ್ಯಪಾಲರು ಸಮಯ ನೀಡುವ ಮುನ್ನವೇ ತೀರಥ್ ಸಿಂಗ್ ತಮ್ಮ ರಾಜೀನಾಮೆ ಪತ್ರದ ಪ್ರತಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರಿಗೂ ನೀಡಿದ್ದಾರೆ ಎಂದು ತಿಳಿದುಬಂದಿದೆ.

  ಉತ್ತರಾಖಂಡದ ಬಿಜೆಪಿ ಶಾಸಕರು ನಾಳೆ ಸಭೆ ಸೇರಿ ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಅವರ ತೀವ್ರ ಭಿನ್ನಾಭಿಪ್ರಾಯದ ನಡುವೆಯೆ ತಿರಥ್‌‌ ಸಿಂಗ್‌ ರಾವತ್ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.

  ಪ್ರಸ್ತುತ ಲೋಕಸಭಾ ಸದಸ್ಯರಾಗಿರುವ ತೀರಥ್‌ ಅವರು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ, ಸೆಪ್ಟೆಂಬರ್ 10 ರೊಳಗೆ ವಿಧಾನಸಭಾ ಸ್ಥಾನವನ್ನು ಗೆದ್ದು ಉತ್ತರಾಖಂಡದ ಶಾಸಕರಾಗಬೇಕಿತ್ತು. ಆದರೆ, ಎರಡನೆ ಅಲೆಯ ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ಐದು ರಾಜ್ಯಗಳ ಚುನಾವಣೆ ನಡೆಸಿದ್ದ ಚುನಾವಣಾ ಆಯೋಗದ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಉಪ ಚುನಾವಣೆಗಳನ್ನು ಘೋಷಿಸಲು ಚುನಾವಣಾ ಆಯೋಗವು ಇದೀಗ ನಿರಾಸಕ್ತಿ ತೋರುತ್ತಿದೆ ಎನ್ನಲಾಗಿದೆ. ತೀರಥ್​ ಸಿಂಗ್ ರಾಜೀನಾಮೆಗೆ ಇದು ಪ್ರಮುಖ ಕಾರಣ ಎನ್ನಲಾಗುತ್ತಿದೆ.

  ಇದನ್ನೂ ಓದಿ: ಜೀವಂತವಿದ್ದರೂ ಸತ್ತಿದ್ದಾರೆಂದು ದಾಖಲೆ.. ವ್ಯವಸ್ಥೆಗೆ ಬಿಸಿ ಮುಟ್ಟಿಸಲು ಪತ್ನಿಯನ್ನೇ ಮರುಮದುವೆ ಆಗುತ್ತಿರುವ ವ್ಯಕ್ತಿ

  "ಚುನಾವಣಾ ಆಯೋಗವು ಚುನಾವಣೆಯ ಕುರಿತು ವಿವಿಧ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಕೊರೋನಾ ಪರಿಸ್ಥಿತಿಯು ಒಂದು ಪ್ರಮುಖವಾದ ಪರಿಗಣನೆಯಾಗಿದ್ದು, ಅನೇಕ ಉಪಚುನಾವಣೆಗಳು ಬಾಕಿ ಉಳಿದಿವೆ" ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

  ಇದಲ್ಲದೆ ತೀರಥ್ ಸಿಂಗ್ ರಾವತ್ ಅವರ ಪತ್ರಿಕಾ ಹೇಳಿಕೆಗಳು ಸದಾ ವಿವಾದಗಳಿಂದಲೇ ಕೂಡಿತ್ತು. ಬಿಜೆಪಿಯ ಉತ್ತರಾಖಂಡದ ಕೆಲ ನಾಯಕರು ಸಿಎಂ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ದೆಹಲಿ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದರು. ತಮ್ಮದೆ ಪಕ್ಷದ ಆಡಳಿತವು ತೆಗೆದುಕೊಂಡಿದ್ದ ನೀತಿ ನಿರ್ಧಾರಗಳನ್ನು ಟೀಕಿಸುವ ಮೂಲಕ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದ್ದರು.

  ಇದನ್ನೂ ಓದಿ: Petrol price: ಒಡಿಶಾದಲ್ಲಿ ದಾಖಲೆ ಬರೆದ ಪೆಟ್ರೋಲ್​ ಬೆಲೆ: ಲೀಟರ್​ಗೆ​ 105 ರೂ, ಬೆಂಗಳೂರಿನಲ್ಲಿ ಎಷ್ಟಿದೆ ದರ?

  ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ತಿರಥ್‌‌ ಹರಿದ ಜೀನ್ಸ್ ಧರಿಸಿದ ಮಹಿಳೆಯರ ಬಗ್ಗೆ ಅವಮಾನಕರವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಜೊತೆಗೆ 200 ವರ್ಷಗಳ ಕಾಲ ಭಾರತವನ್ನು ಆಳಿದ್ದು ಬ್ರಿಟನ್ ಅಲ್ಲ, ಅಮೆರಿಕ ಎಂದೂ ಹೇಳಿಕೆ ನೀಡಿದ್ದರು.

  ದೇಶದಲ್ಲಿ ಕೊರೋನಾ ವೈರಸ್ ಬಿಕ್ಕಟ್ಟು ಉತ್ತುಂಗದಲ್ಲಿದ್ದಾಗ ಕುಂಭಮೇಳ ಕಾರ್ಯಕ್ರಮವನ್ನು ಅವರು ನಿಭಾಯಿಸಿದ್ದು ಮತ್ತು ಕೊರೋನಾಗೆ ಯಾವುದೇ ಆರ್‌ಟಿ-ಪಿಸಿಆರ್ ಪರೀಕ್ಷೆಯ ಅಗತ್ಯವಿಲ್ಲ ಎಂಬ ಅವರ ಅಭಿಪ್ರಾಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಅವರ ರಾಜೀನಾಮೆಯೊಂದಿಗೆ ಇದೀಗ ಎಲ್ಲಾ ವಿವಾದಗಳೂ ತಣ್ಣಗಾಗಿವೆ.
  Published by:MAshok Kumar
  First published: