ನವದೆಹಲಿ (ಜುಲೈ 14): ಕೋವಿಡ್ ಎರಡನೇ ಅಲೆಗೆ ಮುನ್ನ ಕುಂಭಮೇಳ ನಡೆಸಿದ್ದಕ್ಕೆ ವ್ಯಾಪಕ ಟೀಕೆ ಎದುರಾಗಿತ್ತು. ಈಗ ಮೂರನೇ ಅಲೆಗೆ ಮುನ್ನ ಕಾವಡಿ ಯಾತ್ರೆ ಬರುತ್ತಿದೆ. ಸೋಂಕು ಹೆಚ್ಚುವ ಅಪಾಯ ಇರುವ ಹಿನ್ನೆಲೆಯಲ್ಲಿ ಉತ್ತರಾ ಖಂಡ್ ಸರ್ಕಾರ ಕಾವಡಿ ಯಾತ್ರೆಯನ್ನ ರದ್ದುಗೊಳಿಸುವ ಮಹತ್ವದ ನಿರ್ಧಾರಕ್ಕೆ ಬಂದಿದೆ. ಭಾರತೀಯ ವೈದ್ಯಕೀಯ ಸಂಸ್ಥೆ ಉತ್ತರಾಖಂಡ್ನ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರಿಗೆ ಕಾವಡಿ ಯಾತ್ರೆ ರದ್ದುಗಳಿಸುವಂತೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಉನ್ನತ ಅಧಿಕಾರಿಗಳ ಸಭೆ ಕರೆದು ಯಾತ್ರೆ ರದ್ದು ಮಾಡುವ ನಿರ್ಧಾರ ಹೊರಡಿಸಿದ್ದಾರೆ. ಕಳೆದ ವರ್ಷವೂ ಇದೇ ಕೋವಿಡ್ ಕಾರಣಕ್ಕೆ ಕಾವಡಿ ಯಾತ್ರೆಯನ್ನ ಉತ್ತರಾ ಖಂಡ್ ಸರ್ಕಾರ ರದ್ದು ಮಾಡಿತ್ತು.
“ಹರಿದ್ವಾರವನ್ನು ಕೋವಿಡ್ ಹಾಟ್ ಸ್ಪಾಟ್ ಆಗುವುದು ಬೇಡ. ಜನರ ಜೀವವನ್ನು ಅಪಾಯಕ್ಕೆ ತಳ್ಳುವ ಇಚ್ಛೆ ನಮಗಿಲ್ಲ. ಹೀಗಾಗಿ, ಕಾವಡಿ ಯಾತ್ರೆಯನ್ನ ರದ್ದುಗೊಳಿಸಲು ನಿರ್ಧರಿಸಿದ್ದೇವೆ. ನಾವು ಪ್ರಾಣಗಳನ್ನ ಉಳಿಸಬೇಕಿದೆ. ಆ ಭಗವಂತ ಕೂಡ ಜೀವಹಾನಿಯನ್ನ ಇಷ್ಟಪಡುವುದಿಲ್ಲ” ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿಕೆ ನೀಡಿದ್ದಾರೆ.
ಇನ್ನು, ಉತ್ತರಾಖಂಡ್ನ ನೆರೆಯ ರಾಜ್ಯ ಉತ್ತರ ಪ್ರದೇಶದಲ್ಲಿ ಕಾವಡಿ ಯಾತ್ರೆಗೆ ಅನುಮತಿ ನೀಡಲಾಗಿದೆ. ಆದರೆ, ಯಾತ್ರಾ ಸ್ಥಳಗಳಲ್ಲಿ ಕೋವಿಡ್ ನಿಯಮಾವಳಿಗಳನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಉ.ಪ್ರ. ಸರ್ಕಾರ ನಿರ್ಧರಿಸಿದೆ. ಇಲ್ಲಿ ಜುಲೈ 25ರಿಂದ ಆಗಸ್ಟ್ 6ರವರೆಗೆ 13 ದಿನಗಳ ಕಾಲ ಕಾವಡಿ ಯಾತ್ರೆ ನಡೆಯಲಿದೆ.
ಇದನ್ನೂ ಓದಿ: South Africa Riot - ದಕ್ಷಿಣ ಆಫ್ರಿಕಾ ಹಿಂಸೆ: ಪ್ರತಿಭಟನೆಯ ನೆವದಲ್ಲಿ ಲೂಟಿ; ಕಾಲ್ತುಳಿತದಿಂದಲೇ ಹಲವು ಸಾವು
2019ರಲ್ಲಿ ನಡೆದ ಕಾವಡಿ ಯಾತ್ರೆಗೆ ಉತ್ತರಾಖಂಡ್ ರಾಜ್ಯದ ಹರಿದ್ವಾರದಲ್ಲಿ ಮೂರೂವರೆ ಕೋಟಿ ಮಂದಿ ಆಗಮಿಸಿದ್ದರೆಂಬ ಅಂದಾಜು ಇದೆ. ಹಾಗೆಯೇ, ಆ ವರ್ಷ ಉತ್ತರ ಪ್ರದೇಶದಲ್ಲಿ 2-3 ಕೋಟಿ ಮಂದಿ ಕಾವಡಿ ಯಾತ್ರೆಗೆ ಬಂದಿದ್ದರೆನ್ನಲಾಗಿದೆ.
ಶಿವನ ಆರಾಧನೆ ನಡೆಯುವ ಕಾವಡಿ ಯಾತ್ರೆಗೆ ಉತ್ತರ ಭಾರತೀಯ ಭಕ್ತರೇ ಹೆಚ್ಚು. ನೆರೆಯ ರಾಜ್ಯಗಳಿಂದ ಆಗಮಿಸುವ ಭಕ್ತರು ಪವಿತ್ರ ಗಂಗಾನದಿಯ ಜಲವನ್ನು ಹೊತ್ತುಕೊಂಡು ಶಿವನ ದೇಗುಲಕ್ಕೆ ತೆರಳಿ ಮಹಾದೇವನಿಗೆ ಅರ್ಪಿಸುತ್ತಾರೆ. ಸ್ಥಳೀಯ ಶಿವನ ದೇವಾಲಯಗಳಲ್ಲಿ ಬಹಳಷ್ಟು ಜನರು ಗಂಗಾ ಜಲ ಸಮರ್ಪಿಸುತ್ತಾರೆ. ಹರಿದ್ವಾರದಲ್ಲಿರುವ ಶಿವನ ದೇವಾಲಯಕ್ಕೆ ಹೆಚ್ಚು ಭಕ್ತರು ಹರಿದುಹೋಗುತ್ತಾರೆ. ಹಾಗೆಯೇ, ಕಾಶಿ ವಿಶ್ವನಾಥ, ಪುರ ಮಹಾದೇವ, ಔಘರನಾಥ ಮೊದಲಾದ ಶಿವನ ದೇವಸ್ಥಾನಗಳಿಗೂ ಭಕ್ತರ ದಂಡು ಹೋಗುತ್ತದೆ.
ಇದನ್ನೂ ಓದಿ: Exclusive| ಜೈಲ್ ಬ್ರೇಕ್ ಪ್ರಕರಣದಲ್ಲಿ ಜೈಲು ಪಾಲಾಗಿ ಜೈಲಿಂದಲೇ ನಕಲಿ ಸರ್ಕಾರಿ ವೆಬ್ಸೈಟ್ ನಡೆಸಿದ ಆರೋಪಿಗಳು!
ಇದೇ ವೇಳೆ, ಒಡಿಶಾ ಸರ್ಕಾರ ಕೂಡ ಸಾರ್ವಜನಿಕವಾಗಿ ನಡೆಯುವ ಕೌಡಿಯಾ, ಬೋಲ್ ಬಮ್ ಇತ್ಯಾದಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ನಿಷೇಧಿಸುವ ಕ್ರಮ ಕೈಗೊಂಡಿದೆ. ಮುಂಬರುವ ಶ್ರಾವಣ ಮಾಸದಲ್ಲಿ ಒಡಿಶಾದಲ್ಲಿ ಬೋಲ್ ಬಮ್ ಅನ್ನು ಭರ್ಜರಿಯಾಗಿ ಆಚರಿಸಲಾಗುತ್ತದೆ. ಜನರು ನದಿ, ಕೊಳ ಮತ್ತಿತರೆಡಿಂದ ನೀರನ್ನ ಪಡೆದು ಶಿವ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ಮಹಾದೇವನಿಗೆ ಜಲಾರ್ಪಣೆ ಮಾಡುತ್ತಾರೆ. ಈಗ ಒಡಿಶಾ ಸರ್ಕಾರ ಇದನ್ನ ಈ ವರ್ಷ ನಿಷೇಧಿಸಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ