ಹುಬ್ಬಳ್ಳಿ (ಆಗಸ್ಟ್ 16): ಕರ್ನಾಟಕದಲ್ಲಿ ಕಳೆದ 15 ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಅಂತೆಯೇ ಹುಬ್ಬಳ್ಳಿ-ಧಾರವಾಡದಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಹುಬ್ಬಳ್ಳಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಇದ್ದ ವಿಮಾನ ಅಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಇಂದು ಮುಂಜಾನೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಇಂಡಿಗೋ ವಿಮಾನ ಹೊರಟಿತ್ತು. ಈ ವಿಮಾನದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿ 46 ಪ್ರಯಾಣಿಕರಿದ್ದರು. ಈ ವಿಮಾನ ಹುಬ್ಬಳ್ಳಿ ನಿಲ್ದಾಣದಲ್ಲಿ 8:55ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ, ಹವಾಮಾನ ವೈಪರಿತ್ಯದ ಕಾರಣ ವಿಮಾನ ಲ್ಯಾಂಡಿಂಗ್ಗೆ ಏರ್ ಟ್ರಾಫಿಕ್ ಕಂಟ್ರೋಲರ್ ಅನುಮತಿ ಸಿಕ್ಕಿರಲಿಲ್ಲ.
ಹವಾಮಾನ ವೈಪರಿತ್ಯದಿಂದ ಸುಮಾರು ಒಂದೂವರೆ ಗಂಟೆ ಕಾಲ ವಿಮಾನ ಆಗಸದಲ್ಲೇ ಸುತ್ತುತ್ತಿತ್ತು. ಹೀಗಾಗಿ, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ನಂತರ 10:25ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ವೇಳೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ವಾರ ಭಾರೀ ಮಳೆಯಿಂದಾಗಿ ಕೇರಳದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ತುತ್ತಾಗಿತ್ತು. ಈ ವೇಳೆ ಪೈಲಟ್ ಸೇರಿ 18 ಜನರು ಮೃತಪಟ್ಟಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಆತಂಕ ಮತ್ತೂ ಹೆಚ್ಚಾಗಿತ್ತು.
ಹುಬ್ಬಳ್ಳಿ ಹಾಗೂ ಧಾರವಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಿದೆ. ಹೀಗಾಗಿ, ತುಪ್ಪರಿ ಹಳ್ಳದ ತಾತ್ಕಾಲಿಕ ಸೇತುವೆ ಮುಳುಗಡೆ ಆಗಿದೆ. ಕಳೆದ ಒಂದು ವಾರದಿಂದ ಮಳೆ ಶಾಂತವಾಗಿತ್ತು. ಆದರೆ, ಈಗ ಮಳೆ ಮತ್ತೆ ಹೆಚ್ಚಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ