ಕಳೆದ ಒಂದು ವರ್ಷದಲ್ಲಿ ಉತ್ತರಪ್ರದೇಶದಲ್ಲಿ 400 ಲಾಕಪ್‌ ಡೆತ್; ಸಂಸತ್‌ಗೆ ಮಾಹಿತಿ ನೀಡಿದ ಗೃಹ ಸಚಿವಾಲಯ

ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲೇ ಲಾಕಪ್‌ ಡೆತ್‌ ಪ್ರಕರಣದಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ಅಪರಾಧ ಪ್ರಕರಣಗಳಲ್ಲೂ ಉತ್ತರಪ್ರದೇಶ ಮೊದಲ ಸ್ಥಾನದಲ್ಲೇ ಇದ್ದು, ದೇಶದಲ್ಲೇ ಅತಿಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುವ ರಾಜ್ಯ ಎಂಬ ಕುಖ್ಯಾತಿಗೆ ಒಳಗಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ನವ ದೆಹಲಿ (ಸೆಪ್ಟೆಂಬರ್‌ 17); ಭಾರತದಲ್ಲಿ ಲಾಕಪ್‌ ಡೆತ್‌ ಪ್ರಕರಣಗಳು ಆಗಿಂದಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ. ಇತ್ತೀಚೆಗೆ ತಮಿಳುನಾಡಿನ ಸಾತಾನ್‌ ಕುಳಂ ಎಂಬಲ್ಲಿ ತಂದೆ ಮಗ ಇಬ್ಬರ ಲಾಕಪ್‌ ಡೆತ್‌ ಪ್ರಕರಣ ಇಡೀ ಭಾರತದಾದ್ಯಂತ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಸಣ್ಣ ವಿಚಾರಕ್ಕಾಗಿ ತಂದೆ ಮಗ ಇಬ್ಬರನ್ನೂ ಬಂಧಿಸಿ ಪೊಲೀಸ್‌ ಠಾಣೆಯಲ್ಲಿ ಸತತ ಎರಡು ದಿನಗಳ ಕಾಲ ಚಿತ್ರಹಿಂಸೆ ಕೊಡಲಾಗಿತ್ತು. ಪರಿಣಾಮ ಇಬ್ಬರೂ ಠಾಣೆಯಲ್ಲೇ ಮೃತಪಟ್ಟಿದ್ದರು. ಈ ಪ್ರಕರಣದ ವಿರುದ್ಧ ತಮಿಳುನಾಡಿನ ಜನ ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಪರಿಣಾಮ ನಾಲ್ಕು ಜನ ಪೊಲೀಸ್‌ ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಿ ಬಂಧಿಸಲಾಗಿತ್ತು. ಈ ಪ್ರಕರಣದ ಬೆನ್ನಿಗೆ ಇದೀಗ ಕೇಂದ್ರ ಗೃಹ ಸಚಿವಾಲಯ (MHA) 2019 ಏಪ್ರಿಲ್ 1 ರಿಂದ 2020 ಮಾರ್ಚ್‌ವರೆಗಿನ ಲಾಕಪ್‌ ಡೆತ್‌ ದತ್ತಾಂಶವನ್ನು ಬಿಡುಗಡೆ ಮಾಡಿದ್ದು, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಲಾಕಪ್ ಡೆತ್‌ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದುಬಂದಿದೆ.

  ಲೋಕಸಭೆ ಅಧಿವೇಶದಲ್ಲಿ ಸಾತಾನ್‌ ಕುಳಂ ಲಾಕಪ್‌ ಡೆತ್ ಪ್ರಕರಣವನ್ನು ಉಲ್ಲೇಖಿಸಿ ಪ್ರಶ್ನಿಸಿದ್ದ ತಮಿಳುನಾಡಿನ ಶಿವಗಂಗ ಕ್ಷೇತ್ರದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಇಡೀ ಭಾರತದಲ್ಲಿ ಪ್ರತಿ ವರ್ಷ ಆಗುತ್ತಿರುವ ಲಾಕಪ್‌ ಡೆತ್‌ ಕುರಿತು ಮಾಹಿತಿ ಕೇಳಿದ್ದರು. ಈ ಪ್ರಶ್ನೆಗೆ ಇಂದು ಕೇಂದ್ರ ಗೃಹ ಸಚಿವಾಲಯ ಉತ್ತರ ನೀಡಿದೆ.

  "MHA ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ 2019 ಏಪ್ರಿಲ್ 1 ರಿಂದ 2020 ಮಾರ್ಚ್‌ವರೆಗಿನ ಈ ನಿರ್ದಿಷ್ಟ ಅವಧಿಯಲ್ಲಿ, ನ್ಯಾಯಾಂಗ ಬಂಧನದಲ್ಲಿ 1,584 ಮತ್ತು ಪೊಲೀಸ್ ಕಸ್ಟಡಿಯಲ್ಲಿ 113 ಪ್ರಕರಣಗಳು ಸೇರಿ, ಒಟ್ಟು 1,697 ಲಾಕಪ್ ಡೆತ್‌ ಪ್ರಕರಣಗಳು ಸಂಭವಿಸಿವೆ. ಈ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ, ನ್ಯಾಯಾಂಗ ಬಂಧನದಲ್ಲಿ 400 ಸಾವುಗಳು ಮತ್ತು ಪೊಲೀಸ್ ಕಸ್ಟಡಿಯಲ್ಲಿ 3 ಪ್ರಕರಣಗಳು ವರದಿಯಾಗಿವೆ" ಎಂದು ಪ್ರತಿಕ್ರಿಯೆ ನೀಡಲಾಗಿದೆ.

  ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲೇ ಲಾಕಪ್‌ ಡೆತ್‌ ಪ್ರಕರಣದಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ಅಪರಾಧ ಪ್ರಕರಣಗಳಲ್ಲೂ ಉತ್ತರಪ್ರದೇಶ ಮೊದಲ ಸ್ಥಾನದಲ್ಲೇ ಇದ್ದು, ದೇಶದಲ್ಲೇ ಅತಿಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುವ ರಾಜ್ಯ ಎಂಬ ಕುಖ್ಯಾತಿಗೆ ಒಳಗಾಗಿದೆ.

  ಇದಲ್ಲದೆ, ಲಾಕಪ್ ಡೆತ್‌ನಲ್ಲಿ ಮಧ್ಯಪ್ರದೇಶವು ಉತ್ತರಪ್ರದೇಶದ ನಂತರದ ಸ್ಥಾನದಲ್ಲಿದ್ದು, 143 ಪ್ರಕರಣಗಳು ದಾಖಲಾಗಿವೆ. ಮಧ್ಯಪ್ರದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ 14ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಬಿಹಾರ ನಂತರದ ಸ್ಥಾನಗಳಲ್ಲಿವೆ.

  ಇದನ್ನೂ ಓದಿ : ಡೊನಾಲ್ಡ್‌ ಟ್ರಂಪ್ ವಿರುದ್ಧ ಮತ್ತೆ ಸದ್ದು ಮಾಡುತ್ತಿದೆ ಲೈಂಗಿಕ ದೌರ್ಜನ್ಯದ ಆರೋಪ; ಮಾಡೆಲ್ ಆಮಿ ಡೋರಿಸ್‌ರಿಂದ ದೂರು

  ಸಾತಾನ್‌ ಕುಳಂ ಪ್ರಕರಣ:

  ಕೊರೊನಾ ವೈರಸ್ ಲಾಕ್ ಡೌನ್ ಜೂನ್ 19 ರಂದು ವಿಧಿಸಲಾಗಿದ್ದ ಕರ್ಫ್ಯೂ ಸಮಯದಲ್ಲಿ ತಮ್ಮ ಮೊಬೈಲ್ ಫೋನ್ ಅಂಗಡಿಯನ್ನು ತೆರೆದಿಟ್ಟಿದ್ದಕ್ಕಾಗಿ ಪಿ. ಜಯರಾಜ್ (59) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರನ್ನು ಬಂಧಿಸಲಾಗಿತ್ತು. ಆದರೆ, ಎರಡು ದಿನಗಳ ಬಳಿಕ ಅವರು ಠಾಣೆಯಲ್ಲೇ ಮೃತರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಓರ್ವ ಪೊಲೀಸ್‌ ಎಸ್‌ಐ ಜೈಲಿನಲ್ಲಿದ್ದಾಗಲೇ ಕೊರೋನಾ ವೈರಸ್‌ನಿಂದಾಗಿ ಮೃತಪಟ್ಟಿದ್ದರು.

  ಈ ಪ್ರಕರಣದ ತನಿಖೆಯನ್ನು ತಮಿಳುನಾಡು ಸರ್ಕಾರ ಸಿಬಿಐಗೆ ವಹಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ತಂದೆ ಮತ್ತು ಮಗ ಅನೇಕ ಗಾಯಗಳಿಂದಾಗಿಯೇ ಸಾವನ್ನಪ್ಪಿದ್ದಾರೆ ಎಂದು ಕಳೆದ ತಿಂಗಳು ಮದ್ರಾಸ್ ಹೈಕೋರ್ಟ್ ‌ಗೆ ತಿಳಿಸಿತ್ತು. ಸಿಬಿಐ ಮತ್ತು ಅಪರಾಧ ತನಿಖಾ ಇಲಾಖೆ (ಸಿಐಡಿ) ಎರಡೂ ಪ್ರಕರಣದಲ್ಲಿನ ವರದಿಗಳನ್ನು ಸಲ್ಲಿಸಿವೆ ಎಂದು ಎಎನ್‌ಐ ತಿಳಿಸಿದೆ. ಸೆಪ್ಟೆಂಬರ್ 22 ರಂದು ಮದ್ರಾಸ್ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
  Published by:MAshok Kumar
  First published: