ಲಕ್ನೋ: ಗಂಡ-ಹೆಂಡತಿ (Husband and Wife) ಸಂಬಂಧ ಪವಿತ್ರವಾದ ಸಂಬಂಧ ಎಂದು ಭಾವಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಷಯಕ್ಕೆ ದಂಪತಿ (Couple) ಬೇರೆಯಾಗುವುದು, ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡುವುದು ಹೆಚ್ಚಾಗುತ್ತಿದೆ. ಇಂತಹದೇ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿ (Public Place) ಮೈತುಂಬಾ ಬಟ್ಟೆ (Dress) ಧರಿಸಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಮೋಹಿತ್ ಕುಮಾರ್ ಎಂಬ ವ್ಯಕ್ತಿ ಮೈತುಂಬಾ ಬಟ್ಟೆ ಧರಿಸಿಲ್ಲ ಎಂದು ತನ್ನ ಪತ್ನಿ ಸ್ವಪ್ನಾಳನ್ನು ಕೊಲೆ ಮಾಡಿದ್ದಾನೆ. ಉತ್ತರ ಪ್ರದೇಶದ ಬರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಗಾಜಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೈತುಂಬಾ ಬಟ್ಟೆ ಧರಿಸದಿದ್ದಕ್ಕೆ ಕೊಲೆ
28 ವರ್ಷದ ಸ್ವಪ್ನಾಮೃತ ದುರ್ದೈವಿ. ಈಕೆ ಸಾರ್ವಜನಿಕ ಸ್ಥಳದಲ್ಲಿ ಮೈತುಂಬಾ ಬಟ್ಟೆ ಧರಿಸದೇ ಬಂದಿದ್ದರಿಂದ ಕೋಪಗೊಂಡ ಪತಿ ಕತ್ತು ಸೀಳಿ ಕೊಂದೇ ಬಿಟ್ಟಿದ್ದಾನೆ. ಪತ್ನಿ ಸರಿಯಾಗಿ ಬಟ್ಟೆ ಧರಿಸುವುದಿಲ್ಲ ಎಂದು ಮೋಹಿತ್ ಕುಮಾರ್ ಹಲವು ಬಾರಿ ಪತ್ನಿಗೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಸ್ವಪ್ನಾ ಹಾಗೂ ಮೋಹಿತ್ ಕುಮಾರ್ ಮಧ್ಯೆ ಜಗಳ ನಡೆದಿದೆ. ಪದೇ ಪದೇ ಎಚ್ಚರಿಕೆ ನೀಡಿದರೂ ಪತ್ನಿ ತನ್ನ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂದು ಆಕ್ರೋಶಗೊಂಡು ಸ್ವಪ್ನಾಳನ್ನು ಹತ್ಯೆ ಮಾಡಿದ್ದಾನೆ.
ಎಷ್ಟು ಸಾರಿ ಹೇಳಿದರೂ ಮಾತು ಕೇಳದಕ್ಕೆ ಹತ್ಯೆ
ಅಸಭ್ಯ ಬಟ್ಟೆ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ಓಡಾಡಬೇಡ ಎಂದು ಪತ್ನಿಗೆ ಎಷ್ಟು ಸಾರಿ ಹೇಳಿದರೂ ತನ್ನ ದಾರಿ ಬದಲಿಸದ ಪತ್ನಿ ನಡೆಗೆ ಬೇಸತ್ತು ಆಕೆಯನ್ನು ಕೊಂದಿದ್ದೇನೆ ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ. ಮೋಹಿತ್ ಕುಮಾರ್ ಮತ್ತು ಸ್ವಪ್ನಾ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. ಪತ್ನಿಯ ಉಡುಗೆ ತೊಡುಗೆಗಾಗಿ ಮೋಹಿತ್ ಕುಮಾರ್ ಆಗಾಗ್ಗೆ ಜಗಳವಾಡುತ್ತಿದ್ದ. ಈ ಕ್ರಮದಲ್ಲಿ ಸೋಮವಾರವೂ ಅವರ ನಡುವೆ ಮತ್ತೊಂದು ವಾಗ್ವಾದ ನಡೆದಿದೆ. ಇದರಿಂದ ಕುಪಿತಗೊಂಡ ಮೋಹಿತ್ ಕುಮಾರ್ ಹರಿತವಾದ ಆಯುಧದಿಂದ ಸಪ್ನಾಳ ಕುತ್ತಿಗೆಗೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಪತ್ನಿ ಕೊಂದು ಸ್ಥಳದಲ್ಲೇ ಇದ್ದ ಆರೋಪಿ
ಕೋಪದಲ್ಲಿ ಪತ್ನಿಯನ್ನು ಕೊಲೆಗೈದ ಮೋಹಿತ್ ಕುಮಾರ್ ಪರಾರಿಯಾಗದೆ ಸ್ಥಳದಲ್ಲೇ ಕುಳಿತಿದ್ದ. ಘಟನೆ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ವಪ್ನಾಳ ಮೃತದೇಹದ ಪಕ್ಕದಲ್ಲಿ ಕುಳಿತಿದ್ದ ಮೋಹಿತ್ನನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ಮದುವೆಯಾದ ಮೂರೇ ದಿನಕ್ಕೆ ನವವಧು ಸಾವು
ಪ್ರೀತಿಸಿ ಮದುವೆಯಾಗಿದ್ದ ಯುವತಿ ಮೂರೇ ದಿನಗಳಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕೊಡಗಿನ 6ನೇ ಹೊಸಕೋಟೆಯಲ್ಲಿ ನಡೆದಿದೆ. ಅಕ್ಷಿತಾ ಮೃತ ದುರ್ದೈವಿಯಾಗಿದ್ದು, ದಲಿತ ಯುವತಿ ಎಂದು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಮೃತ ಹುಡುಗಿ ಮೂರುದಿನಗಳ ಹಿಂದೆ ಹೇಮಂತ್ ಎಂಬ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ ಮದುವೆಯಾದ ಮೂರು ದಿನಗಳಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯುವತಿಯ ಪೋಷಕರು, ದಲಿತ ಸಮುದಾಯದ ಯುವತಿ ಎಂದು ಹೇಮಂತ್ ಪೋಷಕರು ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೇಮಂತ್ ಪೋಷಕರ ವಿರುದ್ಧ ದೂರು ದಾಖಲು
ಮದುವೆಯಾದ ಮೂರೇ ದಿನಗಳಲ್ಲಿ ಅಕ್ಷತಾ ಮೃತಪಟ್ಟಿದ್ದರಿಂದ ಆಕೆಯ ಪೋಷಕರು ಹೇಮಂತ್ ಪೋಷಕರ ವಿರುದ್ಧ ಹತ್ಯೆ ಆರೋಪ ಮಾಡಿದ್ದಾರೆ. ಅಕ್ಷತಾ ಮತ್ತು ಹೇಮಂತ್ ಒಂದೇ ಗ್ರಾಮದ ನಿವಾಸಿಗಳಾಗಿದ್ದು, ಇಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದಾರೆ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಕಳೆದ ಮೂರು ದಿನಗಳ ಹಿಂದಷ್ಟೇ ದೇವಾಲಯವೊಂದರಲ್ಲಿ ಮದುವೆಯಾಗಿ ಮನೆಗೆ ಬಂದಿದ್ದರು ಎನ್ನಲಾಗಿದೆ. ಆದರೆ ಅಕ್ಷತಾ ದಲಿತ ಸಮುದಾಯದವಳೆಂದು ಕೊಲೆ ಮಾಡಿದ್ದಾರೆ ಎಂದು ಅಕ್ಷತಾ ಪೋಷಕರ ಆರೋಪವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ