ಲಖನೌ(ಏ. 16): ಕೊರೋನಾ 2ನೇ ಅಲೆಯ ಭೀಕರತೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಉತ್ತರ ಪ್ರದೇಶ ಸರ್ಕಾರ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಸಿಎಂ ಯೋಗಿ ಆದಿತ್ಯನಾಥ್ ರಾಜ್ಯಾದ್ಯಂತ ಭಾನುವಾರ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದಾರೆ. ನಗರಗಳು ಹಾಗೂ ಗ್ರಾಮೀಣ ಭಾಗದಲ್ಲೂ ಸಂಡೇ ಲಾಕ್ಡೌನ್ ಹೇರಲಾಗಿದೆ. ಮಾಸ್ಕ್ ದಂಡವನ್ನೂ ಏರಿಸಿದ್ದಾರೆ. ರಾಜ್ಯದ ಜನ ಕಡ್ಡಾಯವಾಗಿ ಮಾಸ್ಕ್ ಧರಿಸಲೇ ಬೇಕು. ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 1 ಸಾವಿರ ರೂ. ದಂಡ, 2ನೇ ಬಾರಿ ನಿಯಮ ಉಲ್ಲಂಘಿಸಿದರೆ ಬರೋಬ್ಬರಿ 10 ಸಾವಿರ ರೂ. ದಂಡ ವಿಧಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಖುದ್ದು ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಯೋಗಿ ಆದಿತ್ಯನಾಥ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಕೊರೋನಾ ಕಡಿವಾಣಕ್ಕೆ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ ಎಂದು ಆದೇಶಿಸಿದ್ದಾರೆ.
ಭಾನುವಾರ ಸಂಪೂರ್ಣ ಲಾಕ್ಡೌನ್ ಹೊಣೆಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಜಿಲ್ಲೆಗಳಲ್ಲಿ ಕೋವಿಡ್ ನಿಯಮಗಳು ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವಂತೆ ಡಿಸಿಗಳಿಗೆ ಸೂಚಿಸಿದ್ದಾರೆ.
ಇದನ್ನು ಓದಿ: ಯಡಿಯೂರಪ್ಪಗೆ ಮತ್ತೆ ಕೋವಿಡ್; ಮಸ್ಕಿಯಲ್ಲಿ ನಿರ್ಲಕ್ಷ್ಯ ತೋರಿ ಸೋಂಕು ಅಂಟಿಸಿಕೊಂಡರಾ ಸಿಎಂ?
ತತಕ್ಷಣದಲ್ಲಿ ಕೋವಿಡ್ ನಿರ್ವಹಣೆಗೆ ಸಿಎಂ ಹಣವನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಶಾಸಕರ ಅನುಮತಿ ಮೇರೆಗೆ ಶಾಸಕರ ನಿಧಿಯ ಹಣವನ್ನೂ ಕೋವಿಡ್ ನಿರ್ವಹಣೆ ಬಳಸಲು ಮುಂದಾಗಿದ್ದಾರೆ. ಇನ್ನು 2,000ಕ್ಕೂ ಹೆಚ್ಚು ಸಕ್ರಿಯ ಕೇಸ್ಗಳಿರುವ ಜಿಲ್ಲೆಗಳಲ್ಲಿ ಹೊಸ ಕೋವಿಡ್ ಆಸ್ಪತ್ರೆಯನ್ನು ನಿರ್ಮಿಸಬೇಕು. ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸುವಂತೆಯೂ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಉತ್ತರ ಪ್ರದೇಶದ ಯಾರೊಬ್ಬರೂ ಮಾಸ್ಕ್ ಧರಿಸದೇ ಮನೆಯಿಂದ ಹೊರ ಬರುವಂತಿಲ್ಲ. ಮಾಸ್ಕ್ ಧರಿಸದೇ ಇದ್ದರೆ 1 ಸಾವಿರ ದಂಡ ಕಟ್ಟಬೇಕಾಗುತ್ತದೆ. 2ನೇ ಬಾರಿ ಮಾಸ್ಕ್ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ಬರೋಬ್ಬರಿ 10 ಸಾವಿರ ದಂಡ ಕಟ್ಟಬೇಕಾಗುತ್ತದೆ. ಇದರಲ್ಲಿ ಯಾವುದೇ ಮುಲಾಜಿಲ್ಲ ಎಂದು ಸಿಎಂ ಯೋಗಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇನ್ನು ನಿನ್ನೆ ಒಂದೇ ದಿನ ಉತ್ತರ ಪ್ರದೇಶದಲ್ಲಿ 22,439 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 104 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜಧಾನಿ ಲಖನೌದಲ್ಲಿ 24 ಗಂಟೆಗಳ ಅವಧಿಯಲ್ಲಿ 5,183 ಹೊಸ ಕೋವಿಡ್ ಕೇಸ್ ಪತ್ತೆಯಾಗಿದ್ದು, 23 ಮಂದಿ ಮೃತಪಟ್ಟಿದ್ದಾರೆ.
(ವರದಿ: ಕಾವ್ಯಾ. ವಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ