ಉತ್ತರಪ್ರದೇಶ (ಜುಲೈ 28); ದಿವಂಗತ ಮಾಜಿ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗೆಗಿನ ಇತಿಹಾಸಕ್ಕೆ ಸಂಬಂಧಿಸಿದ ಭಾಗಗಳನ್ನು ಉತ್ತರಪ್ರದೇಶ ಶಿಕ್ಷಣ ಇಲಾಖೆ 12ನೇ ತರಗತಿ ಪಠ್ಯಕ್ರಮದಿಂದ ಕೈಬಿಟ್ಟಿದೆ. ರಾಜ್ಯ ಕಾಂಗ್ರೆಸ್ ಘಟಕ ಉತ್ತರಪ್ರದೇಶ ಬಿಜೆಪಿ ಸರ್ಕಾರದ ಈ ಕ್ರಮವನ್ನು ವಿರೋಧಿಸಿದ್ದು ರಾಜ್ಯಾದ್ಯಂತ ಆಂದೋಲನಕ್ಕೆ ಕರೆ ನೀಡುವುದಾಗಿ ಬೆದರಿಕೆ ಒಡ್ಡಿದೆ.
ಬಿಜೆಪಿ ಪಕ್ಷದ ಈ ನಡೆಯನ್ನು ಪಿತೂರಿ ಎಂದು ಕರೆದಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಕಾಂಗ್ರೆಸ್ ಮುಖಂಡ ಅನಿಲ್ ಶಾಸ್ತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿ ಬೆನ್ ಪಟೇಲ್ ಅವರಿಗೆ ಭಾನುವಾರ ಸಂಜೆಯೇ ಪತ್ರ ಬರೆದಿದ್ದು, ಪಠ್ಯಕ್ರಮದಿಂದ ಕೈಬಿಟ್ಟ ಇತಿಹಾಸದ ಭಾಗಗಳನ್ನು ಪಠ್ಯಕ್ರಮದಲ್ಲಿ ಪುನಃ ಸೇರಿಸುವಂತೆ ಒತ್ತಾಯಿಸಿದ್ದಾರೆ.
"ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸ್ವಾತಂತ್ರ್ಯದ ನಂತರ ದೇಶದ ರಚನೆಯಲ್ಲಿ ಕಾಂಗ್ರೆಸ್ ಕೊಡುಗೆಯನ್ನು ತೊಡೆದುಹಾಕಲು ಬಯಸುತ್ತಿವೆ. ಆದರೆ, ಇದನ್ನು ಕಂಡು ಕಾಣದಂತಿರಲು ನಮ್ಮಿಂದ ಸಾಧ್ಯವಿಲ್ಲ. ಈ ಕೂಡಲೇ ರಾಜ್ಯ ಬಿಜೆಪಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದೆ ಇದ್ದರೆ, ರಾಜ್ಯಾದ್ಯಂತ ಈ ಕುರಿತು ಹೋರಾಟ, ಆಂದೋಲನಗಳನ್ನು ನಡೆಸಲಾಗುವುದು" ಎಂದು ಅನಿಲ್ ಶಾಸ್ತ್ರಿ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಶಾಲೆ ನಡೆಯುವ ಅವಧಿ ಕಡಿತಗೊಂಡಿದ್ದರಿಂದ 9-12 ತರಗತಿಗಳಿಂದ ಪಠ್ಯಕ್ರಮದ ತರ್ಕಬದ್ಧಗೊಳಿಸುವಿಕೆಯ ಭಾಗವಾಗಿ ಕೆಲ ಪಠ್ಯಕ್ರಮಗಳನ್ನು ಕೈಬಿಡಲಾಗಿದೆ ಎಂದು ಉತ್ತರಪ್ರದೇಶ ಶಿಕ್ಷಣ ಮಂಡಳಿ ತಿಳಿಸಿದೆ.
ಕಾಂಗ್ರೆಸ್, ನೆಹರೂ ಮತ್ತು ಶಾಸ್ತ್ರಿಗೆ ಸಂಬಂಧಿಸಿದ ಭಾಗಗಳು ಯುನಿಟ್ ಬಿ ಎಂಬ ವಿಭಾಗದ ಅಡಿಯಲ್ಲಿ 12 ನೇ ತರಗತಿಯ ಪಠ್ಯಕ್ರಮದ ಒಂದು ಭಾಗವಾಗಿದ್ದವು. ಇದು ‘ಸ್ವತಂತ್ರ ಭಾರತದಲ್ಲಿ ರಾಜಕೀಯ’ ಎಂಬ ಪಠ್ಯದ ಭಾಗವಾಗಿತ್ತು.
’’ಏಕ ಪಕ್ಷ (ಕಾಂಗ್ರೆಸ್) ಪ್ರಾಬಲ್ಯದ ಹಂತ, ಮೊದಲ ಮೂರು ಸಾರ್ವತ್ರಿಕ ಚುನಾವಣೆಗಳು, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪ್ರಾಬಲ್ಯದ ಸ್ವರೂಪ, ಕಾಂಗ್ರೆಸ್ ಕಾರ್ಯವೈಖರಿಗೆ ಸವಾಲುಗಳು, ನೆಹರೂ ಮತ್ತು ಶಾಸ್ತ್ರಿ ನಂತರದ ಸಾಮಾನ್ಯ ಮಾದರಿಗಳು, 1967 ರ ಚುನಾವಣೆ, ಕಾಂಗ್ರೆಸ್ ವಿಭಜನೆ ಮತ್ತು ಮರು ಸಂಘಟನೆ, 1971ರ ಚುನಾವಣೆಯಲ್ಲಿ ಪಕ್ಷದ ಗೆಲುವು’’ ಮುಂತಾದವುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಠ್ಯದಿಂದ ಕೈಬಿಡಲಾಗಿದೆ.
ಇದನ್ನೂ ಓದಿ : ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಮೂಲಕ ಬಿಜೆಪಿ ರೈತರನ್ನು ಬೀದಿಪಾಲು ಮಾಡಲಿದೆ; ದೇವೇಗೌಡ ಅಸಮಾಧಾನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ