UP Elections: ನಾಳೆ 4ನೇ ಹಂತದ ಮತದಾನ, ಬಿಜೆಪಿ ಪಾಲಿಗೆ ಆಗುವುದೇ ವರದಾನ?

4ನೇ ಹಂತದಲ್ಲಿ 9 ಜಿಲ್ಲೆಗಳ 60 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ 60 ಸ್ಥಾನಗಳ ಪೈಕಿ 2017ರ ಚುನಾವಣೆಯಲ್ಲಿ ಬಿಜೆಪಿ 51 ಮತ್ತು ಅದರ ಮಿತ್ರಪಕ್ಷ ಅಪನಾ ದಳ 1 ಸ್ಥಾನ ಗೆದ್ದಿದ್ದವು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ,  (ಫೆ. 22 ): ರಾಷ್ಟ್ರ ರಾಜಕಾರಣದ ಮೇಲೂ ಗಮನಾರ್ಹ ಪರಿಣಾಮ ಬೀರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಈ ಬಾರಿ ಏಳು ಹಂತದಲ್ಲಿ ಮತದಾನ ನಡೆಯಲಿದ್ದು ನಾಳೆ ನಾಲ್ಕನೇ ಹಂತದ (Fourth Pahse) ಮತದಾನ ನಡೆಯಲಿದೆ. ಮೊದಲ ಮೂರು ಹಂತಗಳಲ್ಲಿ ಬಿಜೆಪಿ (BJP) ಬಗ್ಗೆ ಅಷ್ಟೇನೂ ಪೂರಕವಾದ ವಾತಾವರಣ ಕಂಡುಬಂದಿರಲಿಲ್ಲ. ಕಳೆದ ಚುನಾವಣೆಯ ದೃಷ್ಟಿಯಲ್ಲಿ ನೋಡುವುದಾದರೆ ನಾಲ್ಕನೇ ಹಂತದಲ್ಲಿ ಬಿಜೆಪಿಗೆ ಒಂದಿಷ್ಟು ಅನುಕೂಲಕರವಾದ ಅಂಶಗಳಿವೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಹಂತದ ಮತದಾನ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ.

ಮತದಾನಕ್ಕೆ 1 ಗಂಟೆ ಹೆಚ್ಚು ಸಮಯ
ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲದಿರುವುದರಿಂದ ಕೇಂದ್ರ ಚುನಾವಣಾ ಆಯೋಗ ವಿಶೇಷವಾದ ನಿಯಮಗಳೊಂದಿಗೆ ಮತದಾನ ನಡೆಸುತ್ತಿದೆ. ಈ ಬಾರಿ ಬೆಳಿಗ್ಗೆ 7ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲು ಅವಕಾಶ ಮಾಡಿಕೊಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಮತದಾನದ ಪ್ರಕ್ರಿಯೆ ನಡೆಯಬೇಕಿರುವುದರಿಂದ ಮತದಾನದ ಅವಧಿಯನ್ನು ಬೆಳಿಗ್ಗೆ 8ರಿಂದ ಸಂಜೆ 5ಗಂಟೆಯ ಬದಲಿಗೆ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ನಿಗಧಿ ಮಾಡಲಾಗಿದೆ. ಅಂದರೆ 1 ಗಂಟೆ ಹೆಚ್ಚು ಸಮಯ ನೀಡಲಾಗಿದೆ.

ಮೊದಲೆರಡು ಹಂತಗಳಲ್ಲಿ SP-RLDಗೆ ಮುನ್ನಡೆ ಸಾಧ್ಯತೆ
ಫೆಬ್ರವರಿ 10ರಂದು‌ 11 ಜಿಲ್ಲೆಗಳ 58 ಕ್ಷೇತ್ರಗಳಿಗೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನವಾಗಿತ್ತು. ಫೆಬ್ರವರಿ 14ರಂದು ಮತ್ತದೇ ಪಶ್ಚಿಮ ಉತ್ತರ ಪ್ರದೇಶದ 9 ಜಿಲ್ಲೆಗಳ 55 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.‌ ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದ ಪ್ರಬಾಲ್ಯ ಹೆಚ್ಚಾಗಿರುವುದರಿಂದ ಮತ್ತು ಜಾಟ್ ಸಮುದಾಯದ ಪಕ್ಷ ಎಂದೇ ಕರೆಯಲ್ಪಡುವ ರಾಷ್ಟ್ರೀಯ ಲೋಕದಳವು ಈ ಬಾರಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಮೊದಲೆರಡು ಹಂತದ ಮತದಾನದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುವ ಸಾಧ್ಯತೆಗಳು‌ ಹೆಚ್ಚಿವೆ ಎನ್ನಲಾಗುತ್ತಿದೆ. ಕಳೆದ ಬಾರಿ ಬಿಜೆಪಿ ಮತ್ತು ರಾಷ್ಟ್ರೀಯ ಲೋಕದಳ ಒಂದಾಗಿದ್ದ ಕಾರಣ ಇವೇ 20 ಜಿಲ್ಲೆಗಳ 113 ಕ್ಷೇತ್ರಗಳಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನ ಗೆದ್ದಿತ್ತು.

ಇದನ್ನು ಓದಿ:  ಡಿಎಂಕೆ ಮುನ್ನಡೆ; ಚೆನ್ನೈ ವಾರ್ಡ್​ನಲ್ಲಿ ಕಿರಿಯ ಅಭ್ಯರ್ಥಿಗೆ ಒಲಿದ ಜಯ

ಮೂರನೇ ಹಂತದಲ್ಲಿ ಯಾದವರ ಪ್ರಾಬಲ್ಯ
ಫೆಬ್ರವರಿ 20ರಂದು 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮೂರನೇ ಹಂತದ ಮತದಾನದಲ್ಲೂ ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಮೂರನೇ ಹಂತದಲ್ಲಿ ಮತದಾನ ನಡೆದ ಹತ್ರಾಸ್, ಇಟಾವಾ, ಮೈನಪುರಿ, ಕನೌಜ್, ಕಾನ್ಪುರ್, ಫಿರೋಜಾಬಾದ್, ಝಾನ್ಸಿ, ಲಲಿತ್ ಪುರ್, ಕಾಸಾಗಂಜ್ ಮತ್ತಿತರ ಜಿಲ್ಲೆಗಳು ಸಮಾಜವಾದಿ ಪಕ್ಷದ ಬಾಹುಳ್ಯವುಳ್ಳವು. ಇದೇ ಕಾರಣಕ್ಕೆ ಮೂರನೇ ಹಂತದಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ 'ಮೊದಲೆರಡು ಹಂತಗಳಲ್ಲಿ ಸಮಾಜವಾದಿ ಮತ್ತು ರಾಷ್ಟ್ರೀಯ ಲೋಕದಳದ ಮೈತ್ರಿ ಕೂಟವು ಶತಕ ಬಾರಿಸಿದೆ (100 ಸೀಟು ಗೆದ್ದಿದೆ). ಈಗ ಮೂರನೇ ಹಂತದಲ್ಲೂ ಮುನ್ನಡೆ ನಮ್ಮದೆ. ಮಾರ್ಚ್ 10ರಂದು ಫಲಿತಾಂಶ ‌ಹೊರ ಬಂದಾಗ ಬಿಜೆಪಿ ನಾಶವಾಗಿರುತ್ತದೆ' ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದನ್ನು ಓದಿ: Uttarakhandದಲ್ಲಿ ಕಮರಿಗೆ ಬಿದ್ಧ ಬಸ್; 14 ಮಂದಿ ಸಾವು: ಪ್ರಧಾನಿ ಸಂತಾಪ

4ನೇ ಹಂತದ ಮತದಾನ ಬಿಜೆಪಿಗೆ ನಿರ್ಣಾಯಕ
4ನೇ ಹಂತದ ಮತದಾನ ಬಿಜೆಪಿಗೆ ನಿರ್ಣಾಯಕವಾದುದಾಗಿದೆ. 4ನೇ ಹಂತದಲ್ಲಿ 9 ಜಿಲ್ಲೆಗಳ 60 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ 60 ಸ್ಥಾನಗಳ ಪೈಕಿ 2017ರ ಚುನಾವಣೆಯಲ್ಲಿ ಬಿಜೆಪಿ 51 ಮತ್ತು ಅದರ ಮಿತ್ರಪಕ್ಷ ಅಪನಾ ದಳ 1 ಸ್ಥಾನ ಗೆದ್ದಿದ್ದವು. ಸಮಾಜವಾದಿ ಪಕ್ಷ 4, ಕಾಂಗ್ರೆಸ್ ಮತ್ತು ಬಿಎಸ್‌ಪಿ ತಲಾ 2 ಸ್ಥಾನಗಳನ್ನು ಗೆದ್ದಿದ್ದವು. 9 ಜಿಲ್ಲೆಗಳ ಪೈಕಿ 4 ಜಿಲ್ಲೆಗಳಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಲಕ್ನೋ ಜಿಲ್ಲೆಯ 9 ಸ್ಥಾನಗಳ ಪೈಕಿ 8 ಅನ್ನು ಗೆದ್ದಿತ್ತು. ಹರ್ದೋಯ್ ಜಿಲ್ಲೆಯಲ್ಲಿ 8ರ ಪೈಕಿ 7, ಸೀತಾಪುರ ಜೆಲ್ಲೆಯಲ್ಲಿ 9ರ ಪೈಕಿ 7 ಬಿಜೆಪಿ ಪಾಲಾಗಿದ್ದವು. ಇಂಥ ಭದ್ರಕೋಟೆಯನ್ನು ಆಡಳಿತವಿರೋಧಿ ಅಲೆಯ ಕಾರಣಕ್ಕೆ ಬಿಜೆಪಿ ಮತ್ತೊಮ್ಮೆ ಉಳಿಸಿಕೊಳ್ಳುವುದೇ ಎಂಬ ಪ್ರಶ್ನೆ ಎದುರಾಗಿದೆ.

ಲಖಿಂಪುರ್ ಖೇರಿ ಪ್ರಕರಣದ ಪರಿಣಾಮ
ಇತ್ತೀಚೆಗೆ ನಡೆದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಕಾರು ಹರಿಸಿ ಕೊಂದರು ಎಂದು ಹೇಳಲಾಗುವ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ಹಾಗೂ ದಲಿತ ಯುವತಿಯನ್ನು ಹತ್ಯೆ ಮಾಡಿ ಅವರ ಕುಟುಂಬದವರಿಗೆ ಶವಸಂಸ್ಕಾರ ಮಾಡುವುದಕ್ಕೂ ಅವಕಾಶ ನೀಡದಿದ್ದ ಉನ್ನಾವೋ ಜಿಲ್ಲೆಗಳಲ್ಲೂ ನಾಳೆ ಮತದಾನ ನಡೆಯಲಿದೆ. ಈ ಎರಡು ಘಟನೆಗಳಿಂದ ರೈತರು ಮತ್ತು ದಲಿತರು ಬಿಜೆಪಿ ವಿರುದ್ಧ ಬಂಡೆದ್ದಿರುವುದರಿಂದ ಬಿಜೆಪಿಗೆ ಲಖೀಂಪುರ್ ಖೇರಿ ಹಾಗೂ ಉನ್ನಾವೋದ ಪಕ್ಷದ ಜಿಲ್ಲೆಗಳಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅದು ಎಷ್ಟು ಪರಿಣಾಮಕಾರಿ ಆಗಿರಲಿದೆ ಎಂಬುದು ಫಲಿತಾಂಶ ಬಂದ ಬಳಿಕ ಗೊತ್ತಾಗಲಿದೆ.
Published by:Seema R
First published: