ಉತ್ತರ ಪ್ರದೇಶ: ಬಡ ರೈತನೊಬ್ಬನನ್ನು (Farmer) ಲೇವಾದೇವಿಗಾರನೊಬ್ಬ ಕೇವಲ 5 ಸಾವಿರ ರೂಪಾಯಿಗೋಸ್ಕರ ಹೊಡೆದು ಕೊಂದಿರುವ (Murder) ದಾರುಣ ಘಟನೆ ಉತ್ತರ ಪ್ರದೇಶದ (Uttar Pradesh) ಮುಜಾಫರ್ ನಗರದಲ್ಲಿ ನಡೆದಿದೆ. ಲೇವಾದೇವಿ (Money Lender) ನಡೆಸುವ ವ್ಯಕ್ತಿಯೊಬ್ಬನಿಂದ ರೈತ ತನ್ನ ಮಗಳ ಮದುವೆಗೆಂದು 5 ವರ್ಷಗಳ ಹಿಂದೆ 30 ಸಾವಿರ ರೂಪಾಯಿಗಳನ್ನ ಸಾಲದ ರೂಪದಲ್ಲಿ ಪಡೆದುಕೊಂಡಿದ್ದ. ಸ್ವಲ್ಪ ದಿನಗಳ ಹಿಂದೆ ಬಡ್ಡಿ ಸಮೇತವಾಗಿ 45 ಸಾವಿರ ರೂಪಾಯಿಗಳನ್ನು ಲೇವದೇವಿಗಾರನಿಗೆ ಹಿಂತಿರುಗಿಸಿದ್ದ. 15 ಸಾವಿರ ಬಡ್ಡಿ ನೀಡಿದರೂ ಕೂಡ ಸಾಲ ಕೊಟ್ಟವ ಮಾತ್ರ ಇನ್ನೂ 5 ಸಾವಿರ ಬಡ್ಡಿ ಬಾಕಿ ಇದೆ ಎಂದು ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ಜಗಳ ಮಾಡಿಕೊಂಡು ರೈತನ ಮೇಲೆ ಹಲ್ಲೆ ಮಾಡಿದ್ದು, ರೈತರ ಸಾವನ್ನಪ್ಪಿದ್ದಾನೆ.
ಕೆಲಸ ಮಾಡುತ್ತಿದ್ದಾಗ ಅಪಹರಣ
ಬಡ ರೈತ ಚೌನಿರಾಮ್ ಅಲಿಯಾಸ್ ಮಹಾಚಂದ್ ಎಂಬಾತ ಸುದೀರ್ ಸಿಂಗ್ ಎಂಬಾತನಿಂದ ಸಾಲ ಪಡೆದಿದ್ದರು. ಐದು ವರ್ಷಗಳ ನಂತರ ಬಡ್ಡಿ ಸಮೇತ 45 ಸಾವಿರ ರೂಪಾಯಿಗಳನ್ನು ವಾಪಸ್ ಮಾಡಿದ್ದಾರೆ. ಆದರೂ ಇನ್ನೂ ಬಡ್ಡಿ ಹಣ ಕೊಡಬೇಕಿದೆ ಎಂದು ಸುದೀರ್ ಹೇಳಿ ಪ್ರತಿ ದಿನ ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ರೈತರ ಒಪ್ಪಿರಲಿಲ್ಲ. ಶನಿವಾರ ಬೇರೆಯವರ ಗದ್ದೆಯಲ್ಲಿ ಕಬ್ಬು ಕಡಿಯುತ್ತಿದ್ದ ವೇಳೆ ಅಲ್ಲಿಗೆ ತೆರಳಿ ರೈತ ಮಹಾಚಂದ್ನನ್ನು ಅಪಹರಣ ಮಾಡಿದ್ದಾನೆ.
ರೂಮಿಗೆ ಕೂಡಿ ಹಾಕಿ ಹಲ್ಲೆ
ಶನಿವಾರ ನಾಗ್ಲಾ ಮುಬಾರಿಕ್ ಗ್ರಾಮದ ಬಳಿ ಬೇರೊಬ್ಬರ ಹೊಲದಲ್ಲಿ ರೈತ ಕಬ್ಬು ಕಡಿಯುತ್ತಿದ್ದ. ಅದೇ ಸಮಯದಲ್ಲಿ ಲೇವಾದೇವಿಗಾರ ಸುಧೀರ್ ತನ್ನ ಮಗ ಮತ್ತು ಮತ್ತೊಬ್ಬ ವ್ಯಕ್ತಿಯೊಂದಿಗೆ ಅಲ್ಲಿಗೆ ಬಂದಿದ್ದು, ಚೋನಿ ರಾಮ್ ಅಲಿಯಾಸ್ ಮಹಾಚಂದ್ ನನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾನೆ. ನಂತರ ಕೋಣೆಯೊಂದರಲ್ಲಿ ಕೂಡಿ ಹಾಕಿ 5 ಸಾವಿರ ರೂಪಾಯಿಗಾಗಿ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಮಹಾಚಂದ್ ಗಂಭೀರ ಗಾಯಗೊಂಡಿದ್ದಾನೆ.
ಮೂರು ಜನ ಮನಬಂದಂತೆ ಥಳಿಸಿದ್ದರಿಂದ ಮಹಾಚಂದ್ಗೆ ಗಂಭೀರ ಗಾಯವಾಗಿ ಕುಸಿದುಬಿದ್ದಿದ್ದಾರೆ. ಇದರಿಂದ ಹೆದರಿದ ಸುದೀರ್ ಮಹಾಚಂದ್ ಕುಟುಂಬಸ್ಥರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾನೆ. ಆದರೆ ಕುಟುಂಬಸ್ಥರು ಆಸ್ಪತ್ರೆಗೆ ಕರೆತರುವ ದಾರಿಯಲ್ಲಿ ಮಹಾಚಂದ್ ಸಾವನ್ನಪ್ಪಿದ್ದಾರೆ.
ಮಾನವೀಯತೆ ಮರೆತ ಆಸ್ಪತ್ರೆ ಸಿಬ್ಬಂದಿ, ಪೊಲೀಸ್
ಗಂಭೀರವಾಗಿ ಗಾಯಗೊಂಡಿದ್ದ ಮಹಾಚಂದ್ನನ್ನು ಆಸ್ಪತ್ರೆಗೆ ತಂದಾಗ ವೈದ್ಯರು ಮತ್ತೆ ಆಸ್ಪತ್ರೆ ಸಿಬ್ಬಂದಿ ದೂರು ದಾಖಲಾಗದೇ ರೋಗಿಯನ್ನು ದಾಖಲಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ತಕ್ಷಣ ಗಾಯಾಳು ರೈತನನ್ನು ಕುಟುಂಬಸ್ಥರು ಜನಸಠ್ ಪೊಲೀಸ್ ಠಾಣೆಗೆ ಕರೆದೊಯ್ದರು. ಆದರೆ ಪೊಲೀಸರು ಈ ಪ್ರಕರಣ ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದಿಲ್ಲ, ಸಿಖೇಡಾ ವ್ಯಾಪ್ತಿಗೆ ಸೇರಿದೆ ಎಂದು ತಿಳಿಸಿದ್ದಾರೆ. ಕುಟುಂಬಸ್ಥರು ಪೊಲೀಸರೊಂದಿಗೆ ಮೊದಲು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ಸೇರುವ ಮೊದಲೇ ಗಾಯಗೊಂಡಿದ್ದ ರೈತ ಮೃತಪಟ್ಟಿದ್ದಾರೆ.
ಪ್ರತಿಭಟನೆ ನಂತರ ದೂರು
ಮಹಾಚಂದ್ ಸಾವಿನ ನಂತರ ರೊಚ್ಚಿಗೆದ್ದ ಸ್ಥಳೀಯರು ಹಾಗೂ ರೈತನ ಕುಟುಂಬಸ್ಥರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.
ಕೊಲೆ ಹಾಗೂ ಅಪಹರಣ ಪ್ರಕರಣ ದಾಖಲು
ಆರೋಪಿಗಳ ವಿರುದ್ಧ ಸಿಖೇಡಾ ಪೊಲೀಸ್ ಠಾಣೆಯಲ್ಲಿ 302 (ಕೊಲೆ) ಮತ್ತು 364 (ಅಪಹರಣ) ಅಡಿಯಲ್ಲಿ ಸುದೀರ್, ಆತನ ಮಗ ಲುಕ್ಕಿ ಹಾಗೂ ಅವರ ಇಬ್ಬರು ಸಹಚರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ