ಲಕ್ನೋ (ಜುಲೈ 11): ವಿಶ್ವ ಜನಸಂಖ್ಯಾ ದಿನವಾದ (World Population Day) ಇಂದು ಉತ್ತರ ಪ್ರದೇಶ ಸರ್ಕಾರ ತನ್ನ ನೂತನ ಜನಸಂಖ್ಯಾ ನೀತಿ 2021-30 ಅನ್ನು ಅನಾವರಣಗೊಳಿಸುತ್ತಿದೆ. ಕೆಲ ವಿವಾದಕ್ಕೂ ಕಾರಣವಾಗಿರುವ ಈ ಜನಸಂಖ್ಯಾ ನೀತಿಯು ಜನರಿಗೆ 2ಕ್ಕಿಂತ ಹೆಚ್ಚು ಮಕ್ಕಳು ಮಾಡಿಕೊಳ್ಳದಂತೆ ಉತ್ತೇಜಿಸುತ್ತದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉ. ಪ್ರ. ಸರ್ಕಾರ ಈಗಾಗಲೇ ಉತ್ತರ ಪ್ರದೇಶ ಜನಸಂಖ್ಯೆ ನಿಯಂತ್ರಣ, ಸ್ಥಿರತೆ ಮತ್ತು ಕಲ್ಯಾಣ ಕಾಯ್ದೆಯ ಕರಡು ಮಸೂದೆ ರೂಪಿಸಿದೆ. ಇಂದು ಇದರ ಜನಸಂಖ್ಯಾ ನೀತಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ, ಸಮಾಜದಲ್ಲಿ ಎದುರಾಗಿರುವ ಹಲವು ಸಮಸ್ಯೆಗಳಿಗೆ ಜನಸಂಖ್ಯಾ ಸ್ಫೋಟವೇ ಮುಖ್ಯ ಕಾರಣವಾಗಿದ್ದು, ಜನರಿಗೆ ಇದರ ಅರಿವು ಇರಬೇಕು ಎಂದು ಮುಖ್ಯಮಂತ್ರಿಗಳು ಇಂದು ತಮ್ಮ ರಾಜ್ಯದ ಜನತೆಗೆ ಸಂದೇಶ ನೀಡಿದ್ದಾರೆ. ಜನಸಂಖ್ಯೆ ಹೆಚ್ಚಳದಿಂದಾಗಿ ಜನರಿಗೆ ಸಮನಾಗಿ ಸಂಪನ್ಮೂಲ ಹಂಚಿಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಜನಸಂಖ್ಯೆ ನಿಯಂತ್ರಿಸುವುದು ಈಗ ಅತ್ಯಗತ್ಯ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಷ್ಟ್ರೀಯ ಕೌಟುಂಬ ಆರೋಗ್ಯ ಸಮೀಕ್ಷೆ-4 ವರದಿಯ ಅಂಶಗಳನ್ನ ಆಧರಿಸಿ ಉತ್ತರ ಪ್ರದೇಶ ಆರೋಗ್ಯ ಇಲಾಖೆ ನೂತನ ಜನಸಂಖ್ಯಾ ಕರಡು ಮಸೂದೆ ರೂಪಿಸಿದೆ. ಎರಡು ಮಕ್ಕಳಿಗೆ ತಮ್ಮ ಸಂತಾನ ನಿಯಂತ್ರಿಸಿಕೊಳ್ಳುವ ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳಲ್ಲಿ ಹೆಚ್ಚಿನ ಆದ್ಯತೆ, ಸಾಲದ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳನ್ನ ಸರ್ಕಾರ ನೀಡುತ್ತದೆ. ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಸೇರಿದಂತೆ ಕುಟುಂಬ ನಿಯಂತ್ರಣ ಯೋಜನೆಗೆ ಹೆಚ್ಚು ಪುಷ್ಟಿ ನೀಡಲಾಗುತ್ತದೆ. ಹಾಗೆಯೇ, ಕಾಯ್ದೆ ಜಾರಿಗೆ ಬಂದ ನಂತರ ಮೂರನೇ ಮಗು ಹೆರುವ ಕುಟುಂಬಕ್ಕೆ ಸರ್ಕಾರದ ಕೆಲ ಸೌಲಭ್ಯಗಳನ್ನ ನಿರಾಕರಿಸಲಾಗುತ್ತದೆ.
ಇವತ್ತು ಜನಸಂಖ್ಯಾ ನೀತಿ ಬಿಡುಗಡೆಯಾದರೂ ಅದು ತತ್ಕ್ಷಣಕ್ಕೆ ಜಾರಿಗೆ ಬರುವುದಿಲ್ಲ. ಇದರ ಮಸೂದೆ ಇನ್ನೂ ಕರಡು ರೂಪದಲ್ಲಿದೆ. ಸಾರ್ವಜನಿಕರಿಂದ ಅಭಿಪ್ರಾಯಗಳನ್ನ ಸಂಗ್ರಹಿಸಲಾಗುತ್ತದೆ. ಬಳಿಕ ಕಾನೂನು ಆಯೋಗವು ಈ ಅಭಿಪ್ರಾಯಗಳನ್ನ ಅವಲೋಕಿಸುತ್ತದೆ. ಗೆಜೆಟ್ನಲ್ಲಿ ಇದನ್ನ ಪ್ರಕಟಿಸಿದ ಒಂದು ವರ್ಷದ ಬಳಿಕ ಹೊಸ ಕಾನೂನು ಜಾರಿಗೆ ಬರುತ್ತದೆ.
ಇದನ್ನೂ ಓದಿ: Poor English: ಕಳಪೆ ಇಂಗ್ಲಿಷ್ನಿಂದ ಟ್ರೋಲ್ ಆದ ನೂತನ ಕೇಂದ್ರ ಆರೋಗ್ಯ ಸಚಿವ!
ಉತ್ತರ ಪ್ರದೇಶದ ಜನಸಂಖ್ಯಾ ನೀತಿಯ ಪ್ರಮುಖ ಅಂಶಗಳು:
* ಎರಡು ಮಕ್ಕಳಾದ ಬಳಿಕ ದಂಪತಿಯಲ್ಲಿ ಒಬ್ಬರಾದರೂ ಸ್ವಯಿಚ್ಛೆಯಿಂದ ಗರ್ಭನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಹಲವು ವಿನಾಯಿತಿಗಳನ್ನ ನೀಡಲಾಗುತ್ತದೆ. ಮನೆ ಕಟ್ಟಲು ಸಾಲ, ಮನೆ ಖರೀದಿಸಿದರೆ ಕಡಿಮೆ ಬಡ್ಡಿಯಲ್ಲಿ ಸಾಲ, ನೀರು ವಿದ್ಯುತ್ ಮನೆ ತೆರಿಗೆ ಇತ್ಯಾದಿಯಲ್ಲಿ ವಿನಾಯಿತಿ ಕೊಡಲಾಗುತ್ತದೆ.
* ಕುಟುಂಬ ನಿಯಂತ್ರಣಕ್ಕೆ ಒಳಗಾದ ಕುಟುಂಬದಲ್ಲಿ 11ರಿಂದ 19 ವರ್ಷದವರೆಗಿನ ವಯಸ್ಸಿನವರಿಗೆ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ಆಹಾರದ ಬಗ್ಗೆ ಸರ್ಕಾರ ಒಂದಷ್ಟು ಹೊಣೆ ಹೊತ್ತು ನೆರವು ನೀಡುತ್ತದೆ. ಹಾಗೆಯೇ, ಅಂಥ ಕುಟುಂಬದ ಹಿರಿಯರ ಪಾಲನೆಗೂ ಸಹಾಯ ಮಾಡಲಾಗುತ್ತದೆ.
* ಜನಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿಗೆ ಬಂದ ಬಳಿಕ ಮೂರನೇ ಮಗು ಮಾಡಿಕೊಂಡ ಕುಟುಂಬಕ್ಕೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನ ನಿರಾಕರಿಸಲಾಗುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ರಾಜ್ಯ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವಂತಿಲ್ಲ. ಸರ್ಕಾರಿ ಉದ್ಯೋಗದಲ್ಲಿದ್ದರೆ ಬಡ್ತಿ ಸಿಗುವುದಿಲ್ಲ. ಅಂಥ ಕುಟುಂಬದ ನಾಲ್ವರಿಗೆ ಮಾತ್ರ ರೇಷನ್ ಕಾರ್ಡ್ ಸೌಲಭ್ಯ ಇರುತ್ತದೆ. ಹಾಗೆಯೇ, ಸರ್ಕಾರದಿಂದ ಸಬ್ಸಿಡಿಯನ್ನೂ ನಿರಾಕರಿಸಲಾಗುತ್ತದೆ.
ವಿರೋಧ ಯಾಕೆ?
ಉತ್ತರ ಪ್ರದೇಶ ಸರ್ಕಾರದ ಈ ನೂತನ ಜನಸಂಖ್ಯಾ ನೀತಿಯು ಮುಸ್ಲಿಮ್ ವಿರೋಧಿಯಾಗಿದೆ. ಜನಸಂಖ್ಯೆ ನಿಯಂತ್ರಣದ ಹೆಸರಿನಲ್ಲಿ ಮುಸ್ಲಿಮರನ್ನ ಟಾರ್ಗೆಟ್ ಮಾಡುವ ಹುನ್ನಾರ ಇದೆ ಎಂಬುದು ಸಮಾಜವಾದಿ ಪಕ್ಷದ ಕೆಲ ಶಾಸಕರು ಸೇರಿದಂತೆ ಹಲವರ ಆಕ್ಷೇಪ. ಹಾಗೆಯೇ, ಮರುವಿವಾಹವಾಗುವ ಜನರಿಗೆ ಮಕ್ಕಳು ಮಾಡಿಕೊಳ್ಳಲು ಸಾಧ್ಯವಾಗದಂತಾಗುತ್ತದೆ. ವಿಧವೆ ಅಥವಾ ವಿಚ್ಛೇದಿತ ಮಹಿಳೆಯರು ಹೆಚ್ಚು ಬಾಧಿತರಾಗುತ್ತಾರೆ ಎಂಬ ಅಭಿಪ್ರಾಯವೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ