UP Assembly Election| ಮತ್ತೆ ಯೋಗಿ ಆದಿತ್ಯನಾಥ್​ ನಾಯಕತ್ವದಲ್ಲೇ ವಿಧಾನಸಭೆ ಚುನಾವಣೆಗೆ ಹೋಗಲಿದೆ ಉತ್ತರಪ್ರದೇಶ ಬಿಜೆಪಿ

ಈಗಾಗಲೇ ಉತ್ತಮ ಕೆಲಸ ಮಾಡುತ್ತಿರುವಾಗ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾಕೆ ಕಿತ್ತು ಹಾಕಬೇಕು ಎಂದು ಉತ್ತರಪ್ರದೇಶ ಉಸ್ತುವಾರಿ ಅರುಣ್ ಸಿಂಗ್ ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ.

ಯೋಗಿ ಆದಿತ್ಯನಾಥ್.

ಯೋಗಿ ಆದಿತ್ಯನಾಥ್.

 • Share this:
  ಲಖನೌ (ಜೂನ್ 24); ಇತ್ತೀಚೆಗೆ ಪಂಚರಾಜ್ಯಗಳ ಚುನಾವಣೆ ಎದುರಾಗಿತ್ತು. ಆದರೆ, ಗೆಲುವಿನ ಮಹತ್ವಾಕಾಂಕ್ಷೆಯಲ್ಲಿದ್ದ ಬಿಜೆಪಿ ಪಾಳಯ ಹೀನಾಯ ಸೋಲನುಭವಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗ ಅನುಭವಿಸಿತ್ತು. ಅದರಲ್ಲೂ ಪಶ್ಚಿಮ ಬಂಗಾಳದ ಸೋಲು ಬಿಜೆಪಿಯನ್ನು ಇನ್ನಿಲ್ಲದಂತೆ ಕಾಡುತ್ತಿರುವ ಬೆನ್ನಿಗೆ ಇದೀಗ ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶ ಚುನಾವಣೆ ಎದುರಾಗಿದೆ. ಮುಂದಿನ ವರ್ಷ ಉತ್ತರಪ್ರದೇಶದ ಚುನಾವಣೆಯಲ್ಲಿ ಮತ್ತೆ ಅಧಿಕಾರ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ. ಆದರೆ, ಅದು ಅಷ್ಟು ಸುಲಭವಲ್ಲ ಎಂಬುದು ಕಮಲ ನಾಯಕರಿಗೆ ತಿಳಿದಿದೆ. ಈ ನಡುವೆ ಕೊರೋನಾ ನಿಯಂತ್ರಣ ವಿಚಾರದಲ್ಲಿ ವಿಫಲವಾದ ಸಿಎಂ ಯೋಗಿ ಆದಿತ್ಯನಾಥ್ ನಾಯಕತ್ವದಲ್ಲೇ ಚುನಾವಣೆ ಎದುರಿಸಬೇಕೆ? ಎಂಬ ಜಿಜ್ಞಾಸೆಯೂ ಬಿಜೆಪಿಯಲ್ಲಿ ಮೂಡಿತ್ತು. ಹೀಗಾಗಿ ಯೋಗಿ ತಲೆದಂಡ ಆಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಈ ಎಲ್ಲಾ ಸಂಶಯಗಳಿಗೂ ಇಂದು ಪೂರ್ಣ ವಿರಾಮ ನೀಡಿದ್ದು, ಯೋಗಿ ಆದಿತ್ಯನಾಥ್ ನಾಯಕತ್ವದಲ್ಲೇ ಚುನಾವಣೆ ಎದುರಿಸುವುದಾಗಿ ತಿಳಿಸಿದೆ.

  ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಉಳಿಯಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನ್ ಉಸ್ತುವಾರಿ ಅರುಣ್ ಸಿಂಗ್ ಪ್ರಕಟಿಸಿದ್ದಾರೆ. ಬಿಜೆಪಿಯ ರಾಜಸ್ಥಾನ ಮತ್ತು ಕರ್ನಾಟಕ ಘಟಕಗಳ ಉಸ್ತುವಾರಿ ಹೊತ್ತಿರುವ ಅರುಣ್ ಸಿಂಗ್, ರಾಜಸ್ಥಾನದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಸಂಸದೀಯ ಮಂಡಳಿಯು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

  ಜೈಪುರ ಭೇಟಿಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್‌‌‌ ಸಿಂಗ್, "ಈಗಾಗಲೇ ಉತ್ತಮ ಕೆಲಸ ಮಾಡುತ್ತಿರುವಾಗ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾಕೆ ಕಿತ್ತು ಹಾಕಬೇಕು" ಎಂದು ಪ್ರಶ್ನಿಸಿದ್ದಾರೆ.

  ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ಸರ್ಕಾರ ನಿಭಾಯಿಸಿದ ಬಗ್ಗೆ ಆದಿತ್ಯನಾಥ್ ವಿರುದ್ಧ ಪಕ್ಷದಲ್ಲಿನ ಆಕ್ಷೇಪಗಳು ಹೆಚ್ಚಾಗುತ್ತಿದ್ದಂತೆ ಈ ಹೇಳಿಕೆಗಳು ಹೊರ ಬಂದಿವೆ. ಈ ಹಿಂದೆ ಪಕ್ಷದ ಹಿರಿಯ ಮುಖಂಡ, ಉತ್ತರ ಪ್ರದೇಶ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿಯನ್ನು ಬಿಜೆಪಿಯ ಕೇಂದ್ರ ನಾಯಕತ್ವವು ಅಂತಿಮಗೊಳಿಸುತ್ತದೆ ಎಂದು ಹೇಳಿದ್ದರು.

  ಇದನ್ನೂ ಓದಿ: ಚುನಾವಣೆಗೂ ಮುನ್ನವೇ ಸಿಎಂ ಸೀಟ್​ಗೆ ಟವೆಲ್ ಹಾಕುತ್ತಿರುವ ಕೈ ನಾಯಕರು; ಶಾಸಕ ಅಖಂಡ ಶ್ರೀನಿವಾಸ್ ಹೇಳಿದ್ದೇನು?

  ಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕೂಡ ಇತ್ತೀಚೆಗೆ ಇದೇ ರೀತಿಯ ಹೇಳಿಕೆ ನೀಡಿದ್ದು, ಮುಂಬರುವ ಚುನಾವಣೆಗಳು ಯಾರ ಅಡಿಯಲ್ಲಿ ನಡೆಯಲಿವೆ ಎಂದು ಪಕ್ಷದ ರಾಷ್ಟ್ರೀಯ ನಾಯಕತ್ವ ನಿರ್ಧರಿಸುತ್ತದೆ ಎಂದು ಹೇಳಿದ್ದರು.

  ಈ ನಡುವೆ ಯೋಗಿ ಆದಿತ್ಯನಾಥ್ ಸಹ ಮಾತನಾಡಿದ್ದು, "ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಉತ್ತರಪ್ರದೇಶದಲ್ಲಿ 300ಕ್ಕೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: Crime News| ಮಗು ಅತ್ತಿದ್ದಕ್ಕೆ ಬೈದ ಪಕ್ಕದ ಮನೆಯವರು, ಮನನೊಂದು 12ನೇ ಮಹಡಿಯಿಂದ ಜಿಗಿದು ತಾಯಿ-ಮಗು ಸಾವು!

  ರಾಜಸ್ಥಾನದ ರಾಜ್ಯ ಬಿಜೆಪಿ ಸಮಿತಿ ಮತ್ತು ಮಾಜಿ ಸಿಎಂ ವಸುಂಧರಾ ರಾಜೆ ಗುಂಪಿನ ನಡುವೆ ನಡೆಯುತ್ತಿರುವ ಜಗಳದ ನಡುವೆಯೆ ರಾಜಸ್ಥಾನ ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಮಾತನಾಡಿದ ಅರುಣ್‌‌ ಸಿಂಗ್, "2023 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಸಂಸದೀಯ ಮಂಡಳಿ ನಿರ್ಧರಿಸುತ್ತದೆ" ಎಂದು ಹೇಳಿದ್ದಾರೆ.

  ರಾಜ್ಯ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ವಸುಂಧರ ರಾಜೇ ಅವರ ಬೆಂಬಲಿಗರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. "ಪಕ್ಷದ ಬಗ್ಗೆ ನೀಡುವ ಹೇಳಿಕೆಗಳಿಂದ ಪಕ್ಷಕ್ಕೆ ಲಾಭವಾಗುತ್ತದೆಯೇ ಅಥವಾ ನಷ್ಟವನ್ನುಂಟುಮಾಡುತ್ತದೆಯೇ ಎಂದು ಹೇಳಿಕೆಗಳನ್ನು ನೀಡುವವರು ಮೊದಲು ತಮ್ಮ ಅಭಿಪ್ರಾಯವು ಮೌಲ್ಯಮಾಪನ ಮಾಡಬೇಕು" ಎಂದು ಅರಣ್‌ ಸಿಂಗ್‌ ಹೇಳಿದ್ದಾರೆ. ನಾಯಕರ ಹೇಳಿಕೆಗಳು ಪಕ್ಷವನ್ನು ಯಾವುದೇ ರೀತಿಯಲ್ಲಿ ತೊಂದರೆಗೊಳಗಾಗುವಂತೆ ಮಾಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
  Published by:MAshok Kumar
  First published: