ವಿಶ್ವದಲ್ಲೇ ಅತಿದೊಡ್ಡ ರೈಲು ನೆಟ್ವರ್ಕ್ಗಳನ್ನು ಹೊಂದಿರುವ ಭಾರತ (India), ರೈಲ್ವೆಗೆ ಸಂಬಂಧಿಸಿದಂತೆ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಪ್ರಸ್ತುತ ನಿರ್ಮಾಣವಾಗುತ್ತಿರುವ ರೈಲ್ವೆ ಸೇತುವೆಯೂ (Railway Bridge) ಇಡೀ ವಿಶ್ವವೇ ಭಾರತವನ್ನು ಹಿಂದಿರುಗಿ ನೋಡುವಂತೆ ಮಾಡಿದೆ. ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂದೇ ಪ್ರಸಿದ್ಧಿ ಪಡೆದಿರುವ ಕಾಮಗಾರಿ ಜಮ್ಮು ಮತ್ತು ಕಾಶ್ಮೀರದ (Jammu & Kashmir) ಚೆನಾಬ್ ನದಿಯ ಮೇಲೆ ನಿರ್ಮಾಣಗೊಂಡಿದ್ದು, ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಕಾರ್ಯಚರಣೆಗೂ ಮುನ್ನ ಸೇತುವೆಯ ಪರೀಕ್ಷೆ ನಡೆಯುತ್ತಿದ್ದು, ಆ ವಿಡಿಯೋ ಸದ್ಯ ವೈರಲ್ (Video Viral) ಆಗಿದೆ.
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ತಪಾಸಣೆಯಲ್ಲಿ ಮಹೀಂದ್ರಾ ಬೊಲೆರೊ ಬಳಕೆ
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ನಿರ್ಮಾಣವು ಕೊನೆಯ ಹಂತದಲ್ಲಿದ್ದು, ಸೇತುವೆಯ ಕಾರ್ಯಾಚರಣೆಗೆ ತೆರೆಯುವ ಮೊದಲು ಭಾರತೀಯ ರೈಲ್ವೆ ಸೇತುವೆಯನ್ನು ಪರಿಶೀಲಿಸುತ್ತಿದೆ. ತಪಾಸಣೆಗಾಗಿ ಇಲಾಖೆ ಮಹೀಂದ್ರಾ ಬೊಲೆರೊ ಕಾರನ್ನು ಬಳಸಿಕೊಂಡಿದ್ದು, ವಿಡಿಯೋ ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಪತ್ರಕರ್ತ ಮತ್ತು ಲೇಖಕ ರಾಜೇಂದ್ರ ಬಿ ಅಕ್ಲೇಕರ್ ಅವರು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಮಹೀಂದ್ರ ಕಂಪೆನಿಯ ಬೊಲೆರೊ ವಾಹನದಲ್ಲಿ ಕೆಲವೊಂದು ಮಾರ್ಪಾಡು ಮಾಡಿ, ಈ ರೈಲ್ವೆ ಹಳಿಗಳ ಮೇಲೆ ಸಂಚರಿಸುವಂತೆ ಮಾಡಿದ್ದು ವಿಶೇಷವಾಗಿದೆ.
ಇದನ್ನೂ ಓದಿ: ಇವು ಭಾರತದಲ್ಲಿನ ಅತ್ಯಂತ ಹಳೆಯ ಕಾಲದ ರೈಲು ನಿಲ್ದಾಣಗಳು, ಬ್ರಿಟಿಷರೇ ನಿರ್ಮಾಣ ಮಾಡಿದ್ದಂತೆ!
ರೈಲ್ವೆ ಹಳಿ ಮೇಲೆ ಮಹೀಂದ್ರಾ ಬೊಲೆರೊ
ಪತ್ರಕರ್ತ ಮತ್ತು ಲೇಖಕ ರಾಜೇಂದ್ರ ಬಿ ಅಕ್ಲೇಕರ್ ಅವರು ಹಂಚಿಕೊಂಡ ವಿಡಿಯೋದಲ್ಲಿ ಮಹೀಂದ್ರ ಬೊಲೆರೊ ಸೇತುವೆಯ ಮೇಲಿನ ರೈಲ್ವೆ ಹಳಿಗಳಲ್ಲಿ ಸಂಚರಿಸುತ್ತಿದೆ. ತಪಾಸಣಾ ಟ್ರಾಲಿಯಲ್ಲಿ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಕೂಡ ಕುಳಿತಿದ್ದಾರೆ.
So it was a Mahindra Bolero converted into a rail vehicle that was one of the first vehicles to run on the world's tallest railway arch bridge at Chenab, J&K, leading the inspection trolleys of @AshwiniVaishnaw. The bridge at 359 m is taller than the Eiffel Tower in Paris.… pic.twitter.com/AMI1rHYgV3
— Rajendra B. Aklekar (@rajtoday) March 27, 2023
ಮೊದಲ ಬಾರಿಗೆ ಹಳಿ ಮೇಲೆ ಬೊಲೆರೊ ವಾಹನ ಬಳಕೆ
ಸಾಮಾನ್ಯವಾಗಿ ಇಂತಹ ತಪಾಸಣೆಗೆ ರೈಲ್ವೆ ಮೋಟಾರೀಕೃತ ಟ್ರಾಲಿಗಳನ್ನು ಬಳಸಲಾಗುತ್ತದೆ. ಈ ಟ್ರಾಲಿಗಳು ಹಿಂಭಾಗದಲ್ಲಿ ಸಣ್ಣ ಎಂಜಿನ್ ಹೊಂದಿರುತ್ತವೆ ಹಾಗೂ ಇದರಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದು. ಆದರೆ ಇಲ್ಲಿ ಮಹೀಂದ್ರಾ ಬೊಲೆರೊವನ್ನು ಬಳಸಲಾಗಿದೆ. ಈ ವಾಹನ ಒಂದು ರೇರ್ ವ್ಹೀಲ್ ಡ್ರೈವ್ ವಾಹನ ಆಗಿದ್ದು, ಇದರ ಹಿಂಬದಿಯ ಚಕ್ರವು ಕಾರನ್ನು ಮುಂದಕ್ಕೆ ತಳ್ಳಿದರೆ, ಲೋಹದ ಚಕ್ರಗಳು ಟ್ರ್ಯಾಕ್‌ನಿಂದ ಹೊರಹೋಗದಂತೆ ತಡೆಯುತ್ತದೆ. ಈ ಸಂದರ್ಭದಲ್ಲಿ, ಮಹೀಂದ್ರಾ ಬೊಲೆರೊದಲ್ಲಿ 7-8 ಜನರು ಕುಳಿತುಕೊಳ್ಳಬಹುದು.
ರೈಲ್ವೇ ಟ್ರ್ಯಾಕ್‌ನಲ್ಲಿ ಸಾಮಾನ್ಯ ಕಾರನ್ನು ತಪಾಸಣೆ ವಾಹನವಾಗಿ ಬಳಸಿದ್ದು ಇದೇ ಮೊದಲ ಬಾರಿಗೆ ಎನ್ನಬಹುದು.
ವಿಶ್ವದ ಅತಿ ಎತ್ತರದ ರೈಲು ಸೇತುವೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯು ನದಿಯ ತಳದಿಂದ 359 ಮೀಟರ್ ಎತ್ತರದಲ್ಲಿದೆ ಮತ್ತು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ ಎತ್ತರವಾಗಿದೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಎಂದೇ ಹೆಸರು ಪಡೆದಿದೆ.
1,400 ಕೋಟಿ ವೆಚ್ಚದಲ್ಲಿ ಕಾಮಗಾರಿ
ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಇದನ್ನು ಹಲವು ರಂಗಗಳಲ್ಲಿ ಪರೀಕ್ಷಿಸಲಾಗಿದೆ. ಸೇತುವೆಯು ಹೆಚ್ಚಿನ ವೇಗದ ಗಾಳಿ, ಭೂಕಂಪಗಳು, ವಿಪರೀತ ತಾಪಮಾನ ಮತ್ತು ಜಲವಿಜ್ಞಾನದ ಪ್ರಭಾವಗಳನ್ನು ತಡೆದುಕೊಳ್ಳಬಲ್ಲದು ಎನ್ನಲಾಗಿದೆ.
ಸೇತುವೆಯ ಮುಖ್ಯ ಕಮಾನಿನ ನಿರ್ಮಾಣವು ಏಪ್ರಿಲ್ 2021 ರಲ್ಲಿ ಪೂರ್ಣಗೊಂಡಿದ್ದು, ಸೇತುವೆಯು 120 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಸರ್ಕಾರ ಸುಮಾರು 1,400 ಕೋಟಿ ವೆಚ್ಚದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತವೆಯನ್ನು ನಿರ್ಮಿಸಿದೆ.
ಈ ವರ್ಷದ ಅಂತ್ಯದಲ್ಲಿ ಕಾರ್ಯಾರಂಭ
ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ಸೇತುವೆಯು ಕತ್ರಾದಿಂದ ಬನಿಹಾಲ್ ವರೆಗಿನ 111 ಕಿಮೀ ವ್ಯಾಪ್ತಿಯನ್ನು ಸಂಪರ್ಕಿಸುವಲ್ಲಿ ಸಹಕಾರಿಯಾಗಿದೆ. ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ರೈಲ್ವೆ ಸೇತುವೆಯು 1.3 ಕಿಮೀ ಉದ್ದವಾಗಿದೆ ಮತ್ತು 266 ಕಿಮೀ ವೇಗದ ಗಾಳಿಯ ವೇಗವನ್ನು ತಡೆದುಕೊಳ್ಳುತ್ತದೆ. ಇದು ಬ್ಲಾಸ್ಟ್ ಪ್ರೂಫ್ ಕೂಡ ಆಗಿದೆ.
ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ (ಯುಎಸ್‌ಬಿಆರ್‌ಎಲ್) ರೈಲು ಸಂಪರ್ಕವು ಸಂಪೂರ್ಣವಾಗಿ ಕಾರ್ಯಾರಂಭಿಸಿದ ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸುತ್ತದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಸೇತುವೆಯ ನಿರ್ಮಾಣವು ಡಿಸೆಂಬರ್ 2023 ಅಥವಾ ಜನವರಿ 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ