ವಾಷಿಂಗ್ಟನ್: ಚೀನಾ ಸಮುದ್ರದ ವಿಚಾರದಲ್ಲಿ ಚೀನಾ ದೇಶದ ಧೋರಣೆ ಬಗ್ಗೆ ಅಮೆರಿಕ ಅತೀ ಆಕ್ರೋಶ ವ್ಯಕ್ತಪಡಿಸಿದೆ. ಸೌತ್ ಚೀನಾ ಸಮುದ್ರ ಪ್ರದೇಶದ ವಿವಾದವನ್ನು ಅಂತಾರಾಷ್ಟ್ರೀಯ ಕಾನೂನು ಮೂಲಕ ಪರಿಹರಿಸಬೇಕು ಎಂದು ಅಮೆರಿಕ ಕರೆ ನೀಡಿದೆ. ನಿನ್ನೆ ಟ್ವೀಟ್ ಮಾಡಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು ಚೀನಾ ಮೇಲೆ ಹರಿಹಾಯ್ದರು.
“ಅಮೆರಿಕದ ನೀತಿ ಬಹಳ ಸ್ಷಷ್ಟ ಇದೆ. ದಕ್ಷಿಣ ಚೀನಾ ಸಮುದ್ರವು ಚೀನಾದ ಸಾಗರ ಸಾಮ್ರಾಜ್ಯವಲ್ಲ. ಚೀನಾ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದಾಗ ಮುಕ್ತ ರಾಷ್ಟ್ರಗಳು ಸುಮ್ಮನಿದ್ದು ಬಿಟ್ಟರೆ ಚೀನೀ ಕಮ್ಯೂನಿಸ್ಟ್ ಪಕ್ಷ ಹೆಚ್ಚೆಚ್ಚು ಪ್ರದೇಶಗಳನ್ನ ಅತಿಕ್ರಮಿಸಿಕೊಳ್ಳುತ್ತದೆ ಎಂಬುದು ಇತಿಹಾಸ ಹೇಳುತ್ತದೆ. ಚೈನಾ ಸೀ ವಿವಾದವನ್ನು ಅಂತರರಾಷ್ಟ್ರೀಯ ಕಾನೂನು ಮೂಲಕ ಬಗೆಹರಿಸಬೇಕು” ಎಂದು ಮೈಕ್ ಪಾಂಪಿಯೋ ಕರೆ ನೀಡಿದ್ದಾರೆ.
ಸೌತ್ ಚೀನಾ ಸಮುದ್ರ ಅಪಾರ ಸಂಪನ್ಮೂಲಗಳ ಆಗರವಾಗಿದೆ. ಇಲ್ಲಿಯ ಬಹುತೇಕ ಸಂಪನ್ಮೂಲಕ್ಕೆ ಚೀನಾ ಹಕ್ಕು ಸಾಧಿಸುತ್ತಿದೆ. ಶೇ. 90ರಷ್ಟು ಸಂಪನ್ಮೂಲಗಳು ತನಗೇ ಸೇರಿದ್ದು ಎಂಬುದು ಚೀನಾದ ಅಭಿಪ್ರಾಯ. ಇದೇ ಸಾಗರ ಪ್ರದೇಶದಲ್ಲಿರುವ ಬ್ರೂನೇ, ಮಲೇಷ್ಯಾ, ಫಿಲಿಪ್ಪೈನ್ಸ್, ತೈವಾನ್ ಮತ್ತು ವಿಯೆಟ್ನಾಮ್ ದೇಶಗಳು ಈ ಸಂಪನ್ಮೂಲಗಳಿಗೆ ತಮ್ಮ ಹಕ್ಕೂ ಇದೆ ಎಂದು ಪ್ರತಿಪಾದಿಸುತ್ತಿವೆ. ಆದರೆ, ಚೀನಾ ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಬದಲಾಗಿ ಈ ಪ್ರದೇಶದಲ್ಲಿ ನೌಕಾ ನೆಲೆಗಳನ್ನ ಸ್ಥಾಪಿಸಿ ತನ್ನ ಹಕ್ಕನ್ನು ಬಲಪಡಿಸಿಕೊಳ್ಳುತ್ತಿದೆ.
ಇದನ್ನೂ ಓದಿ: ರಾಜಸ್ಥಾನ ಬಿಕ್ಕಟ್ಟು: ಕಾಂಗ್ರೆಸ್ನಿಂದ ಸೋಮವಾರ ದೇಶವ್ಯಾಪಿ ಪ್ರತಿಭಟನೆ; ಇವತ್ತು ಆನ್ಲೈನ್ ಅಭಿಯಾನ
ಸೌತ್ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ಮಾಡುತ್ತಿರುವ ಪ್ರತಿಪಾದನೆಯನ್ನು ಅಮೆರಿಕ ಮೊದಲಿಂದಲೂ ವಿರೋಧಿಸುತ್ತಾ ಬಂದಿದೆ. ಇದು ಚೀನಾಗೂ ಕೆಂಗಣ್ಣು ತಂದಿದೆ. ಈ ಪ್ರದೇಶದಲ್ಲಿ ಅಮೆರಿಕ ಸುಮ್ಮನೆ ಕಿರಿಕಿರಿ ಮಾಡುತ್ತಿದೆ ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಇನ್ನೊಂದೆಡೆ, ಅಮೆರಿಕದ ಧ್ವನಿಗೆ ಆಸ್ಟ್ರೇಲಿಯಾ ಕೂಡ ಬಲ ನೀಡುತ್ತಿದೆ. ದಕ್ಷಿಣ ಚೀನಾ ಸಮುದ್ರದ ಹಕ್ಕಿನ ವಿಚಾರದಲ್ಲಿ ಚೀನಾ ಮಾಡುತ್ತಿರುವುದು ವಿಶ್ವಸಂಸ್ಥೆಯ ಸಾಗರ ಕಾನೂನು ನಿಯಮಗಳಿಗೆ ಪೂರಕವಾಗಿಲ್ಲ ಎಂದು ಆಸ್ಟ್ರೇಲಿಯಾ ಹೇಳಿದೆ.
ಸೌತ್ ಚೀನಾ ಸಮುದ್ರ ವಿಚಾರದಲ್ಲಿ ದೂರದ ಅಮೆರಿಕಕ್ಕೆ ಆಸಕ್ತಿ ಇರಲು ಪ್ರಬಲ ಕಾರಣವಿದೆ. ಇದೇ ಸಮುದ್ರದ ಮೇಲೆ ಪ್ರಮುಖ ಜಲಮಾರ್ಗ ಇದೆ. ಇಲ್ಲಿ ಪ್ರತೀ ವರ್ಷ 3 ಟ್ರಿಲಿಯನ್ ಡಾಲರ್, ಅಂದರೆ ಸುಮಾರು 200 ಲಕ್ಷ ಕೋಟಿ ರೂಪಾಯಿಯಷ್ಟು ವಹಿವಾಟು ಇದೇ ಜಲಮಾರ್ಗದಿಂದ ಹಾದುಹೋಗುತ್ತದೆ. ಇಲ್ಲಿ ಚೀನಾ ತನ್ನ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಿದೆ. ಜಲ ಮಾರ್ಗದ ಸಮೀಪವೇ ಚೀನಾ ನೌಕಾನೆಲೆ ಸ್ಥಾಪಿಸಿದೆ. ಶಾಂತಿಪಾಲನೆಗೆ ನೆಲೆ ಹಾಕಿರುವುದಾಗಿ ಚೀನಾ ಹೇಳುತ್ತಿದ್ದರೂ ಅದರ ಉದ್ದೇಶ ಬೇರೆಯೇ ಇದೆ ಎಂಬುದು ಹಲವು ದೇಶಗಳ ಭಯ. ಅಮೆರಿಕ ಮೊದಲಿಂದಲೂ ಚೀನಾದ ಈ ಸಾಗರ ಹಕ್ಕು ಸ್ಥಾಪನೆಯನ್ನು ವಿರೋಧಿಸಿಕೊಂಡು ಬರುತ್ತಿದೆ. ಈ ಜಲಮಾರ್ಗದಲ್ಲಿ ಅಮೆರಿಕ ಆಗಾಗ ತನ್ನ ನೌಕೆಗಳನ್ನ ಪಹರೆಯಂತೆ ಕಳುಹಿಸುತ್ತಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ