ರಾಷ್ಟ್ರಪತಿ ಭವನದಲ್ಲಿ ಡೊನಾಲ್ಡ್ ಟ್ರಂಪ್ ದಂಪತಿ: ರಾಮ್​​ನಾಥ್​​ ಕೋವಿಂದ್​​ ಜತೆ ಔತಣಕೂಟದಲ್ಲಿ ಭಾಗಿ

ಸದ್ಯ ಟ್ರಂಪ್ ದಂಪತಿಗಾಗಿ ರಾಷ್ಟ್ರಪತಿಗಳು ಭೋಜನ ಕೂಟ ಏರ್ಪಡಿಸಿದ್ದಾರೆ. ಟ್ರಂಪ್ ಜೊತೆಗಿನ ಈ ಔತಣ ಕೂಟಕ್ಕೆ ದೇಶದ ಪ್ರಮುಖ ಗಣ್ಯರು ಆಗಮಿಸಿದ್ಧಾರೆ. ಸಿಎಂ ಬಿಎಸ್​ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಟ್ರಂಪ್ ಜೊತೆ ಭೋಜನ ಸವಿಯುತ್ತಿದ್ದಾರೆ.

ರಾಷ್ಟ್ರಪತಿ ಭವನ ತಲುಪಿದ ಡೊನಾಲ್ಡ್​​ ಟ್ರಂಪ್​​

ರಾಷ್ಟ್ರಪತಿ ಭವನ ತಲುಪಿದ ಡೊನಾಲ್ಡ್​​ ಟ್ರಂಪ್​​

 • Share this:
  ನವದೆಹಲಿ(ಫೆ.25): ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತವರ ಹೆಂಡತಿ ಮೆಲಾನಿಯಾ ಟ್ರಂಪ್​​​​ ಅವರು​ ರಾಷ್ಟ್ರಪತಿ ಭವನಕ್ಕೆ ತಲುಪಿದ್ದಾರೆ. ಈ ಇಬ್ಬರು ಗಣ್ಯರನ್ನು ರಾಷ್ಟ್ರಪತಿ ರಾಮ್​​ನಾಥ್ ಕೋವಿಂದ್, ಪತ್ನಿ ಸವಿತಾ ಕೋವಿಂದ್ ಆತ್ಮೀಯವಾಗಿ ಬರ ಮಾಡಿಕೊಂಡರು. ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಟ್ರಂಪ್ ದಂಪತಿಯನ್ನು ರಾಮನಾಥ್ ಕೋವಿಂದ್ ಪರಿಚಯ ಮಾಡಿಕೊಂಡರು. ನಂತರ ಟ್ರಂಪ್​​ ಜೊತೆಗೆ ಭಾರತದ ಪ್ರವಾಸದ ಕುರಿತಂತೆ ರಾಮನಾಥ್​​ ಕೋವಿಂದ್​ ಮಾತುಕತೆ ನಡೆಸಿದರು.

  ಸದ್ಯ ಟ್ರಂಪ್ ದಂಪತಿಗಾಗಿ ರಾಷ್ಟ್ರಪತಿಗಳು ಭೋಜನ ಕೂಟ ಏರ್ಪಡಿಸಿದ್ದಾರೆ. ಟ್ರಂಪ್ ಜೊತೆಗಿನ ಈ ಔತಣ ಕೂಟಕ್ಕೆ ದೇಶದ ಪ್ರಮುಖ ಗಣ್ಯರು ಆಗಮಿಸಿದ್ಧಾರೆ. ಸಿಎಂ ಬಿಎಸ್​ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಟ್ರಂಪ್ ಜೊತೆ ಭೋಜನ ಸವಿಯುತ್ತಿದ್ದಾರೆ. ಔತಣ ಕೂಟ ಮುಕ್ತಾಯಗೊಂಡ ಬಳಿಕ ಟ್ರಂಪ್ ತಂಡ ರಾತ್ರಿ 10:30 ರ ವೇಳೆಗೆ ಅಮೆರಿಕಾಗೆ ವಾಪಸ್ಸಾಗಲಿದೆ.

  ನಿನ್ನೆ ಗುಜರಾತ್​​ನಲ್ಲಿ ನಡೆದ ನಮಸ್ತೆ ಟ್ರಂಪ್​​ ಕಾರ್ಯಕ್ರಮದ ಬಳಿಕ ವಿಶ್ವದ ಅತ್ಯಂತ ಅಚ್ಚರಿಯ ಕಟ್ಟಡಳಗಳಲ್ಲೊಂದೆನಿಸಿದ ತಾಜ್ ಮಹಲ್​ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಕುಟುಂಬ ಭೇಟಿ ಕೊಟ್ಟಿತ್ತು. ತಾಜ್ ಮಹಲ್​ನ ಭವ್ಯತೆ ಹಾಗೂ ಅದರ ಹಿಂದಿನ ಪ್ರೇಮಕಥೆಗೆ ಟ್ರಂಪ್ ಬೆಕ್ಕಸ ಬೆರಗಾದರು. ಟ್ರಂಪ್​ಗೆ ಮಾರ್ಗದರ್ಶಕರಾಗಿ ಹೋಗಿದ್ದ ನಿತಿನ್ ಕುಮಾರ್ ಅವರು ಆ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

  ಇದನ್ನೂ ಓದಿ: ಭಯೋತ್ಪಾದನೆ ನಿಗ್ರಹ ಮಾಡಲು ಮೋದಿ ಸಮರ್ಥರಿದ್ಧಾರೆ: ಡೊನಾಲ್ಡ್ ಟ್ರಂಪ್

  ನಂತರ ಇಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದ ಆವರಣದಲ್ಲಿ ಏರ್ಪಡಿಸಿರುವ ಅದ್ಧೂರಿ ಸ್ವಾಗತ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಮಿಲಾನಿಯಾ ಟ್ರಂಪ್‌ ಭಾಗಿಯಾಗಿದ್ದರು. ಬಳಿಕ ರಾಜ್‌ಘಾಟ್‌ಗೆ ಭೇಟಿ ನೀಡಿದ್ದ ಟ್ರಂಪ್‌ ಹಾಗೂ ಮೋದಿ, ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದರು.

  ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಭಾರತ ಪ್ರವಾಸ ಇಂದು ಕೊನೆಯಾಗಲಿದೆ. ಸೋಮವಾರ ಅಹಮದಾಬಾದ್​ನ ಮೊಟೆರಾ ಸ್ಟೇಡಿಯಂ ಉದ್ಘಾಟನೆ ವೇಳೆ ಭಾರತದೊಂದಿಗೆ ಮಹತ್ವದ ರಕ್ಷಣಾ ಒಪ್ಪಂದದ ಬಗ್ಗೆ ಟ್ರಂಪ್ ಘೋಷಣೆ ಮಾಡಿದ್ದರು. ಅದರಂತೆ ಇಂದು ಒಟ್ಟು 3 ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸಹಿ ಹಾಕಿದ್ದಾರೆ.

  ಈ ಬಗ್ಗೆ ಹೈದರಾಬಾದ್​ ಹೌಸ್​ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿರುವ ಪ್ರಧಾನಿ ಮೋದಿ ಮತ್ತು ಡೊನಾಲ್ಡ್​ ಟ್ರಂಪ್ ಮೂರು ಒಪ್ಪಂದಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾನಸಿಕ ಆರೋಗ್ಯ, ವೈದ್ಯಕೀಯ ಉತ್ಪನ್ನ ಹಾಗೂ ಇಂಧನ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಡ್ರಗ್ಸ್​ ದಂಧೆಯನ್ನು ನಿಯಂತ್ರಿಸಲು ಭಾರತ ಮತ್ತು ಅಮೆರಿಕ ಕೈಜೋಡಿಸಲಿವೆ. ಭಯೋತ್ಪಾದನೆಯನ್ನು ಬೆಂಬಲಿಸುವವರ ವಿರುದ್ಧ ಎರಡೂ ರಾಷ್ಟ್ರಗಳು ಸಮರ ಸಾರಲಿವೆ. ಭಾರತ ಮತ್ತು ಅಮೆರಿಕದ ನಡುವೆ ಮುಕ್ತ, ಪಾರದರ್ಶಕ ವ್ಯಾಪಾರ ನಡೆಯಲಿದೆ ಎಂದು ಈ ವೇಳೆ ಉಭಯ ನಾಯಕರು ಘೋಷಿಸಿದ್ದಾರೆ.

  ಡೊನಾಲ್ಡ್ ಟ್ರಂಪ್ ತಮ್ಮ ಎರಡು ದಿನದ ಪ್ರವಾಸದ ಕೊನೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ. ಭಾರತವನ್ನು ಅದ್ಭುತ ದೇಶ, ನರೇಂದ್ರ ಮೋದಿಯನ್ನು ಅದ್ಭುತ ನಾಯಕ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಭಾರತ ಬೃಹತ್ ಮಾರುಕಟ್ಟೆ ಹೊಂದಿದೆ. ಇಲ್ಲಿನ ಜನರು ಅಮೆರಿಕನ್ನರನ್ನು ಇಷ್ಟಪಡುತ್ತಾರೆ ಎಂದು ಹೇಳಿದ ಟ್ರಂಪ್, ಭಾರತದ ಜೊತೆ ವಿವಿಧ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ಧಾರೆ.
  First published: