ಗೆಳೆಯರ ಬಗ್ಗೆ ಈ ರೀತಿ ಮಾತಾಡಬಾರದು; ಭಾರತ ಕೊಳಕು ದೇಶ ಎಂದ ಟ್ರಂಪ್​ಗೆ ಜೋ ಬಿಡೆನ್ ಟೀಕೆ

ಭಾರತ ಗಲೀಜು ದೇಶ ಎಂದಿದ್ದ ಡೊನಾಲ್ಡ್​ ಟ್ರಂಪ್​ಗೆ ತಿರುಗೇಟು ನೀಡಿರುವ ಜೋ ಬಿಡೆನ್, ಸ್ನೇಹಿತರ ಬಗ್ಗೆ ನೀವು ಈ ರೀತಿ ಮಾತನಾಡಬಾರದು. ಹಾಗೇ, ಹವಾಮಾನ ವೈಪರೀತ್ಯದಂತಹ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಎದುರಿಸುವ ರೀತಿಯೂ ಇದಲ್ಲ ಎಂದಿದ್ದಾರೆ.

ಡೊನಾಲ್ಡ್​ ಟ್ರಂಪ್- ಜೋ ಬಿಡೆನ್

ಡೊನಾಲ್ಡ್​ ಟ್ರಂಪ್- ಜೋ ಬಿಡೆನ್

  • Share this:
ವಾಷಿಂಗ್ಟನ್ (ಅ. 25): ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಡೊನಾಲ್ಡ್​ ಟ್ರಂಪ್ ಮತ್ತು ಜೋ ಬಿಡೆನ್ ಭರದಿಂದ ಪ್ರಚಾರ ಕಾರ್ಯ ನಡೆಸಿದ್ದಾರೆ. ಈ ನಡುವೆ ಪ್ರಚಾರ ನಡೆಸುವಾಗ ಅಮೆರಿಕದ ವಾತಾವರಣ ತೀರಾ ಹದಗೆಟ್ಟಿಲ್ಲ ಎಂದು ಹೇಳುವ ಭರದಲ್ಲಿ ಡೊನಾಲ್ಡ್​ ಟ್ರಂಪ್ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಭಾರತ ಅತ್ಯಂತ ಕೊಳಕು, ಗಲೀಜು ದೇಶ. ಭಾರತ, ಚೀನಾ ಮತ್ತು ರಷ್ಯಾದ ವಾಯುಮಾಲಿನ್ಯಕ್ಕೆ ಹೋಲಿಸಿದರೆ ಅಮೆರಿಕದ ಹವಾಮಾನ ತೀರಾ ಹದಗೆಟ್ಟಿಲ್ಲ ಎಂದು ಹೇಳಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಡೊನಾಲ್ಡ್​ ಟ್ರಂಪ್ ಎದುರಾಳಿ ಸ್ಪರ್ಧಿಯಾಗಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಕೂಡ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಗೆಳೆಯರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಮ್ಮವರ ಜೊತೆ ಯಾವ ರೀತಿ ಮಾತನಾಡಬೇಕೆಂದು ತಿಳಿಯಿರಿ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ನ. 3ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಮೆರಿಕದ ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುವಾಗ ಬೇರೆ ದೇಶಗಳ ಜೊತೆ ಹೋಲಿಕೆ ಮಾಡಿದ್ದ ಡೊನಾಲ್ಡ್​ ಟ್ರಂಪ್, ಚೀನಾ, ರಷ್ಯಾ, ಭಾರತ ದೇಶಗಳನ್ನೇ ನೋಡಿ. ಆ ದೇಶಗಳ ಗಾಳಿ ಬಹಳ ಕಲುಷಿತವಾಗಿದೆ. ಭಾರತ ಬಹಳ ಗಲೀಜು ದೇಶ. ಅಲ್ಲಿನ ವಾಯು ಮಾಲಿನ್ಯಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಅತಿ ಶುದ್ಧವಾದ ಗಾಳಿಯಿದೆ, ಸ್ವಚ್ಛವಾದ ನೀರಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಭಾರತ ಕೊಳಕು, ಗಲೀಜು ದೇಶ; ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಡೊನಾಲ್ಡ್​ ಟ್ರಂಪ್ ಟೀಕೆ

ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಜೋ ಬಿಡೆನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾರತವನ್ನು ಬಹಳ ಗಲೀಜು ದೇಶ ಎಂದು ಕರೆದಿದ್ದರು. ನಿಮ್ಮ ಸ್ನೇಹಿತರ ಬಗ್ಗೆ ನೀವು ಈ ರೀತಿ ಮಾತನಾಡಬಾರದು. ಹಾಗೇ, ಹವಾಮಾನ ವೈಪರೀತ್ಯದಂತಹ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಎದುರಿಸುವ ರೀತಿಯೂ ಇದಲ್ಲ. ಕಮಲಾ ಹ್ಯಾರೀಸ್ ಮತ್ತು ನಾನು ಬೇರೆ ದೇಶಗಳ ಜೊತೆಗಿನ ಸಂಬಂಧವನ್ನು ಬಹಳ ಗೌರವಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.



ಭಾರತವನ್ನು ತೆಗಳಿದ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನೇ ಪ್ರಸ್ತಾಪಿಸಿ, ಟೀಕಿಸುವ ಮೂಲಕ ಜೋ ಬಿಡೆನ್ ಅನಿವಾಸಿ ಭಾರತೀಯರ ವಿಶ್ವಾಸ ಗಳಿಸಿದ್ದಾರೆ. ಈಗಾಗಲೇ ಅಮೆರಿಕದ ಅನಿವಾಸಿ ಭಾರತೀಯರು ಡೊನಾಲ್ಡ್​ ಟ್ರಂಪ್​ಗಿಂತಲೂ ಜೋ ಬಿಡೆನ್ ಮತ್ತು ಅಮೆರಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರೀಸ್ ಪರವಾಗಿ ಹೆಚ್ಚು ಒಲವು ತೋರುತ್ತಿದ್ದಾರೆ ಎನ್ನಲಾಗಿದೆ.

ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಅವರನ್ನು ಸೋಲಿಸಿ, ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಏರಲು ಡೊನಾಲ್ಡ್​ ಟ್ರಂಪ್ ಸಕಲ ಸಿದ್ಧತೆ ನಡೆಸಿದ್ದಾರೆ. ಭಾರತ ಮತ್ತು ಭಾರತೀಯರ ಬಗ್ಗೆ ಚುನಾವಣಾ ಪ್ರಚಾರದ ವೇಳೆ ಸಕಾರಾತ್ಮಕವಾಗಿ ಮಾತನಾಡಿರುವ ಜೋ ಬಿಡೆನ್, ನಾನೇನಾದರೂ ಅಮೆರಿಕದ ಅಧ್ಯಕ್ಷನಾದರೆ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಕೈ ಜೋಡಿಸುತ್ತೇನೆ. ಚೀನಾದ ಬದಲು ಭಾರತಕ್ಕೆ ನೆರವಾಗುತ್ತೇನೆ ಎಂದು ಭಾಷಣ ಮಾಡಿದ್ದರು. ಇತ್ತ ಡೊನಾಲ್ಡ್​ ಟ್ರಂಪ್ ಕೂಡ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯ ಜೊತೆ ಅಮೆರಿಕದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಆ ವೇಳೆ ಪ್ರಧಾನಿ ಮೋದಿ ಅಬ್​ ಕಿ ಬಾರ್ ಟ್ರಂಪ್ ಸರ್ಕಾರ್ ಎಂಬ ಘೋಷಣೆಯನ್ನೂ ಕೂಗಿದ್ದರು.
Published by:Sushma Chakre
First published: