ಅಹ್ಮದಾಬಾದ್​ನಲ್ಲಿ ಆಗುತ್ತಾ ‘ಕೇಮ್ ಚೋ ಟ್ರಂಪ್‘ ಕಾರ್ಯಕ್ರಮ? ದೆಹಲಿಗಾಗಿ ಪಟ್ಟು ಹಿಡಿದ ಅಮೆರಿಕ ಅಧ್ಯಕ್ಷ

ಇನ್ನು, ಕಾರ್ಯಕ್ರಮಕ್ಕೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಅನಿವಾಸಿ ಭಾರತೀಯರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಅದರಲ್ಲೂ ಅನಿವಾಸಿ ಭಾರತೀಯರಲ್ಲಿ ವಿಶೇಷವಾಗಿ ಗುಜರಾತಿ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ ಎನ್ನುತ್ತಿವೆ ಮೂಲಗಳು.

ಫೈಲ್​ ಫೋಟೊ: ನರೇಂದ್ರ ಮೋದಿ, ಡೊನಾಲ್ಡ್​ ಟ್ರಂಪ್​

ಫೈಲ್​ ಫೋಟೊ: ನರೇಂದ್ರ ಮೋದಿ, ಡೊನಾಲ್ಡ್​ ಟ್ರಂಪ್​

 • Share this:
  ನವದೆಹಲಿ(ಜ.23): ಮುಂದಿನ ತಿಂಗಳು ಫೆಬ್ರವರಿಯಲ್ಲಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​​ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಕಳೆದ ವರ್ಷ ಭಾರತದ ಪ್ರಧಾನಿಗಾಗಿಯೇ ಅಮೆರಿಕಾದ ಹೂಸ್ಟನ್​​ನಲ್ಲಿ "ಹೌಡಿ ಮೋದಿ" ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈಗ ಭಾರತಕ್ಕೆ ಭೇಟಿ ನೀಡುತ್ತಿರುವ ಟ್ರಂಪ್​​​ಗಾಗಿ "ಹೌಡಿ ಮೋದಿ" ರೀತಿಯದ್ದೇ ಸಮಾವೇಶ ಗುಜರಾತ್​​ನಲ್ಲಿ ಆಯೋಜಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. 'ಕೇಮ್‌ ಚೋ ಟ್ರಂಪ್​​' (ಗುಜರಾತಿ ಭಾಷೆಯಲ್ಲಿ​ ಹೇಗಿದ್ದೀರಿ ಎಂದರ್ಥ) ಎಂಬ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಆದರೀಗ, ನ್ಯೂಸ್​​-18ಗೆ ಲಭ್ಯವಾದ ಮಾಹಿತಿ ಪ್ರಕಾರ ಟ್ರಂಪ್ ಗುಜರಾತ್​​​ ಬದಲಿಗೆ ದೆಹಲಿಯಲ್ಲಿ 'ಕೇಮ್‌ ಚೋ ಟ್ರಂಪ್​​' ಕಾರ್ಯಕ್ರಮ ಆಯೋಜಿಸುವಂತೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಸಮಯದ ಅಭಾವ ಮತ್ತು ಭದ್ರತೆ ಕಾರಣದಿಂದಾಗಿ ಗುಜರಾತ್​​ಗಿಂತ ದೆಹಲಿಯೇ 'ಕೇಮ್‌ ಚೋ ಟ್ರಂಪ್​​' ಕಾರ್ಯಕ್ರಮ ಮಾಡಲು ಉತ್ತಮ ಎಂಬ ಅಭಿಪ್ರಾಯ ಟ್ರಂಪ್​​ ತಂಡದಿಂದ ಕೇಳಿ ಬಂದಿದೆ ಎನ್ನಲಾಗಿದೆ.

  ಕೇಮ್‌ ಚೋ ಟ್ರಂಪ್​​ ( ಹೌಡಿ ಟ್ರಂಪ್​​) ಕಾರ್ಯಕ್ರಮ ಆಯೋಜನೆಗೆ ದೆಹಲಿ ಉತ್ತಮವಾದ ಸ್ಥಳವಲ್ಲ. ಸದ್ಯ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ(ಎನ್​​ಆರ್​ಸಿ) ವಿರುದ್ಧ ಭಾರೀ ಪ್ರಮಾಣದಲ್ಲಿ ಹೋರಾಟಗಳು ನಡೆಯುತ್ತಿವೆ. ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಇಷ್ಟು ಜನಕ್ಕೆ ಉತ್ತಮವಾದ ಮೈದಾನ ಬೇಕಿದೆ. ಹಾಗಾಗಿ ದೆಹಲಿಗಿಂತಲೂ ಗುಜರಾತ್​​ನ ಅಹಮದಬಾದ್ ಸೂಕ್ತವಾದ ಸ್ಥಳ ಎಂಬುದು ಕಾರ್ಯಕ್ರಮ ಆಯೋಜಕರ ವಾದ.

  ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಮೊಟೇರಾ ಸ್ಟೇಡಿಯಂ 1.10 ಲಕ್ಷ ಆಸನಗಳ ಸಾಮರ್ಥ್ಯ ಹೊಂದಿದೆ. ಸದ್ಯ ಇಲ್ಲಿನ ಮೈದಾನದಲ್ಲೇ ಹೌಡಿ ಮೋದಿ ಕಾರ್ಯಕ್ರಮ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಟ್ರಂಪ್​​ ಮುಂದಿನ ತಿಂಗಳು ಫೆ.24-26ಕ್ಕೆ ಆಗಮಿಸುವ ಸಾಧ್ಯತೆ ಇದೆ. ಟ್ರಂಪ್​​ ದೆಹಲಿಗೆ ಬಂದಿಳಿದ ಬಳಿಕ ಆಗ್ರಾಗೆ ತೆರಳಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ತಾಜ್ ಮಹಲ್ ನೋಡುವ ಯೋಜನೆ ಹಾಕಿಕೊಂಡಿದ್ಧಾರಂತೆ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: ಸಿಎಎ ವಿರೋಧಿ ಹೋರಾಟ ವಿಶ್ವ ಕಂಡ ಈ ಶತಮಾನದ ಬಹುದೊಡ್ಡ ಆಂದೋಲನ: ನಜೀಬ್ ಜಂಗ್

  2019ರಲ್ಲಿ ಅಮೆರಿಕಾದ ಹೂಸ್ಟನ್​​ಗೆ ಭೇಟಿ ನೀಡಿದ್ದ ಭಾರತದ ಪ್ರಧಾನಿಗಾಗಿ ಹೌಡಿ ಮೋದಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಯಶಸ್ವಿಯೂ ಆಗಿತ್ತು. ಇದಕ್ಕೆ ಟ್ರಂಪ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು. ಅದರಂತೆಯೇ ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಟ್ರಂಪ್​​ಗಾಗಿ ಗುಜರಾತ್​​ನಲ್ಲಿ ಹೌಡಿ ಟ್ರಂಪ್ ಅಥವಾ ಕೆಮ್​​ ಚೋ ಟ್ರಂಪ್​​ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

  ಇನ್ನು, ಕಾರ್ಯಕ್ರಮಕ್ಕೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಅನಿವಾಸಿ ಭಾರತೀಯರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಅದರಲ್ಲೂ ಅನಿವಾಸಿ ಭಾರತೀಯರಲ್ಲಿ ವಿಶೇಷವಾಗಿ ಗುಜರಾತಿ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ ಎನ್ನುತ್ತಿವೆ ಮೂಲಗಳು.
  First published: