ವಾಷಿಂಗ್ಟನ್: ಅಮೆರಿಕಾದ (America) ಅಟ್ಲಾಂಟಿಕ್ ಕರಾವಳಿಯಲ್ಲಿ (Atlantic Ocean) ಕಳೆದ ಕೆಲದಿನಗಳಿಂದ ಅನುಮಾನಸ್ಪದವಾಗಿ ಹಾರಾಡುತ್ತಿದ್ದ ಬಲೂನ್‌ನನ್ನು ಅಮೆರಿಕಾ ಸೇನೆ ಹೊಡೆದುರುಳಿಸಿದೆ. ಚೀನಾ ದೇಶದ (China) ಬಲೂನ್ (Spy Balloon)ಇದಾಗಿದ್ದು, ಅಮೆರಿಕಾದಲ್ಲಿ ಬೇಹುಗಾರಿಕೆಯನ್ನು ನಡೆಸುವ ಉದ್ದೇಶದಿಂದ ಹಾರಲು ಬಿಡಲಾಗಿದೆ ಎಂದು ಶಂಕಿಸಲಾಗಿತ್ತು. ಇದೀಗ ಆ ಶಂಕಿತ ಬಲೂನ್ ಅನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಆದೇಶದ ಮೇರೆಗೆ ಹೊಡೆದುರುಳಿಸಲಾಗಿದೆ.
ಸೇನೆಯನ್ನು ಅಭಿನಂದಿಸಿದ ಜೋ ಬಿಡೆನ್
ಯುಎಸ್‌ನ ಆಗ್ನೇಯ ರಾಜ್ಯವಾದ ದಕ್ಷಿಣ ಕೆರೊಲಿನಾದ ಕರಾವಳಿ ಪ್ರದೇಶದಲ್ಲಿ ಎಫ್-22 ವಿಮಾನದಿಂದ ಕ್ಷಿಪಣಿ ಹಾರಿಸಿ ಬಲೂನ್ ಅನ್ನು ಹೊಡೆಯಲಾಯಿತು. ಅಮೆರಿಕಾದ ವಾಯು ಮತ್ತು ಜಲ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬಲೂನ್ ಅನ್ನು ಹೊಡೆದುರುಳಿಸಿದ್ದಕ್ಕಾಗಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಸೇನಾಪಡೆಯನ್ನು ಅಭಿನಂದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಈ ಕಾರ್ಯಾಚರಣೆ ‘ಉದ್ದೇಶಪೂರ್ವಕ ಮತ್ತು ಕಾನೂನುಬದ್ಧ ಕ್ರಮ’ ಎಂದು ಹೇಳಿದ್ದಾರೆ. ಅಲ್ಲದೇ, ಇದು ನಮ್ಮ ಸಾರ್ವಭೌಮತ್ವದ ವಿಚಾರದಲ್ಲಿ ಚೀನಾದಿಂದ ಸ್ವೀಕಾರಾರ್ಹವಲ್ಲದ ಉಲ್ಲಂಘನೆ ಆಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: BBC Documentary: ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಅಮೆರಿಕಾ ಸರ್ಕಾರದ ವಕ್ತಾರ!
ಅಮೆರಿಕಾ ಅತಿರೇಕದಿಂದ ವರ್ತಿಸಿದೆ ಎಂದ ಚೀನಾ!
ಶಂಕಿತ ಬಲೂನ್ ಅನ್ನು ಅಮೆರಿಕಾ ಸೇನೆ ಹೊಡೆದುರುಳಿಸಿದ ಘಟನೆಗೆ ಸಂಬಂಧಿಸಿದಂತೆ ಚೀನಾ ಕೆಂಡಾಮಂಡಲವಾಗಿದ್ದು, ಅಮೆರಿಕ ಹೊಡೆದುರುಳಿಸಿದ ನಮ್ಮ ಬಲೂನ್ ಯಾವುದೇ ಬೇಹುಗಾರಿಕೆಯ ಕಾರ್ಯಗಳಿಗೆ ಬಳಸುತ್ತಿರಲಿಲ್ಲ. ನಾಗರಿಕ ಸೇವೆಯ ಉದ್ದೇಶದಿಂದ ಹವಾಮಾನ ಸಂಶೋಧನೆ ನಡೆಸುವ ಸಲುವಾಗಿ ಆ ಭಾಗದಲ್ಲಿ ಸಂಚರಿಸಿತ್ತು. ಆದರೆ ರಭಸವಾಗಿ ಬೀಸಿದ ಗಾಳಿಯಿಂದಾಗಿ ಆಕಸ್ಮಿಕವಾಗಿ ಅಮೆರಿಕಾದ ಮೇಲೆ ಹಾದು ಹೋಗಿದೆ. ಅಷ್ಟಕ್ಕೇ ಅಮೆರಿಕಾ ಅತಿರೇಕದಿಂದ ವರ್ತಿಸಿ ಅಂತರಾಷ್ಟ್ರೀಯ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿದೆ. ಇದಕ್ಕೆ ಪ್ರತಿಯಾಗಿ ಸ್ಪಷ್ಟವಾದ ತಿರುಗೇಟು ನೀಡಲಿದ್ದೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಎಚ್ಚರಿಸಿದೆ.
ಇದನ್ನೂ ಓದಿ: Spying Balloon: ಅಮೆರಿಕಾದಲ್ಲಿ ಹಾರಾಡ್ತಿದೆ ಚೀನಾದ ಬೇಹುಗಾರಿಕಾ ಬಲೂನ್! ಪತ್ತೆ ಹಚ್ಚಿದ ಪೆಂಟಗಾನ್
ಚೀನಾದ ಶಂಕಿತ ಬಲೂನು ಹೊಡೆದುರುಳಿಸುವ ಕಾರ್ಯಾಚರಣೆಗೂ ಮುನ್ನ ಉತ್ತರ ಮತ್ತು ದಕ್ಷಿಣ ಕೆರೋಲಿನಾಗಳಲ್ಲಿನ ಮೂರು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು ಮೂರು ಬಸ್‌ಗಳಷ್ಟು ದೊಡ್ಡ ಗಾತ್ರದ ಬಲೂನ್ ಅನ್ನು ಒಂದು ಕ್ಷಿಪಣಿ ಮೂಲಕ ಹೊಡೆದು ಉರುಳಿಸಲಾಗಿದೆ.
ಪೂರ್ವಸಿದ್ಧತೆಯೊಂದಿಗೆ ಕಾರ್ಯಾಚರಣೆ
ಎಫ್-22 ಫೈಟರ್ ಜೆಟ್ ಮೂಲಕ ಮಧ್ಯಾಹ್ನ 2.39ರ ವೇಳೆಗೆ ಎಐಎಂ-9ಎಕ್ಸ್ ಸೂಪರ್‌ಸಾನಿಕ್, ವಾಯುವಿನಿಂದ ವಾಯು ಸಾಮರ್ಥ್ಯದ ಕ್ಷಿಪಣಿ ಉಡಾಯಿಸಿ ಅಮೆರಿಕಾ ಸೇನಾ ಪಡೆ ಬಲೂನ್ ಅನ್ನು ಛಿದ್ರಗೊಳಿಸಿದರು. ಅಂದ ಹಾಗೆ ಈ ಬಲೂನ್‌ನ ಎಲ್ಲ ಅವಶೇಷಗಳೂ ಸಮುದ್ರದೊಳಗೆ ಬೀಳುವಂತೆ ಯೋಜನೆ ರೂಪಿಸಲಾಗಿತ್ತು. ಅದರ ಜೊತೆಗೆ ಸಾಧ್ಯವಾದಷ್ಟು ಮಟ್ಟಿಗೆ ಆ ಬಲೂನ್‌ನ ಅವಶೇಷಗಳನ್ನು ಸಂಗ್ರಹಿಸಲು ಕೂಡ ನೌಕೆಗಳನ್ನು ಸಿದ್ಧವಾಗಿ ಇರಿಸಲಾಗಿತ್ತು.
ಶಂಕಿತ ಬಲೂನ್ ಹೊಡೆದುರುಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಚೀನಾದ ಶಂಕಿತ ಬಲೂನ್ ಅನ್ನು ಅಮೆರಿಕಾ ಸೇನೆ ಹೊಡೆದುರುಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚೀನಾದ ಗುಂಡೇಟಿಗೆ ಛಿದ್ರಗೊಂಡ ಬಲೂನ್ ಅಟ್ಲಾಂಟಿಕ್ ಮಹಾಸಾಗರಕ್ಕೆ ಚೂರು ಚೂರಾಗಿ ಬೀಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Rahul Gandhi: ರಷ್ಯಾದಂತೆ ಚೀನಾ ಭಾರತದ ಮೇಲೆ ದಾಳಿ ಮಾಡಬಹುದು! ಕಮಲ್ ಹಾಸನ್ ಇಂಟರ್ ವ್ಯೂನಲ್ಲಿ ರಾಹುಲ್ ಗಾಂಧಿ ಆತಂಕದ ಮಾತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ