ರಷ್ಯಾ ಯುದ್ಧಾಸ್ತ್ರ ಖರೀದಿಸಿದ ಚೀನಾಗೆ ಅಮೆರಿಕದ ನಿರ್ಬಂಧ; ಭಾರತಕ್ಕೂ ನಿಷೇಧದ ಭೀತಿ..!


Updated:September 21, 2018, 5:15 PM IST
ರಷ್ಯಾ ಯುದ್ಧಾಸ್ತ್ರ ಖರೀದಿಸಿದ ಚೀನಾಗೆ ಅಮೆರಿಕದ ನಿರ್ಬಂಧ; ಭಾರತಕ್ಕೂ ನಿಷೇಧದ ಭೀತಿ..!
ಎಸ್-400 ಕ್ಷಿಪಣಿ ವ್ಯವಸ್ಥೆ
  • Share this:
- ನ್ಯೂಸ್18 ಕನ್ನಡ

ನವದೆಹಲಿ(ಸೆ. 21): ರಷ್ಯಾ ದೇಶದಿಂದ ಯುದ್ಧಾಸ್ತ್ರಗಳನ್ನ ಖರೀದಿಸಿದ ಚೀನಾಗೆ ಅಮೆರಿಕ ನಿರ್ಬಂಧ ಹೇರಲು ನಿರ್ಧರಿಸಿದೆ. ಅದೇ ಉಸಿರನಲ್ಲಿ ಭಾರತಕ್ಕೂ ಎಚ್ಚರಿಕೆ ನೀಡಿದೆ. ಆದರೆ, ಅಮೆರಿಕದ ನಿಷೇಧ ನಿರ್ಧಾರಕ್ಕೆ ಚೀನಾ ತಿರುಗೇಟು ನೀಡಿದ್ದು, ಅಮೆರಿಕ ತನ್ನ ಹುಚ್ಚಾಟ ನಿಲ್ಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ.

ಯಾಕೆ ನಿಷೇಧ?

ರಷ್ಯಾ ದೇಶವು ಉಕ್ರೇನ್ ಮತ್ತು ಸಿರಿಯಾ ದೇಶಗಳ ವಿಚಾರದಲ್ಲಿ ತಲೆಹಾಕುತ್ತಿರುವುದು; ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿತೆಂಬ ಆರೋಪ ಕೇಳಿಬಂದಿರುವುದು ಅಮೆರಿಕದ ಸಿಟ್ಟಿಗೆ ಕಾರಣವೆನ್ನಲಾಗಿದೆ. ಹೀಗಾಗಿ, ರಷ್ಯಾದ ಆರ್ಥಿಕತೆ ಮತ್ತು ಮಿಲಿಟರಿ ಶಕ್ತಿಯ ಮೂಲವನ್ನು ಹತ್ತಿಕ್ಕುವುದು ಅಮೆರಿಕದ ತಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಜೊತೆ ಮಿಲಿಟರಿ ವ್ಯವಹಾರ ಹೊಂದಿರುವ ದೇಶಗಳನ್ನ ಅಮೆರಿಕ ಹೆದರಿಸುತ್ತಾ ಬಂದಿದೆ. ನಿಷೇಧಗಳ ಮೂಲಕ ಅಮೆರಿಕದ ಶತ್ರುಗಳನ್ನು ಹತ್ತಿಕ್ಕುವ ಕಾಯ್ದೆ (CAATSA) ಬಳಸಿಕೊಂಡು ವಿವಿಧ ಮಿಲಿಟರಿ ಸಂಸ್ಥೆಗಳನ್ನು ಬ್ಲ್ಯಾಕ್​ಲಿಸ್ಟ್​ಗೆ ಹಾಕಿದೆ. ಇದರಲ್ಲಿ ರಷ್ಯಾದ 33 ಸೇರಿದಂತೆ ಒಟ್ಟು 72 ಜನರು ಮತ್ತು ಸಂಸ್ಥೆಗಳ ಹೆಸರು ಇದೆ. ಬ್ಲ್ಯಾಕ್ ಲಿಸ್ಟ್ ಆದ ಈ ಸಂಸ್ಥೆಗಳೊಂದಿಗೆ ಅಮೆರಿಕದವರು ಯಾವುದೇ ವ್ಯವಹಾರ ನಡೆಸುವಂತಿಲ್ಲ. ಹಾಗೆಯೇ ಬೇರೆ ಯಾವುದೇ ರಾಷ್ಟ್ರಗಳು ಇವರೊಂದಿಗೆ ವ್ಯವಹಾರ ನಡೆಸಿದರೂ ಅವರ ಮೇಲೂ ಅಮೆರಿಕ ನಿರ್ಬಂಧ ಹೇರುತ್ತದೆ.

ಅಮೆರಿಕದ ಈ ನಿಲುವನ್ನು ಧಿಕ್ಕರಿಸಿ ಚೀನಾ ದೇಶ ಈ ವರ್ಷ ರಷ್ಯಾದಿಂದ ಎಸ್-400 ಕ್ಷಿಪಣಿಯನ್ನು ಖರೀದಿಸಿದೆ. ಕಳೆದ ವರ್ಷದಂದು ಸುಖೋಯ್ ಎಸ್​ಯು-35 ಯುದ್ಧವಿಮಾನಗಳನ್ನ ಕೊಂಡುಕೊಂಡಿತ್ತು. ಈ ವ್ಯವಹಾರಕ್ಕೆ ಕಾರಣವಾದ ಚೀನಾ ಮಿಲಿಟರಿಯ ಅಂಗವಾದ ಎಕ್ವಿಪ್ಮೆಂಟ್ ಡೆವಲಪ್ಮೆಂಟ್ ಡಿಪಾರ್ಟ್​ಮೆಂಟ್(ಇಡಿಡಿ) ಅನ್ನು CAATSA ಪಟ್ಟಿಗೆ ಸೇರಿಸುವುದಾಗಿ ಅಮೆರಿಕ ಹೇಳಿದೆ.

ಭಾರತ ಕೂಡ ರಷ್ಯಾ ದೇಶದಿಂದ ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಂ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೂ ಇದೇ ರೀತಿ ನಿಷೇಧ ಹೇರಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ಸಂದೇಶ ರವಾನಿಸಿದೆ.

ಅತ್ತ, ಅಮೆರಿಕದ ನಿಷೇಧ ಬೆದರಿಕೆಗೆ ಚೀನಾ ತಲೆಕೆಡಿಸಿಕೊಂಡಿಲ್ಲ. ದಿನೇದಿನೇ ಬಲಗೊಳ್ಳುತ್ತಿರುವ ರಷ್ಯಾ-ಚೀನಾ ಸಂಬಂಧವು ಅಮೆರಿಕದ ಕ್ರಮದಿಂದ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆ ಇದೆ. ಆದರೆ, ಅಮೆರಿಕದ ನಿಲುವನ್ನು ಚೀನಾ ಬಲವಾಗಿ ಖಂಡಿಸಿದೆ.ಅಂತಾರಾಷ್ಟ್ರೀಯ ಸಂಬಂಧಗಳ ಮೂಲ ತತ್ವಗಳನ್ನು ಅಮೆರಿಕ ಧಿಕ್ಕರಿಸಿದೆ. ಎರಡು ದೇಶಗಳ ಹಾಗೂ ಎರಡು ಮಿಲಿಟರಿ ನಡುವಿನ ಸಂಬಂಧಕ್ಕೆ ಘಾಸಿ ಮಾಡಿದೆ. ಅಮೆರಿಕ ಕೂಡಲೇ ತನ್ನ ತಪ್ಪನ್ನು ತಿದ್ದಿಕೊಂಡು, ತನ್ನ ನಿರ್ಬಂಧ ಕ್ರಮಗಳನ್ನ ಹಿಂಪಡೆಯಬೇಕು. ಇಲ್ಲದಿದ್ದರೆ ಅಮೆರಿಕವು ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಚೀನಾ ಪ್ರತಿ ಎಚ್ಚರಿಕೆ ಕೊಟ್ಟಿದೆ.

ಆದರೆ, ಯಾವುದೇ ದೇಶದ ಮಿಲಿಟರಿ ವೃದ್ಧಿಗೆ ತಾನು ತಡೆ ಹಾಕುತ್ತಿಲ್ಲ. ಜಗತ್ತಿಗೆ ತಲೆನೋವಾಗಿರುವ ದೇಶಗಳ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದು ಅಮೆರಿಕ ನಿಲುವಾಗಿದೆ.
First published:September 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ