US Election 2020 Results: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಬಿಡೆನ್​ಗೆ ಸಾಕು ಇನ್ನೊಂದು ರಾಜ್ಯ; ಟ್ರಂಪ್​ಗೆ ಬೇಕು ಮೂರು

Donald Trump vs Joe Biden - ನೇವಡಾ, ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳು ಈಗ ಅಮೆರಿಕ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಜೋ ಬಿಡೆನ್ ಈ ಮೂರರಲ್ಲಿ ಒಂದು ಗೆದ್ದರೂ ಸಾಕು ಅಧ್ಯಕ್ಷರಾಗುತ್ತಾರೆ. ಟ್ರಂಪ್ ತಮ್ಮ ಪಟ್ಟ ಉಳಿಸಿಕೊಳ್ಳಲು ಮೂರನ್ನೂ ಗೆಲ್ಲಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ವಾಷಿಂಗ್ಟನ್(ನ. 06): ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಈಗಲೇ ಮುಕ್ತಾಯಗೊಳ್ಳುವಂತೆ ಕಾಣುತ್ತಿಲ್ಲ. ಅಮೆರಿಕದ ಐವತ್ತು ರಾಜ್ಯಗಳ ಪೈಕಿ 40ಕ್ಕೂ ಹೆಚ್ಚು ರಾಜ್ಯಗಳಲ್ಲಿ ಫಲಿತಾಂಶ ಸ್ಪಷ್ಟವಾಗಿದೆ. ಈವರೆಗೆ ಬಂದಿರುವ ಫಲಿತಾಂಶದಲ್ಲಿ ಡೆಮಾಕ್ರಾಟ್ ಪಕ್ಷಕ್ಕೆ 253 ಎಲೆಕ್ಟೋರಲ್ ವೋಟ್​ಗಳ ಬೆಂಬಲ ಇದೆ. ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ಪರವಾಗಿ 213 ಮಾತ್ರ ಇವೆ. 270 ಎಲೆಕ್ಟೋರಲ್ ವೋಟ್ ಗಳಿಸಿದರೆ ಬಹುಮತ ಸಿಗುತ್ತದೆ. ಈ ನಿಟ್ಟಿನಲ್ಲಿ ಡೆಮಾಕ್ರಾಟಿಕ್ ಪಕ್ಷದ ಜೋ ಬೈಡನ್ ಅವರು ನೂತನ ಅಮೆರಿಕ ಅಧ್ಯಕ್ಷರಾಗುವ ಹಾದಿ ತುಸು ಸುಗಮಗೊಂಡಿದೆ.

    ನೇವಡ(6), ನಾರ್ತ್ ಕರೋಲಿನಾ(15), ಜಾರ್ಜಿಯಾ(16), ಪೆನ್​ಸಿಲ್ವೇನಿಯಾ(20), ಆರಿಜೋನಾ(11) ರಾಜ್ಯಗಳಲ್ಲಿ ಇನ್ನೂ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳಬೇಕಿದೆ. 15 ವೋಟರ್ಸ್ ಹೊಂದಿರುವ ನಾರ್ತ್ ಕರೋಲಿನಾದಲ್ಲಿ ಟ್ರಂಪ್ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ, 11 ವೋಟರ್ಸ್ ಹೊಂದಿರುವ ಅರಿಜೋನಾ ರಾಜ್ಯದಲ್ಲಿ ಬೈಡನ್ ವಿಜಯಶಾಲಿಯಾಗಿ ಹೊರಹೊಮ್ಮಬಹುದು. ಇನ್ನುಳಿದ ನೇವಡ, ಜಾರ್ಜಿಯಾ ಮತ್ತು ಪೆನ್​ಸಿಲ್ವೇನಿಯಾ ರಾಜ್ಯಗಳು ಮುಂದಿನ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ಮೂರು ರಾಜ್ಯಗಳ ಪೈಕಿ ಬೈಡನ್ ಒಂದನ್ನು ಗೆದ್ದರೂ ಸಾಕು ಅಧ್ಯಕ್ಷರಾಗುವುದು ಖಚಿತವೆಂಬಂತಿದೆ. ಟ್ರಂಪ್ ಅವರು ಮೂರೂ ರಾಜ್ಯಗಳನ್ನ ಗೆದ್ದರೆ ಮಾತ್ರ ಅಧ್ಯಕ್ಷರಾಗಿ ಮರಳಿ ಸಿಂಹಾಸನ ಏರಬಹುದು.

    ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ಗೆ ಪಾರ್ಕಿನ್ಸನ್ ಕಾಯಿಲೆ? ಕೆಲವೇ ತಿಂಗಳಲ್ಲಿ ರಾಜೀನಾಮೆ?

    ನೇವಡಾ ರಾಜ್ಯದಲ್ಲಿ ಈವರೆಗೆ ನಡೆದಿರುವ ಶೇ. 89ರಷ್ಟು ಮತ ಎಣಿಕೆಯ ಟ್ರೆಂಡ್ ಪ್ರಕಾರ ಜೋ ಬೈಡನ್ ಸುಮಾರು 11 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ. ಇದೇ ಮುನ್ನಡೆಯನ್ನು ಅವರು ಮುಂದುವರಿಸಿದರೆ ನೇವಡಾ ರಾಜ್ಯವೇ ನಿರ್ಣಾಯಕ ಆಗಲಿದೆ.

    ಜಾರ್ಜಿಯಾ ರಾಜ್ಯದಲ್ಲಿ ಟ್ರಂಪ್ ಅವರ ಮುನ್ನಡೆ ಕೇವಲ 2,500 ಮತಗಳಷ್ಟೇ ಇದೆ. ಶೇ. 98ರಷ್ಟು ಮತ ಎಣಿಕೆ ಆಗಿದೆ. ಎಣಿಕೆ ಆಗಬೇಕಿರುವ ಮತಗಳು ಡೆಮಾಕ್ರಾಟ್ ಪಕ್ಷಕ್ಕೆ ಸಾಂಪ್ರದಾಯಿಕವಾಗಿ ಮತ ಹಾಕುವ ಪ್ರದೇಶಗಳಿಗೆ ಸೇರಿರುವುದು ಗಮನಾರ್ಹ. ಕೊನೆಯ ಸುತ್ತಿನ ಮತ ಎಣಿಕೆಯಲ್ಲಿ ಟ್ರಂಪ್ ಅವರಿಗೆ ಹಿನ್ನಡೆ ಆಗುವ ಸಾಧ್ಯತೆ ದಟ್ಟವಾಗಿದೆ. ಹಾಗೇನಾದರೂ ಆದರೆ ಜಾರ್ಜಿಯಾ ಪಾಲಿಗೆ ಮಹತ್ವದ ಬೆಳೆವಣಿಗೆಯಾಗುತ್ತದೆ. ಇಲ್ಲಿ 1992ರ ನಂತರ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಿಲ್ಲ.

    ಇನ್ನು, ಪೆನ್​ಸಿಲ್ವೇನಿಯಾ ರಾಜ್ಯದಲ್ಲಿ 20 ಎಲೆಕ್ಟೋರಲ್ ವೋಟ್​ಗಳಿವೆ. ಇಲ್ಲಿಯೂ ಟ್ರಂಪ್ ತೀರಾ ನಿಕೃಷ್ಟ ಮುನ್ನಡೆಯಲ್ಲಿದ್ಧಾರೆ. ಜಾರ್ಜಿಯಾ ರಾಜ್ಯದಲ್ಲಿದ್ದಂಥ ಸ್ಥಿತಿಯೇ ಇಲ್ಲಿದೆ. ಅಂದರೆ, ಎಣಿಕೆಯಾಗಬೇಕಿರುವ ಪ್ರದೇಶಗಳು ಡೆಮಾಕ್ರಾಟ್​ನ ಸಾಂಪ್ರದಾಯಿಕ ಕ್ಷೇತ್ರಗಳಾಗಿವೆ. ಹೀಗಾಗಿ, ಬೈಡನ್ ಅಂತಿಮವಾಗಿ ಇಲ್ಲಿ ವಿಜಯಶಾಲಿಯಾಗುವ ಸಾಧ್ಯತೆ ಇಲ್ಲದಿಲ್ಲ.

    ಇದನ್ನೂ ಓದಿ: Gold Rate Today: ಚಿನ್ನ ಕೊಳ್ಳಲು ಇದು ಸುಸಂದರ್ಭವೇ?; ಇಲ್ಲಿದೆ ಮಾಹಿತಿ

    ಆರಿಜೋನಾದಲ್ಲಿ ನಿಕಟ ಪೈಪೋಟಿ ನಡೆದೆಯಾದರೂ ಶೆ. 90ರಷ್ಟು ಮತ ಎಣಿಕೆ ಆದ ಬಳಿಕ ಬೈಡನ್ 46,000 ಮತಗಳ ಅಂತರದಿಂದ ಮುನ್ನಡೆ ಹೊಂದಿದ್ದಾರೆ. ಇದು ಗೆಲುವಿಗೆ ಅವಶ್ಯ ಎಂದು ವಿಶ್ಲೇಷಕರು ಹೇಳುತ್ತಾರೆ.

    ನಾರ್ತ್ ಕರೋಲಿನಾದಲ್ಲಿ ಟ್ರಂಪ್ ಸ್ಪಷ್ಟ ಮುನ್ನಡೆಯಲ್ಲಿದ್ದು ಅಲ್ಲಿ ಅವರ ಗೆಲುವು ಬಹುತೇಕ ನಿಶ್ಚಿತವಾಗಿದೆ. ಹೀಗಾಗಿ, ನೇವಡ, ಜಾರ್ಜಿಯಾ ಮತ್ತು ಪೆನ್​ಸಿಲ್ವೇನಿಯಾ ರಾಜ್ಯಗಳ ಫಲಿತಾಂಶದತ್ತ ಎಲ್ಲರ ಚಿತ್ತ ಹರಿದಿದೆ. ಈ ಮೂರೂ ರಾಜ್ಯಗಳಲ್ಲಿ ಬೈಡನ್​ಗೆ ಗೆಲುವಿನ ಅವಕಾಶ ಇರುವುದರಿಂದ ಅವರೇ ಮುಂದಿನ ಅಧ್ಯಕ್ಷರಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ.

    ಎಲ್ಲಾ ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಆಯ್ಕೆಯಾಗುವ 538 ಜನಪ್ರತಿನಿಧಿಗಳು ಮತ್ತೆ ಒಂದೆಡೆ ಸೇರಿ ಅಮೆರಿಕ ಅಧ್ಯಕ್ಷರನ್ನ ಚುನಾಯಿಸಲು ಮತ ಹಾಕುತ್ತಾರೆ. ತಮ್ಮ ತಮ್ಮ ರಾಜ್ಯಗಳ ಬಹುಮತ ಆಧಾರದ ಮೇಲೆ ಇವರು ಮತ ಹಾಕಿ ಅಧ್ಯಕ್ಷರ ಆಯ್ಕೆ ಮಾಡುತ್ತಾರೆ.
    Published by:Vijayasarthy SN
    First published: