news18-kannada Updated:January 13, 2021, 9:21 AM IST
ಟೆಸ್ಲಾ ಕಂಪೆನಿಯ ತಯಾರಿಕಾ ಘಟಕ.
ಬೆಂಗಳೂರು: ಜಗತ್ತಿನ ಸುಪ್ರಸಿದ್ಧ ಎಲೆಕ್ಟ್ರಿಕ್ ವಾಹನಗಳ ತಯಾರಕಾ ಕಂಪೆನಿಯಾದ ಅಮೆರಿಕ ಮೂಲದ ಟೆಸ್ಲಾ ಕಂಪೆನಿ ಇದೀಗ ಭಾರತದಲ್ಲಿ ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ತೆರೆಯಲು ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳ ಸಂಶೋಧನೆ ಮತ್ತು ಬೇಡಿಕೆ ಹೆಚ್ಚುತ್ತಿರು ಇಂದಿನ ದಿನಗಳಲ್ಲಿ ಪ್ರಖ್ಯಾತ ಟೆಸ್ಲಾ ಕಂಪೆನಿ ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲು ಮುಂದಾಗಿರುವುದು ದೇಶದ ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತು ಸಂಶೋಧನೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಟೆಸ್ಲಾ ಕಂಪೆನಿ ಈಗಾಗಲೇ ಭಾರತದ ಕಂಪೆನಿಗಳ ಪಟ್ಟಿಯಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ ಎಂದು ನೋಂದಾಯಿಸಿಕೊಂಡಿದ್ದು, ಬೆಂಗಳೂರಿನಲ್ಲಿ ಬಂಡವಾಳ ಹೂಡಲು ತುದಿಗಾಲಿನಲ್ಲಿ ನಿಂತಿದೆ. ಇನ್ನೂ ಈಗಾಗಲೇ ಜನವರಿ 8 ರಂದು ಬೆಂಗಳೂರಿನಲ್ಲಿ ಕಚೇರಿ ತೆರೆಯಲು 15 ಲಕ್ಷ. ರೂ ಆರಂಭಿಕ ಅಧಿಕೃತ ಬಂಡವಾಳವನ್ನೂ ಹೂಡಿದೆ ಎಂಬ ಮಾಹಿತಿಗಳು ಇದೀಗ ಲಭ್ಯವಾಗುತ್ತಿವೆ.
ಅಮೆರಿಕ ಮೂಲದ ಟೆಸ್ಲಾ ಕಂಪೆನಿ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ತೆರೆದು ಹೂಡಿಕೆ ಮಾಡಲು ಮುಂದಾಗಿರುವ ಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಅಲ್ಲದೆ, ಈ ಕುರಿತು ಮಾತನಾಡಿರುವ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, "ಟೆಸ್ಲಾ ರಾಜ್ಯದಲ್ಲಿ ತನ್ನ ಕಚೇರಿಯನ್ನು ಸ್ಥಾಪಿಸುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ. ನಾವು ಅದರೊಂದಿಗೆ ಸಹಕರಿಸುತ್ತೇವೆ ಮತ್ತು ಸುಗಮವಾಗಿ ಕಾರ್ಯನಿರ್ವಹಿಸಲು ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ" ಎಂದು ಭರವಸೆ ನೀಡಿದ್ದಾರೆ.
ಟೆಸ್ಲಾ ರಾಜ್ಯದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಇನ್ನೂ ಯಾವುದೇ ಸ್ಥಳವನ್ನು ಅಂತಿಮಗೊಳಿಸಿಲ್ಲ. ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಸರ್ಕಾರ ಟೆಸ್ಲಾ ಕಂಪೆನಿಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಎಂದು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಟೆಸ್ಲಾ ಕಂಪೆನಿಯ ವಾಹನಗಳ ಉತ್ಪಾದನಾ ಘಟಕ ಆರಂಭವಾದರೆ, ಭಾರತೀಯ ಮೂಲದ ವೈಭವ್ ತನೇಜಾ, ವೆಂಕಟ್ರಂಗಂ ಶ್ರೀರಾಮ್ ಮತ್ತು ಡೇವಿಡ್ ಜಾನ್ ಫೆಯಿನ್ಸ್ಟೀನ್ ಹೊಸ ಕಂಪನಿಯ ಮೂವರು ನಿರ್ದೇಶಕರಾಗಲಿದ್ದಾರೆ ಎಂದು ತಿಳಿದುಬಂದಿದೆ.
2021 ರ ಆರಂಭದಲ್ಲಿ ಟೆಸ್ಲಾ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಳೆದ ಡಿಸೆಂಬರ್ನಲ್ಲೇ ಹೇಳಿದ್ದರು. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೂಡ ಕಳೆದ ವರ್ಷ ಟ್ವಿಟರ್ನಲ್ಲಿ ತಮ್ಮ ಕಂಪನಿ 2021 ರಲ್ಲಿ ಭಾರತಕ್ಕೆ ಪ್ರವೇಶಿಸುವುದಾಗಿ ಘೋಷಿಸಿದ್ದರು. ವಿಶ್ವದ ಪ್ರಸಿದ್ಧ ಆಟೋ ಕಂಪನಿ ಎಂದು ಹೆಸರಾಗಿರುವ ಟೆಸ್ಲಾ ಮಾಡೆಲ್ 3 ಜೊತೆಗೆ ಭಾರತಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಹೋರಾಟಕ್ಕೆ ಕೋಲಾರದ ಕಾಗಿನೆಲೆ ಪೀಠವೇ ಮುಂದಾಳತ್ವ!
ಮಾಡೆಲ್ 3 ವಾಹನದ ಬೆಲೆ ಅಂದಾಜು 60 ಲಕ್ಷ ಇರುವ ನಿರೀಕ್ಷೆ ಇದೆ. ಈ ಸಂಪೂರ್ಣ ಎಲೆಕ್ಟ್ರಿಕ್ ವಾಹನವು 60 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ನಿಂದ ನಿರ್ಮಿಸುವ ಸಾಧ್ಯತೆ ಇದ್ದು, ಒಮ್ಮೆ ಚಾರ್ಚ್ ಮಾಡಿದರೆ 500 ಕಿ.ಮೀವರೆಗೆ ಕ್ರಮಿಸುವ ಸಾಮರ್ಥ್ಯ ಹೊಂದಲಿದೆ. ಸೆಡಾನ್ ಸುಮಾರು 250 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಕೇವಲ 3.1 ಸೆಕೆಂಡುಗಳಲ್ಲಿ 0 ರಿಂದ 60 ಎಂಪಿ ವೇಗದಲ್ಲಿ ಹೋಗುತ್ತದೆ.
ಕರ್ನಾಟಕದಲ್ಲಿ ಈಗಾಗಲೇ ಹಲವಾರು ಎಲೆಕ್ಟ್ರಿಕ್ ವಾಹನಗಳ ಕಂಪೆಮನಿಗಳು ತಮ್ಮ ಉತ್ಪಾದನಾ ಘಟಕವನ್ನು ತೆರೆದಿವೆ. ಏಥರ್ ಎನರ್ಜಿ ಮತ್ತು ಮಹೀಂದ್ರಾ ಎಲೆಕ್ಟ್ರಿಕಲ್ ಈಗಾಗಲೇ ಭಾರತೀಯ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಪ್ರವೇಶಿಸಿವೆ. ಈ ನಡುವೆ ಎಲೆಕ್ಟ್ರಿಕ್ ಮೊಬಿಲಿಟಿ ಸೊಲ್ಯೂಷನ್ಸ್ ಮತ್ತು ಸರ್ವೀಸಸ್ ಕಂಪನಿಯಾದ ಸನ್ ಮೊಬಿಲಿಟಿ 2021 ರ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ 100 ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಹೊರತರುವ ಯೋಜನೆ ಯೋಜನೆಯನ್ನು ಕಳೆದ ಡಿಸೆಂಬರ್ನಲ್ಲಿ ಪ್ರಕಟಿಸಿತ್ತು. ಇದರ ಬೆನ್ನಿಗೆ ಇದೀಗ ಟೆಸ್ಲಾ ಸಹ ಬೆಂಗಳೂರಿನಲ್ಲಿ ತನ್ನ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾಗಿರುವುದು ದೇಶದ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎನ್ನಲಾಗುತ್ತಿದೆ.
Published by:
MAshok Kumar
First published:
January 13, 2021, 9:18 AM IST