ಜೇನು (Bee) ಎಂದರೆ ಮೊದಲು ನೆನಪಾಗುವುದೇ ಅದರ ಸಿಹಿ. ಸಿಹಿ (Sweet) ಜೊತೆ ಪರಿಸರಕ್ಕೂ ದೊಡ್ಡ ಕೊಡುಗೆ ನೀಡುವ ಜೇನು ಪರಾಗ ಸ್ಪರ್ಶದ ಮೂಲಕ ಸಸ್ಯ ಸಂಕುಲವನ್ನೇ ಅಭಿವೃದ್ಧಿ ಪಡಿಸುತ್ತದೆ. ಅಷ್ಟೇ ಅಲ್ಲ ರುಚಿಗಾಗಿ, ಸಿಹಿಗಾಗಿ ಔಷಧಿಯಾಗಿ (Medicine) ಜೇನು ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಜೇನುನೊಣಗಳಿಲ್ಲದಿದ್ದರೇ ಮಾನವ ಕುಲಕ್ಕೆ ಆಪತ್ತಿದೆ ಎನ್ನುತ್ತಾರೆ ವಿಜ್ಞಾನಿಗಳು. ಅದರಂತೆ ಅಮೇರಿಕಾದಲ್ಲಿ(America) ಜೇನು ಸಂತತಿ ಕ್ಷೀಣಿಸುತ್ತಿದೆ ಎಂದು ವರದಿಯಾಗಿದೆ. ಜೇನು ನೊಣಗಳ ಒಂದು ಕಾಯಿಲೆಯಿಂದಾಗಿ ಸಂತತಿ ಕಡಿಮೆಯಾಗುತ್ತಿದೆ ಎನ್ನಲಾಗಿದೆ. ಅದಕ್ಕಾಗಿ ಯುಎಸ್ ಲಸಿಕೆಯನ್ನು (Vaccine) ಅಭಿವೃದ್ಧಿಪಡಿಸಿದ್ದು ಜೇನುನೊಣಗಳಿಗೆ ವಿಶ್ವದ ಮೊದಲ ಲಸಿಕೆ ಬಳಕೆಯನ್ನು ಯುಎಸ್ ಅನುಮೋದಿಸಿದೆ. ಯುಎಸ್ ಬಯೋಟೆಕ್ ಕಂಪನಿಯಾದ ದಲನ್ ಅನಿಮಲ್ ಹೆಲ್ತ್ ರಚಿಸಿದ ಲಸಿಕೆಗೆ ಅಲ್ಲಿನ ಕೃಷಿ ಇಲಾಖೆ (USDA) ಷರತ್ತುಬದ್ಧ ಪರವಾನಗಿಯನ್ನು ನೀಡಿದೆ.
ಫೌಲ್ಬ್ರೂಡ್ ಕಾಯಿಲೆಗೆ ಹೊಸ ಲಸಿಕೆ
ಅಮೇರಿಕಾದಲ್ಲಿ ಜೇನು ನೊಣಗಳನ್ನು ಹೆಚ್ಚು ಬಾಧಿಸುವ ಕಾಯಿಲೆಯಾದ ಫೌಲ್ಬ್ರೂಡ್ ಕಾಯಿಲೆ ಹೆಚ್ಚಾಗುತ್ತಿದ್ದು ಜೇನು ಸಂತತಿಗೆ ಅಪಾಯ ಎದುರಾಗಿದೆ. ಫೌಲ್ಬ್ರೂಡ್ ಕಾಯಿಲೆ ಮೊಟ್ಟೆ ಮತ್ತು ಮರಿಗಳ ಮೇಲೆ ಆಕ್ರಮಿಸುವ ವೈರಸ್ ಖಾಯಿಲೆಯಾಗಿದ್ದು ನೊಣಗಳಿಗೆ ತಗುಲುವುದಿಲ್ಲ. ಇದು ಬ್ಯಾಕ್ಟೀರಿಯಂ ಪೇನಿಬಾಸಿಲಸ್ ಲಾರ್ವಾದಿಂದ ಉಂಟಾಗುವ ಗಂಭೀರ ಕಾಯಿಲೆಯಾಗಿದ್ದು, ಇದರಿಂದ ಜೇನು ಗೂಡುಗಳಲ್ಲಿ ನೊಣಗಳ ಸಂಖ್ಯೆ ವೃದ್ಧಿಯಾಗುವುದಿಲ್ಲ. ಇದರ ನಿವಾರಣೆಗಾಗಿ ಈವರೆಗೂ ಯಾವುದೇ ಔಷಧವೂ ಇರಲಿಲ್ಲ. ಹೀಗಾಗಿ ಮಾರಣಾಂತಿಕ ರೋಗವನ್ನು ತಡೆಗಟ್ಟಲು ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದೆ.
ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಲಸಿಕೆಯು ಜೇನುನೊಣಗಳನ್ನು ರಕ್ಷಿಸುವಲ್ಲಿ ಪ್ರಗತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ದಲನ್ ಅನಿಮಲ್ ಹೆಲ್ತ್ ಸಿಇಒ ಆನೆಟ್ ಕ್ಲೈಸರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಣಿ ಜೇನಿಗೆ ತಿನ್ನಿಸಿದ ರಾಯಲ್ ಜೆಲ್ಲಿ (ಜೇನುಹುಳಗಳ ಸ್ರವಿಕೆ)ಯಲ್ಲಿ ಕೆಲವು ಬ್ಯಾಕ್ಟೀರಿಯಾಗಳನ್ನು ಸೇರಿಸುವ ಮೂಲಕ ಲಸಿಕೆ ಕಾರ್ಯನಿರ್ವಹಿಸುತ್ತದೆ. ರಾಣಿ ಹುಳು ಇದನ್ನು ಸೇವಿಸಿದ ನಂತರ ಅಂಡಾಶಯದಲ್ಲಿ ಲಸಿಕೆ ಕೆಲಸ ಮಾಡುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಜೇನುನೊಣ ಲಾರ್ವಾಗಳು ನಂತರ ಅವು ಮೊಟ್ಟೆಯೊಡೆಯುತ್ತಿದ್ದಂತೆ ಫೌಲ್ಬ್ರೂಡ್ ಕಾಯಿಲೆ ವಿರುದ್ಧ ಪ್ರತಿರಕ್ಷೆಯನ್ನು ಪಡೆದುಕೊಳ್ಳುತ್ತವೆ. ಇದು ರೋಗದಿಂದ ಜೇನು ಹುಳಗಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ದಲನ್ನ ಅಧ್ಯಯನಗಳು ತಿಳಿಸಿವೆ.
ಜೇನುಸಾಕಣೆದಾರರಿಗೆ ವರದಾನವಾದ ಲಸಿಕೆ
ಅಮೇರಿಕನ್ ಫೌಲ್ಬ್ರೂಡ್ ರೋಗವು ಜೇನುಸಾಕಣೆದಾರರಿಗೆ ದೊಡ್ಡ ಸವಾಲಾಗಿದೆ. ಅಮೇರಿಕಾದಲ್ಲಿ ಸುಮಾರು ಕಾಲು ಭಾಗದಷ್ಟು ರೋಗ ಆವರಿಸಿದ್ದು ಯಾವುದೇ ಚಿಕಿತ್ಸೆ ಇಲ್ಲದೆ ರೋಗ ಉಲ್ಬಣಗೊಳ್ಳುತ್ತಲೇ ಇದೆ. ಇದೀಗ ಬಂದ ಹೊಸ ಲಸಿಕೆಯು ಜೇನುಸಾಕಣೆದಾರರಿಗೆ ನಿಜಕ್ಕೂ ವರವಾಗಬಹುದು ಎಂದು ಕ್ಯಾಲಿಫೋರ್ನಿಯಾ ಸ್ಟೇಟ್ ಜೇನುಸಾಕಣೆದಾರರ ಸಂಘದ ಮಂಡಳಿಯ ಸದಸ್ಯ ಟ್ರೆವರ್ ಟೌಜರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ನಾವು ನಮ್ಮ ಜೇನುಗೂಡುಗಳಲ್ಲಿ ಸೋಂಕನ್ನು ತಡೆಗಟ್ಟಲು ಸಾಧ್ಯವಾದರೆ, ನಾವು ದುಬಾರಿ ಚಿಕಿತ್ಸೆಗಳನ್ನು ತಪ್ಪಿಸಬಹುದು ಮತ್ತು ನಮ್ಮ ಜೇನುನೊಣಗಳನ್ನು ಆರೋಗ್ಯಕರವಾಗಿಡುವ ಇತರ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸಬಹುದು" ಎಂದು ಅವರು ತಿಳಿಸಿದ್ದಾರೆ.
ವಾಣಿಜ್ಯ ಜೇನುಸಾಕಣೆದಾರರಿಗೆ ಲಸಿಕೆಯನ್ನು "ಸೀಮಿತ ಆಧಾರದ ಮೇಲೆ" ವಿತರಿಸಲು ದಲನ್ ಯೋಜಿಸಿದ್ದಾರೆ ಮತ್ತು ಉತ್ಪನ್ನವು ಬಹುಶಃ ಈ ವರ್ಷ US ನಲ್ಲಿ ಖರೀದಿಸಲು ಲಭ್ಯವಿರುತ್ತದೆ ಎಂದು ಕಂಪನಿಯ ಮೂಲಗಳು ಹೇಳಿವೆ.
ಇದನ್ನೂ ಓದಿ: Loan: ತಂದೆ ಸಾಲ ನೀಡದ್ದಕ್ಕೆ ಮಗನ ಮೇಲೆ ಹಲ್ಲೆ; ಹೆಜ್ಜೇನು ದಾಳಿಗೆ 2 ಕೋಟಿಯ 2 ಕುದುರೆ ಸಾವು
ಅಮೇರಿಕನ್ ಫೌಲ್ಬ್ರೂಡ್ ಯುಎಸ್ನಲ್ಲಿ ಮೊದಲಿಗೆ ಕಂಡುಬಂದಿದ್ದು ನಂತರ ಪ್ರಪಂಚದಾದ್ಯಂತ ಸಾಂಕ್ರಾಮಿಕವಾಗಿ ಹರಡಿದೆ. ಯುಎಸ್ ತನ್ನ ಆಹಾರ ಪರಾಗಸ್ಪರ್ಶವನ್ನು ಉತ್ತೇಜಿಸಲು ನಿರ್ವಹಿಸಿದ ಜೇನುನೊಣಗಳ ವಸಾಹತುಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಹೀಗಾಗಿ ಕಾಯಿಲೆಯಿಂದ ಸಾಯುತ್ತಿರುವ ಜೇನುನೊಣಗಳ ನಷ್ಟ ಅಮೇರಿಕಾಕ್ಕೆ ದೊಡ್ಡ ಹೊಡೆತವಾಗಿದೆ. ಕೇವಲ ಕಾಯಿಲೆ ಮಾತ್ರವಲ್ಲದೇ ಆವಾಸಸ್ಥಾನದ ನಷ್ಟ, ಕೀಟನಾಶಕ ಬಳಕೆ ಮತ್ತು ಹವಾಮಾನ ಬಿಕ್ಕಟ್ಟಿನ ಕಾರಣದಿಂದಾಗಿ ಅನೇಕ ಜೇನುನೊಣ ಪ್ರಭೇದಗಳು ಅವನತಿ ಹಂತದಲ್ಲಿವೆ ಎನ್ನುತ್ತವೆ ವರದಿಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ