Afghanistan Crisis: ಅಫ್ಘನ್ ನೆಲದಲ್ಲಿ ತಾಲಿಬಾನಿಗಳ ಅಟ್ಟಹಾಸ ಎಗ್ಗಿಲ್ಲದೆ ಸಾಗುತ್ತಿದೆ. ಅಪ್ಘಾನ್ ಪ್ರಜೆಗಳಿಗೆ ತಾವು ಯಾವುದೇ ರೀತಿಯ ಹಾನಿಯನ್ನುಂಟು ಮಾಡುವುದಿಲ್ಲವೆಂದು ಪತ್ರಿಕಾಗೋಷ್ಠಿಗಳಲ್ಲಿ ತಾಲಿಬಾನ್ (Taliban) ನಾಯಕರು ಹೇಳಿಕೆ ಕೊಡುತ್ತಿದ್ದಂತೆ ಇತ್ತ ಅದೆಷ್ಟೋ ಪ್ರಜೆಗಳು ತಾಲಿಬಾನಿಗಳ ರಕ್ತದಾಹಕ್ಕೆ ಬಲಿಯಾಗಿದ್ದಾರೆ. ಈ ನಾಯಕರ ಹೇಳಿಕೆಗಳು ಲೋಕ ಮೆಚ್ಚಿಸುವುದಕ್ಕೆ ಮಾಡುತ್ತಿರುವ ಕಪಟ ನಾಟಕ ಎಂಬಂತೆ ಕೈಯಲ್ಲಿ ಬಂದೂಕು ಹಿಡಿದುಕೊಂಡಿರುವ ತಾಲಿಬಾನ್ ಪಡೆಗಳು ಕಂಡಲ್ಲಿ ಗುಂಡಿಕ್ಕುತ್ತಿದ್ದಾರೆ. ಅಫ್ಘಾನ್ನ ಅದೆಷ್ಟೋ ಅಧಿಕಾರಿಗಳು ಪಲಾಯನಗೈದಿದ್ದರೆ ಇನ್ನು ಕೆಲವು ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಇನ್ನೊಂದಷ್ಟು ಜನ ಬಲಿಯಾಗಿದ್ದಾರೆ. ಒಟ್ಟಿನಲ್ಲಿ ಅಫ್ಘನ್ ಪ್ರಜೆಗಳ ಗೋಳು ಯಾರ ಕಿವಿಯನ್ನೂ ತಲುಪುತ್ತಿಲ್ಲ. ಅವರ ರೋದನ ಮೂಕ ರೋದನವಾಗಿ ಮಾರ್ಪಟ್ಟಿದೆ. ಮಾಡು ಇಲ್ಲವೇ ಮಡಿ ಎಂಬಂತಹ ಸ್ಥಿತಿಗೆ ಅಲ್ಲಿನ ಪ್ರಜೆಗಳು ತಲುಪಿದ್ದಾರೆ.
ಒಂದೋ ತಾಯ್ನಾಡಿನಲ್ಲಿಯೇ ಈ ಕ್ರೂರಿಗಳ ಕೈಕೆಳಗೆ ಆಯಸ್ಸು ಇರುವಷ್ಟು ದಿನ ಬದುಕುವುದು, ಇಲ್ಲದಿದ್ದರೆ ಅವರನ್ನು ಪ್ರತಿಭಟಿಸಿ ಗುಂಡೇಟಿಗೆ ಬಲಿಯಾಗುವುದು. ತಾಲಿಬಾನಿಗಳ ಸುಪರ್ದಿಗೆ ದೇಶ ಒಳಪಡುತ್ತಿದ್ದಂತೆಯೇ ಪಲಾಯನಗೈದ ಹಲವಾರು ಜನರುಗಳಲ್ಲಿ ಅಲ್ಲಿನ ಸೈನಿಕರ ಪಡೆಯೂ ಒಂದು. ದೇಶ ಕಾಪಾಡಬೇಕಾದ ಯೋಧರಿಗೆ ಇಂತಹ ದುರ್ಗತಿ ಬರಬಾರದು ಎಂಬುದು ಈ ಲೇಖನವನ್ನು ಬರಹ ರೂಪಕ್ಕಿಳಿಸಿರುವ ಮ್ಯಾಥ್ಯೂ ರೋಸನ್ಬರ್ಗ್ ಮಾತಾಗಿದೆ. ಮ್ಯಾಥ್ಯೂ ಸೈನಿಕರ ದುಃಸ್ಥಿತಿ ಹಾಗೂ ತಾಲಿಬಾನಿಗಳ ವಿರುದ್ಧ ಹೋರಾಟ ನಡೆಸಿದ್ದ ಸೈನಿಕರ ಪತ್ತೆಗಾಗಿ ತಾಲಿಬಾನಿಗಳ ಹುಡುಕಾಟ, ಸೈನಿಕರ ಕುಟುಂಬಕ್ಕೆ ನೀಡುತ್ತಿರುವ ಚಿತ್ರಹಿಂಸೆಯನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.
ಬದುಕಿದರೆ ಬೇಡಿಯಾದರೂ ತಿನ್ನುವೆವು ಎಂಬಂತೆ ಈ ದೇಶದ ಸೇನಾ ತುಕಡಿಗಳೇ ಇದ್ದಬಿದ್ದ ವಾಹನಗಳನ್ನು ಹತ್ತಿ ಉಜ್ಬೇಕಿಸ್ತಾನ, ಇರಾನ್ ಕಡೆ ಪ್ರಾಣ ರಕ್ಷಣೆಗಾಗಿ ಪಲಾಯನಗೈದಿದ್ದಾರೆ. ಇನ್ನು ಕೆಲವರು ಕಳ್ಳದಾರಿಯಲ್ಲಿ ತಾಲಿಬಾನಿಗಳ ಕಣ್ತಪ್ಪಿಸಿ ಓಡಿಹೋಗುತ್ತಿದ್ದಾರೆ.
ದೇಶ ಕಾಯುವ ಭದ್ರತಾ ಪಡೆಗಳೇ ಹೀಗೆ ಬೇರೆ ದೇಶಗಳಿಗೆ ಪಲಾಯನಗೈಯ್ಯುತ್ತಿರುವುದು ಅಸಹಾಯಕ ಪರಿಸ್ಥಿತಿ ತೋರಿಸುತ್ತಿದೆ. ತಾಲಿಬಾನ್ ಮುಖಂಡರೊಂದಿಗೆ ಕೆಲ ಸೈನಿಕರು ಮಾತುಕತೆ ನಡೆಸಿ ಶರಣಾಗತಿ ಕೋರಿ ತಮ್ಮ ತಾಯ್ನಾಡಿಗೆ ಮರಳಿದರೆ ಇನ್ನು ಕೆಲವರು ತಾಲಿಬಾನ್ ಸಂಘಟನೆಯನ್ನು ಸೇರಿಕೊಂಡಿದ್ದಾರೆ.
ಈ ಸಶಸ್ತ್ರ ಪಡೆಗಳಿಗೆ ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ತಾಲಿಬಾನ್ ವಿರುದ್ಧದ ಹೋರಾಟಕ್ಕಾಗಿ ಬಿಲಿಯನ್ಗಟ್ಟಲೆ ಹಣ ವ್ಯಯಿಸಿ ಉನ್ನತ ಮಟ್ಟದ ತರಬೇತಿಗಳನ್ನು ನೀಡಿದ್ದರು. ಆದರೆ ಈ ದೇಶಗಳ ಪರಿಶ್ರಮ ಕೆಲವೇ ದಿನಗಳಲ್ಲಿ ವ್ಯರ್ಥವಾಗಿದೆ. ಸೇನೆ ಕಟ್ಟಲು ಅಮೆರಿಕದಂತಹ ಬಲಾಢ್ಯ ದೇಶಗಳಿಗೆ ಅದೆಷ್ಟೋ ವರ್ಷಗಳು ಬೇಕಾಗಿದ್ದವು. ಆದರೆ ತಾಲಿಬಾನಿಗಳ ಕೈಯಲ್ಲಿ ಈ ಸೇನೆಗಳು ನಲುಗಿ ಹೋಗಿವೆ.
ಅಪ್ಘಾನಿಸ್ತಾನದ ಸೈನಿಕರುಗಳು ಇಷ್ಟು ಹೇಡಿಗಳೇ..? ತಮ್ಮ ತಾಯ್ನಾಡಿಗಾಗಿ ಅವರುಗಳು ಹೋರಾಡಲಿಲ್ಲವೇ ಎಂದು ಸಂಪೂರ್ಣ ಲೋಕವೇ ಮಾತನಾಡಿಕೊಳ್ಳುತ್ತಿದ್ದರೂ ತಮ್ಮ ಪ್ರಾಣ ಕೊಟ್ಟು ತಾಲಿಬಾನಿಗಳನ್ನು ಹಿಮ್ಮೆಟ್ಟಿಸಲು ಪಣ ತೊಟ್ಟ ಅದೆಷ್ಟೋ ಸೈನಿಕರಿದ್ದರು. ಆದರೆ ಅವರೆಲ್ಲರೂ ತಮ್ಮ ಉಸಿರಿರುವವರೆಗೂ ತಾಲಿಬಾನಿಗಳೊಂದಿಗೆ ಹೋರಾಟ ನಡೆಸಿದ್ದಾರೆ ಎಂಬುದು ಕೂಡ ಉಲ್ಲೇಖನೀಯವಾದುದು.
ಅಫ್ಘನ್ನ ಕಮಾಂಡೋ ಫರೀದ್ ಎಂಬುವವರು ತನ್ನೊಂದಿಗೆ ಹೋರಾಡಿದ್ದ ಅಮೆರಿಕದ ಸೈನಿಕನಿಗೆ ಪಠ್ಯ ಸಂದೇಶ ಕಳುಹಿಸಿದ್ದು “ಬೇರೆ ಯಾವುದೇ ದಾರಿ ಇಲ್ಲ” ಎಂಬ ಮಾತೇ ಸೈನಿಕರ ಅಸಹಾಯಕತೆಯನ್ನು ತೋರ್ಪಡಿಸುತ್ತಿದೆ. ಅವರೊಂದಿಗೆ ಬೆಂಬಲವಾಗಿ ನಿಲ್ಲಬೇಕಾದ್ದ ಅಧಿಕಾರಿ ವರ್ಗದವರೇ ಪಲಾಯನೈದಿರುವಾಗ ಸೈನಿಕ ಪಡೆಗಳು ಎಷ್ಟೇ ಹೋರಾಡಿದರೂ ವ್ಯರ್ಥ ಎನ್ನಿಸಿಬಿಡುತ್ತದೆ. ಈ ಕಮಾಂಡೋ ಪೂರ್ವ ಅಪ್ಘಾನಿಸ್ತಾನದ ಪರ್ವತಗಳಲ್ಲಿ ಅಡಗಿ ಕುಳಿತಿದ್ದರೂ ತಾಲಿಬಾನಿಗಳಿಗೆ ಸಿಕ್ಕಿಬಿದ್ದಿದ್ದು ಅವರಿಗೆ ಶರಣಾಗಿದ್ದಾರೆ ಎಂಬ ಸುಳಿವು ದೊರಕಿದೆ.
ಅಮೆರಿಕ ಹಾಗೂ ನ್ಯಾಟೋ ಪಡೆಗಳೊಂದಿಗೆ ಕಾರ್ಯಾಚರಿಸುತ್ತಿದ್ದ ಸೇನಾ ದಳಗಳನ್ನು ಪ್ರಸ್ತುತ ತಾಲಿಬಾನಿಗಳು ಹುಡುಕುತ್ತಿದ್ದು ಜಗತ್ತಿಗೆ ತಾವು ಅಮಾಯಕರು ಎಂದು ತೋರ್ಪಡಿಸಿಕೊಳ್ಳುತ್ತಿರುವ ಈ ರಕ್ತಪಿಪಾಸುಗಳು ನರರೂಪದ ರಾಕ್ಷಸರು ಎಂಬುದನ್ನು ಕಾರ್ಯರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ತಾಲಿಬಾನಿಗಳು ಹುಡುಕುತ್ತಿರುವ ಸೇನಾ ಸದಸ್ಯರು ದೊರೆಯದೇ ಇದ್ದರೆ ಕುಟುಂಬ ಸದಸ್ಯರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಹಾಗೂ ಬೆದರಿಕೆಯೊಡ್ಡುತ್ತಿದ್ದಾರೆ ಎಂಬ ಮಾಹಿತಿ ಗೌಪ್ಯವಾಗಿ ಕಾರ್ಯಾಚರಿಸುತ್ತಿರುವ ವಿಶ್ವಸಂಸ್ಥೆಯ ಅಧಿಕಾರಿ ವರ್ಗದವರಿಗೆ ದೊರಕಿದೆ.
ತಾಲಿಬಾನಿಗಳ ಕ್ರೌರ್ಯಕ್ಕೆ ಹಾಗೂ ರಕ್ತಪಿಪಾಸು ವರ್ತನೆಗೆ ಹೆದರಿ ಎಷ್ಟು ಮಂದಿ ಅಪ್ಘನ್ ಸೈನಿಕರು ಹಾಗೂ ಭದ್ರತಾ ಅಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ ಎಂಬ ಸ್ಪಷ್ಟ ಚಿತ್ರಣವಿಲ್ಲ. ಕೆಲವೊಂದಿಷ್ಟು ಅಫ್ಘನ್ ಪೈಲೆಟ್ಗಳು 22 ಯುದ್ಧವಿಮಾನಗಳು ಹಾಗೂ 24 ಹೆಲಿಕಾಪ್ಟರ್ಗಳೊಂದಿಗೆ 600 ಜನರು ಉಜ್ಬೇಕಿಸ್ತಾನಕ್ಕೆ ಬಂದಿಳಿದಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದಷ್ಟು ತಂಡ ಇರಾನ್ ತಲುಪಿರಬಹುದು ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ