ಮಧ್ಯಪ್ರದೇಶದಲ್ಲಿ ಎಸ್ಸಿ-ಎಸ್ಟಿ ಕಾಯ್ದೆ ವಿರುದ್ಧ ಮೇಲ್ವರ್ಗದವರ ಬೃಹತ್ ಪ್ರತಿಭಟನೆಗೆ ಸಜ್ಜು


Updated:September 4, 2018, 10:56 AM IST
ಮಧ್ಯಪ್ರದೇಶದಲ್ಲಿ ಎಸ್ಸಿ-ಎಸ್ಟಿ ಕಾಯ್ದೆ ವಿರುದ್ಧ ಮೇಲ್ವರ್ಗದವರ ಬೃಹತ್ ಪ್ರತಿಭಟನೆಗೆ ಸಜ್ಜು

Updated: September 4, 2018, 10:56 AM IST
- ನ್ಯೂಸ್18 ಕನ್ನಡ

ಗ್ವಾಲಿಯರ್(ಸೆ. 04): ಮೀಸಲಾತಿ ಪರ ಹೋರಾಟದಂತೆ ದೇಶದ ಕೆಲವೆಡೆ ಮೀಸಲಾತಿ ವಿರುದ್ಧವೂ ಹೋರಾಟ ತೀವ್ರಗೊಳ್ಳುತ್ತಿದೆ. ಎಸ್ಸಿ-ಎಸ್ಟಿ ಕಾಯ್ದೆಯ ತಿದ್ದುಪಡಿ ವಿರುದ್ಧ ಮೇಲ್ವರ್ಗ ಸಮುದಾಯಗಳ ಸಂಘಟನೆಗಳಿಂದ ಮಧ್ಯಪ್ರದೇಶದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಲಿದೆ. ಈಗಾಗಲೇ ಹಲವಾರು ಸಂಘಟನೆಗಳು ಈ ಪ್ರತಿಭಟನೆಗೆ ತಮ್ಮ ಜಾತಿಯ ಯುವ ಸಮುದಾಯಗಳನ್ನ ಸೇರಿಸತೊಡಗಿವೆ. ಮಧ್ಯಪ್ರದೇಶದ ಉತ್ತರ ಭಾಗದಲ್ಲಿರುವ ಚಂಬಲ್-ಗ್ವಾಲಿಯರ್ ಪ್ರದೇಶದಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ಹೈಅಲರ್ಟ್ ಘೋಷಿಸಲಾಗಿದೆ.

ಏಪ್ರಿಲ್ ತಿಂಗಳಲ್ಲಿ ಇದೇ ಪ್ರದೇಶದಲ್ಲಿ ದಲಿತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆದಿತ್ತು. ಆಗ ಹಿಂಸಾಚಾರಗಳು ಸಂಭವಿಸಿ 8 ಮಂದಿ ಸಾವನ್ನಪ್ಪಿದ್ದರು. ಹಲವಾರು ಜನರು ಗಾಯಗೊಂಡಿದ್ದರು. ಶುಕ್ರವಾರ ನಡೆಯಲಿರುವ ಮೇಲ್ವರ್ಗದವರ ಪ್ರತಿಭಟನೆ ವೇಳೆಯೂ ಪ್ರತಿಭಟನೆಯಾಗುವ ಸಾಧ್ಯತೆ ಇಲ್ಲದಿಲ್ಲ. ಒಂದೆಡೆ ಮೇಲ್ವರ್ಗದವರ ಪ್ರತಿಭಟನೆ ನಡೆಯುತ್ತಿರುವಂತೆಯೇ ಮತ್ತೊಂದೆಡೆಯೇನಾದರೂ ದಲಿತ ಸಂಘಟನೆಗಳು ಮೀಸಲಾತಿ ಪರವಾಗಿ ಹೋರಾಟಕ್ಕಿಳಿದರೆ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಬಹುದು. ಈ ಹಿನ್ನೆಲೆಯಲ್ಲಿ ಗ್ವಾಲಿಯರ್ ಸುತ್ತಮುತ್ತಲ ಪ್ರದೇಶದಲ್ಲಿ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಸನಾಧ್ಯ ಸಭಾ ಎಂಬ ಸಂಘಟನೆಯ ಯುವ ಘಟಕದ ಮುಖ್ಯಸ್ಥ ಗಗನ್ ತಿವಾರಿ ಅವರು ಶುಕ್ರವಾರದಂದು ಫೂಲ್​ಬಾಗ್ ಮೈದಾನದಲ್ಲಿ 15-20 ಸಾವಿರ ಜನರನ್ನು ಸೇರಿಸುವುದಾಗಿ ತಿಳಿಸಿದ್ದಾರೆ.

ಯಾಕೆ ಪ್ರತಿಭಟನೆ?
ಎಸ್ಸಿ-ಎಸ್ಟಿ ಕಾಯ್ದೆ ವಿಚಾರವು ದೇಶದಲ್ಲಿ ಸೂಕ್ಷ್ಮ ಸ್ಥಿತಿ ನಿರ್ಮಿಸಿದೆ. ಮೂಲ ಎಸ್ಸಿ-ಎಸ್ಟಿ ಕಾಯ್ದೆಗೆ ಸುಪ್ರೀಂಕೋರ್ಟ್ ತಿದ್ದುಪಡಿ ತರಲು ಆದೇಶಿಸಿತ್ತು. ದಲಿತರು ದೂರು ದಾಖಲಿಸಿದರೆ ಆರೋಪಿಗಳನ್ನು ತತ್​ಕ್ಷಣ ಬಂಧಿಸಬೇಕೆಂಬ ನಿಯಮ ಸೇರಿದಂತೆ ಕೆಲ ಅಂಶಗಳನ್ನ ಕಾಯ್ದೆಯಿಂದ ಕೈಬಿಡುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದು ದೇಶಾದ್ಯಂತ ಪರಿಶಿಷ್ಟ ಜಾತಿ ಮತ್ತು ಸಮುದಾಯಗಳನ್ನ ಕೆರಳಿಸಿ ಹಲವು ಕಡೆ ಬೃಹತ್ ಪ್ರತಿಭಟನೆ ಮತ್ತು ಹಿಂಸಾಚಾರಗಳಿಗೆ ಕಾರಣವಾಯಿತು. ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಮೂಲ ಎಸ್ಸಿ-ಎಸ್ಟಿ ಕಾಯ್ದೆಯನ್ನೇ ಇರಿಸಿಕೊಳ್ಳಲು ನಿರ್ಧರಿಸಿ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದಿದೆ. ಮೇಲ್ವರ್ಗದವರ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಇರುತ್ತದೆಂಬುದು ಮೇಲ್ವರ್ಗದವರ ಆಕ್ಷೇಪವಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತಿಳಿಸಿರುವ ರೀತಿಯಲ್ಲಿ ಎಸ್ಸಿ-ಎಸ್ಟಿ ಕಾಯ್ದೆ ಇರಬೇಕೆಂಬುದು ಅವರ ಆಗ್ರಹವಾಗಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ