Up Elections: ನಾಳೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲಿರುವ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ ವಿಶಿಷ್ಟವಾದ ಘೋಷಣೆ ಮಾಡಲು ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ, ಜ. 20: ಮುಂದಿನ‌ ತಿಂಗಳು ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Election) ಕಾಂಗ್ರೆಸ್ ಪಕ್ಷ ಶೇಕಡಾ ‌40ರಷ್ಟು ಟಿಕೆಟ್ ಗಳನ್ನು ಮಹಿಳೆಯರಿಗೆ ನೀಡಲು ನಿರ್ಧರಿಸಿದೆ.‌ ಅಲ್ಲದೆ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ (Manifesto) ವಿಶಿಷ್ಟವಾದ ಘೋಷಣೆ ಮಾಡಲು ತಯಾರಿಯನ್ನೂ ನಡೆಸಿದೆ ಎಂದು ತಿಳಿದುಬಂದಿದೆ. ಮಹಿಳೆಯರಿಗೆ ಪ್ರತ್ಯೇಕವಾದ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಹೀಗೆ ಉತ್ತರ ಪ್ರದೇಶ ಚುನಾವಣೆಯಲ್ಲಿ 'ಮಹಿಳಾ ಅಸ್ತ್ರ' ಪ್ರಯೋಗಕ್ಕೆ ಮುಂದಾಗಿರುವ ಕಾಂಗ್ರೆಸ್ (Congress) ಪಕ್ಷದ ಪ್ರಣಾಳಿಕೆ ಯಾವ ರೀತಿ ಭಿನ್ನವಾಗಿರುತ್ತದೆ? ಏನೆಲ್ಲಾ ವಿಶೇಷ ಅಂಶಗಳು ಇರುತ್ತವೆ ಎಂದು ನಾಳೆ ಗೊತ್ತಾಗಲಿದೆ.

ಪ್ರಣಾಳಿಕೆ ಬಿಡುಗಡೆ ಮಾಡುವ ಪ್ರಿಯಾಂಕಾ ಗಾಂಧಿ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಪ್ರಿಯಾಂಕಾ ಗಾಂಧಿ ವಾದ್ರಾ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ (ಜನವರಿ 21ರಂದು) ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ ಮಹಿಳೆಯರಿಗೆ ಪ್ರತ್ಯೇಕವಾದ ಪ್ರಣಾಳಿಕೆ ಬಿಡುಗಡೆ ಮಾಡಬಹುದು ಎಂದು ಕೂಡ ಹೇಳಲಾಗುತ್ತಿದೆ.

ಯುಪಿಯಲ್ಲೇ ಪ್ರಿಯಾಂಕಾ ಗಾಂಧಿ ಠಿಕಾಣಿ
ಇನ್ನೊಂದೆಡೆ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ‌ ಅವರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಉತ್ತರ ಪ್ರದೇಶದಲ್ಲೇ ಬೀಡು ಬಿಟ್ಟಿದ್ದಾರೆ. ಇತ್ತೀಚೆಗೆ ಲಕ್ನೋದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಅವರು,  'ನಾವು ಮಹಿಳಾ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ. ಮಹಿಳೆಯರಿಗೆ ಅಧಿಕಾರ ನೀಡಲು ಬಯಸುತ್ತೇವೆ. ಮಹಿಳೆಯರ ಅಭಿಪ್ರಾಯದ ಬಗ್ಗೆ ಇರುವ ಸಂಕೋಲೆಗಳನ್ನು ಮುರಿಯುವ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ. ಈ ಮೂಲಕ ರಾಜಕೀಯ ಹಾಗೂ ಸಮಾಜದಲ್ಲಿ ಮಹಿಳೆಯರ ಪೂರ್ಣ ಪ್ರಮಾಣದ ಭಾಗವಹಿಸುವಿಕೆ ಬಗ್ಗೆ ಇರುವ ಶೋಷಣೆಯನ್ನು ಕೊನೆಗೊಳಿಸಬಹುದು' ಎಂದು ಹೇಳಿದ್ದರು‌.

ಇದನ್ನು ಓದಿ: ಅಪ್ನಾ ದಳ, ನಿಶಾದ್ ಪಾರ್ಟಿ ಜೊತೆಗೆ ಮೈತ್ರಿ ಘೋಷಿಸಿದ ಬಿಜೆಪಿ

ಶೇ. 40ರಷ್ಟು ಮಹಿಳಾ ಪ್ರಾತಿನಿಧ್ಯ
ಕಾಂಗ್ರೆಸ್ ಪಕ್ಷ ದೇಶಕ್ಕೆ ಮೊದಲ ಮಹಿಳಾ ಪ್ರಧಾನ ಮಂತ್ರಿಯನ್ನು (ಇಂದಿರಾ ಗಾಂಧಿ) ನೀಡಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಸುಚೇತಾ ಕೃಪಲಾನಿ ಮೊದಲ ಮಹಿಳಾ ಮುಖ್ಯಮಂತ್ರಿ ಆಗಿದ್ದರು. 'ಮುಂದುವರೆದವು' ಎನಿಸಿಕೊಂಡ ದೇಶಗಳು‌ ಕೂಡ ಮಹಿಳೆಯರಿಗೆ ಕಡಿಮೆ ಪ್ರಾತಿನಿಧ್ಯ ನೀಡುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ದೇಶಕ್ಕೆ ಮೊದಲ ಮಹಿಳಾ ಪ್ರಧಾನಿಯನ್ನು ನೀಡಿತ್ತು ಎಂದು ಹೇಳಿದ ಪ್ರಿಯಾಂಕಾ ಗಾಂಧಿ, ಈಗ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಶೇಕಡಾ 40ರಷ್ಟು ಪ್ರಾತಿನಿಧ್ಯವನ್ನು ನೀಡುತ್ತಿದೆ. ಮಹಿಳೆಯರ ಸಬಲೀಕರಣವು ಕಾಗದಕ್ಕೆ ಸೀಮಿತವಾಗಿರಬಾರದು. ಯಾವಾಗ ಮಹಿಳೆಯರು ನಿಜವಾಗಿಯೂ ರಾಜಕೀಯದ ಭಾಗವಾಗುತ್ತಾರೋ ಆಗ ಮಹಿಳಾ ಪರ ಕಾರ್ಯಕ್ರಮಗಳನ್ನು ವಾಸ್ತವವಾಗಿ ಕೂಡ ಜಾರಿಗೊಳಿಸಬಹುದಾದ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಹೇಳಿದ್ದರು.

ಇದನ್ನು ಓದಿ: ಸಿಎಂ ಯೋಗಿ ಆದಿತ್ಯನಾಥ್​ ವಿರುದ್ಧ ಭೀಮ್​ ಆರ್ಮಿ ಆಜಾದ್​ ಕಣಕ್ಕೆ

ಇತರೆ ಪಕ್ಷಗಳಿಗೆ ಸವಾಲಾಗಿರುವ ಕಾಂಗ್ರೆಸ್
ಹೀಗೆ ಮಹಿಳಾ ಅಸ್ತ್ರ ಪ್ರಯೋಗದ ಮೂಲಕ ಇಲ್ಲಿನ ಇತರೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಸಮಾಜವಾದಿ ಪಕ್ಷ ಹಾಗೂ ಬಹುಜನ‌ ಸಮಾಜ ಪಕ್ಷಗಳಿಗೆ ಕಾಂಗ್ರೆಸ್ ಹೊಸ ಸವಾಲನ್ನು ಒಡ್ಡಿದೆ. ಇದಲ್ಲದೆ ಈ ಎಲ್ಲಾ ಪಕ್ಷಗಳಿಗೂ ಮೊದಲೇ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕೂ ಸಿದ್ದತೆ ನಡೆಸಿತ್ತು. ಜೊತೆಗೆ ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಕೂಡ ಘೋಷಿಸಿತ್ತು.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಿಂದ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ.‌ ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.
Published by:Seema R
First published: