ಲಕ್ನೋ(ಜ,04): ಜಾತಿಗೆ ಸಂಬಂಧಿಸದಂತೆ ಪ್ರತಿನಿತ್ಯ ಕೊಲೆ, ದಾಳಿ, ಹಲ್ಲೆಗೆ ದೇಶ ಸಾಕ್ಷಿಯಾಗುತ್ತಿದೆ. ಇತ್ತೀಚಿನ ಒಂದು ಆಘಾತಕಾರಿ ಘಟನೆಯಲ್ಲಿ ಬೇರೆ ಸಮುದಾಯದ ಜನರೊಂದಿಗೆ ಮಾತನಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಕೊಲೆಯಾಗಿದ್ದಾನೆ. ಹೌದು ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareilly) ಇಂತಹದೊಂದು ಹೇಯ ಕೃತ್ಯ ನಡೆದಿದ್ದು, ಮುಸ್ಲಿಂ ವ್ಯಕ್ತಿಯನ್ನು ಅವರ ಸಮುದಾಯದವರೇ ಹತ್ಯೆ ಮಾಡಿದ್ದಾರೆ.
ಮಹಮ್ಮದ್ ಸರ್ತಾಜ್ ಅವರ ಮಗ ಶಾರುಖ್ ಶೇಖ್ ಇತರ ತನ್ನ ಬೇರೆ ಸಮುದಾಯದ ಸ್ನೇಹಿತರ ಜೊತೆ ಸ್ನೇಹ ಹೊಂದಿದ್ದ. ಆಗಾಗ ಗೆಳೆಯನ ಮನೆಗೆ ಭೇಟಿ ನೀಡುವುದು, ಅಲ್ಲೇ ರಸ್ತೆಯಲ್ಲಿ ಮಾತಾನಾಡುವುದನ್ನು ಮಾಡುತ್ತಿದ್ದ. ಈ ವೇಳೆ ಇದನ್ನು ಸಹಿಸಲಾಗದ ಶಾರುಖ್ ಶೇಖ್ ಸಮುದಾಯದ ಕೆಲವರು ಇದನ್ನು ವಿರೋಧಿಸುತ್ತಿದ್ದರು.
ಇದನ್ನೂ ಓದಿ: Anekal: ಪೊಲೀಸ್ ಪೇದೆ ಮೇಲೆ ಗಾಂಜಾ ಮತ್ತಿನಲ್ಲಿದ್ದ ಗ್ಯಾಂಗ್ನಿಂದ ಮಾರಣಾಂತಿಕ ಹಲ್ಲೆ
ಮೊಹಮ್ಮದ್ ಸರ್ತಾಜ್ ಸಾವು
ಮೊನ್ನೆ ಕಸೂತಿ ಕೆಲಸಗಾರನಾದ ಶಾರುಖ್ ಶೇಖ್ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಆತನ ಮೇಲೆ ಅದೇ ಕೆಲ ಮುಸ್ಲಿಂ ಗುಂಪು ಹಲ್ಲೆ ನಡೆಸಿ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಶಾರುಖ್ನ ತಂದೆ ಮೊಹಮ್ಮದ್ ಸರ್ತಾಜ್ ತನ್ನ ಮಗನನ್ನು ರಕ್ಷಿಸಲು ಪ್ರಯತ್ನಿಸಿದಾಗ ಆತನ ಮೇಲೂ ಯುವಕರ ಗುಂಪು ಭೀಕರವಾಗಿ ಹಲ್ಲೆ ನಡೆಸಿದೆ.
ಥಳಿತದಿಂದಾಗಿ ಗಾಯಗೊಂಡ ಮೊಹಮ್ಮದ್ ಸರ್ತಾಜ್ಗೆ ಪ್ರಜ್ಞೆ ಸಹ ಇರಲಿಲ್ಲ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಶಾರುಖ್ ತಂದೆ ಮೊಹಮ್ಮದ್ ಸರ್ತಾಜ್ ಸಾವನ್ನಪ್ಪಿದ್ದಾರೆ.
ಮುಸ್ಲಿಂ ಯುವಕರ ಗುಂಪಿನಿಂದಲೇ ನಡೆಯಿತು ಹತ್ಯೆ
ಶಾರುಖ್ ತಮ್ಮ ಇಬ್ಬರು ಸ್ನೇಹಿತರೊಂದಿಗೆ ತಮ್ಮ ಮನೆಯ ಹೊರಗೆ ಮಾತನಾಡುತ್ತಿದ್ದಾಗ ಅವರ ನೆರೆಹೊರೆಯವರಾದ ರಶೀದ್ ಖಾನ್, ಅಶು ಖಾನ್, ಫಯ್ಯಾಮ್ ಮತ್ತು ಫಾಜಿಲ್ ಶಾರುಖ್ ಅವರನ್ನು ನಿಂದಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಶಾರುಖ್ ಜೊತೆ ಇದ್ದ ಕೆಲ ಸ್ನೇಹಿತರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಆದರೆ, ಶಾರುಖ್ ಆ ಯುವಕರ ಕೈಯಿಂದ ಥಳಿತಕ್ಕೆ ಒಳಗಾದ. ಇದೇ ವೇಳೆ ಹಲ್ಲೆಯನ್ನು ತಡೆಯಲು ಬಂದ ಶಾರುಖ್ ತಂದೆಯನ್ನೂ ಹಾಕಿ ಸ್ಟಿಕ್ಗಳಿಂದ ಮುಸ್ಲಿಂ ಯುವಕರ ಗುಂಪು ಥಳಿಸಿದೆ.
ಘಟನೆ ಬಗ್ಗೆ ವಿವರಿಸಿದ ಶಾರುಖ್ "ನಾನು ನನ್ನ ಮನೆಯ ಹೊರಗೆ ಇಬ್ಬರು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ನನ್ನ ನೆರೆಹೊರೆಯವರಾದ ರಶೀದ್ ಖಾನ್ ಮತ್ತು ಇತರ ಮೂವರು ನಮ್ಮನ್ನು ಕೆಟ್ಟ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದರು.
ಇದನ್ನೂ ಓದಿ;Instagram Love: ಹೈದರಾಬಾದ್ ಮೂಲದ ಮುಸ್ಲಿಂ ಯುವಕನನ್ನ ಮದ್ವೆಯಾದ ಕೊಪ್ಪಳದ ಹಿಂದೂ ಯುವತಿ
ಈ ವೇಳೆ ನನ್ನನ್ನು ರಕ್ಷಿಸಲು ಬಂದ ನಮ್ಮ ತಂದೆ ಮೇಲೆ ನಿರ್ದಯವಾಗಿ ಹಾಕಿ ಸ್ಟಿಕ್ಗಳಿಂದ ಹಲ್ಲೆ ಮಾಡಿ ಅವರನ್ನು ಹತ್ಯೆ ಮಾಡಿದ್ದಾರೆ" ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ನಾಲ್ವರ ವಿರುದ್ಧ ಕೇಸ್ ದಾಖಲು
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಾಲ್ವರ ವಿರುದ್ಧ ಸೆಕ್ಷನ್ 304 (ಅಪರಾಧ ನರಹತ್ಯೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ, ಸಾಕ್ಷಿಗಳ ಹೇಳಿಕೆಗಳನ್ನು ಸಹ ದಾಖಲಿಸಿದ್ದೇವೆ, ಇನ್ನೂ ಯಾವುದೇ ಬಂಧನವಾಗಿಲ್ಲ, ಶವಪರೀಕ್ಷೆ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬರದರಿ ಪೊಲೀಸ್ ಠಾಣೆ ಎಸ್ಎಚ್ಒ ಅಭಿಷೇಕ್ ಕುಮಾರ್ ತಿಳಿಸಿದ್ದಾರೆ.
ಕಠಿಣ ಕ್ರಮಕ್ಕೆ ಕುಟುಂಬಸ್ಥರ ಆಗ್ರಹ
ಘಟನೆ ಬಗ್ಗೆ ವಿವರಿಸಿದ ಮೃತನ ಮತ್ತೋರ್ವ ಪುತ್ರ ದಾವೂದ್ "ನಮ್ಮ ಮನೆಯವರು ಯಾರೂ ಇತರೆ ಸಮುದಾಯದ ಸ್ನೇಹಿತರ ಭೇಟಿಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿರಲಿಲ್ಲ.
ಆದರೆ ನಮ್ಮ ನೆರೆಹೊರೆಯವರಾದ ರಶೀದ್ ಈ ಬಗ್ಗೆ ನಮಗೆ ಯಾವಾಗಲೂ ಎಚ್ಚರಿಕೆ ನೀಡುತ್ತಿದ್ದರು. ನಾವು ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇವೆ" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ