ಮದುವೆಯಾಗಿ ಕೆಲವೇ ದಿನಗಳಲ್ಲಿ ಹೆಂಡತಿ ಗಂಡನನ್ನು ಹಾಗು ಗಂಡ ಹೆಂಡತಿಯನ್ನು ಬಿಟ್ಟು ಹೋಗಿರುವ ಹಾಗು ಮದುವೆ ಮಂಟಪದಲ್ಲಿ ವಧು ವರ ಓಡಿ ಹೋಗಿರುವ ಸುದ್ದಿಯನ್ನು ನಾವೆಲ್ಲಾ ಕೇಳುವುದು ಇತ್ತೀಚೆಗೆ ಸಾಮಾನ್ಯ ವಿಷಯವಾಗಿದೆ. ಆದರೆ ಅದಕ್ಕಿಂತ ವಿಭಿನ್ನ ಘಟನೆಯೊಂದು ಉತ್ತರ ಪ್ರದೇಶದ ಬಿಸಾವ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿ 22 ವರ್ಷದ ಯುವಕನ ಹೆಂಡತಿಯು ಸಾಂಸಾರಿಕ ಜಗಳದಿಂದ ಬೇಸತ್ತು ಆ ಯುವಕನಿಂದ ದೂರವಾಗಿದ್ದಳು. ಕೆಲವು ದಿನಗಳ ನಂತರ ಆ ವ್ಯಕ್ತಿಯ ತಂದೆಯನ್ನು ಪ್ರೀತಿಸಿ ಮದುವೆಯಾಗಿ ಬೇರೆ ಪಟ್ಟಣದಲ್ಲಿ ಸಂಸಾರ ನಡೆಸುತ್ತಿರುವ ವಿಷಯವು ಮಾಹಿತಿ ಕಾಯಿದೆ ಹಕ್ಕು (ಆರ್ಟಿಐ) ಮುಖಾಂತರ ತಿಳಿದುಬಂದಿದ್ದು, ಆ ವಿಷಯ ತಿಳಿದ ಯುವಕ ಬೆಚ್ಚಿ ಬಿದ್ದಿದ್ದಾನೆ.
2016 ರಲ್ಲಿ ಈ ಯುವಕನು ಅಪ್ರಾಪ್ತನಾಗಿದ್ದು ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ನಂತರ ಮದುವೆಯಾದ ಆರು ತಿಂಗಳಲ್ಲಿ ದಂಪತಿಯಲ್ಲಿ ಜಗಳಗಳು ಉಂಟಾಗಿ ಇಬ್ಬರು ಬೇರೆ ಬೇರೆ ಆಗಿದ್ದರು. ಅವರಿಗೆ 2 ವರ್ಷದ ಮಗುವಿದ್ದು ಯುವಕನು ತನ್ನ ಹೆಂಡತಿಯೊಡನೆ ಮತ್ತೆ ಒಂದಾಗಲು ಬಯಸಿದಾಗ ಹೆಂಡತಿಯು ವಿಚ್ಚೇದನ ಕೋರಿದ್ದಳು. ಈ ಸಂದರ್ಭವನ್ನು ಅನುಮಾನಿಸಿದ ಯುವಕ ತನ್ನ ಮನೆ ಬಿಟ್ಟು ಬೇರೆಡೆಗೆ ಹೋಗಿ ನೆಲೆಸಿದ್ದ ತನ್ನ 48 ವರ್ಷದ ತಂದೆಯ ಬಗ್ಗೆ ವಿಷಯ ತಿಳಿದುಕೊಳ್ಳಲು ಆರ್ಟಿಐಗೆ ಅರ್ಜಿ ಸಲ್ಲಿಸಿದ್ದನು. ಆಗ ತನ್ನ ಹೆಂಡತಿಯು ತನ್ನ 48 ವರ್ಷದ ತಂದೆಯನ್ನು ಪ್ರೀತಿಸಿ ಮದುವೆಯಾಗಿ ಇಬ್ಬರೂ ಸಂಬಲ್ ಪಟ್ಟಣದಲ್ಲಿ ನೆಲೆಸಿ ಸಂಸಾರ ನಡೆಸುತ್ತಿರುವುದಾಗಿ ತಿಳಿದು ಯುವಕನು ಬೆಚ್ಚಿ ಬಿದ್ದಿದ್ದಾನೆ.
ಇದನ್ನೂ ಓದಿ: ಆಮಿರ್ ಖಾನ್ಗೆ ತಿನ್ನುವ ಖಾಯಿಲೆ ಇದೆ, ಆತ ಸ್ನಾನ ಮಾಡಲ್ಲ: ಕಿರಣ್ ರಾವ್ !
ವಿಷಯ ತಿಳಿದು ಯುವಕ ತನ್ನ ಹೆಂಡತಿ ಮತ್ತು ತಂದೆಯ ಬಗ್ಗೆ ಬಿಸಾವ್ಳಿ ಗ್ರಾಮದ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದ್ದಾನೆ. ತನ್ನ ತಂದೆಯು ಸ್ಯಾನಿಟೇಷನ್ ಉದ್ಯೋಗಿಯಾಗಿದ್ದು ಮನೆಯಿಂದ ಓಡಿ ಹೋಗಿ ಬೇರೆಡೆಗೆ ನೆಲೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದರ ಬಗ್ಗೆ ಇನ್ನೂ ತನಿಖೆ ನಡೆದಿದ್ದು ಯುವಕನು ಮದುವೆಯ ಸಮಯದಲ್ಲಿ ಅಪ್ರಾಪ್ತನಾಗಿದ್ದ ಕಾರಣ ಅವನ ಬಳಿ ತನ್ನ ಮದುವೆಯಾದ ಬಗ್ಗೆ ಯಾವುದೇ ಸಾಕ್ಷಿ ಆಧಾರಗಳಿಲ್ಲ. ಬೇರ್ಪಟ್ಟ ಹೆಂಡತಿ ಸಹ ತನ್ನ ಎರಡನೆಯ ಮದುವೆಯ ಬಗ್ಗೆ ನನಗೆ ತುಂಬಾ ಸಂತೋಷವಿದೆ ಎಂದು ಹೇಳಿಕೊಂಡಿದ್ದಾರೆ. ಯುವಕನ ದೂರನ್ನು ಪೊಲೀಸರು ವೈವಾಹಿಕ ಸಮಸ್ಯೆ ಅಡಿಯಲ್ಲಿ ದಾಖಲಿಸಿದ್ದು ತನಿಖೆ ಮುಂದುವರೆಸಿದ್ದಾರೆ. ಆದರೆ ಯುವಕನ ಮದುವೆಯು ಅಪ್ರಾಪ್ತ ವಯಸ್ಸಿನಲ್ಲಿ ಆದ್ದರಿಂದ ಯಾವುದೇ ಸೂಕ್ತ ದಾಖಲೆಗಳಿಲ್ಲ ಎಂದು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರುಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ