ಬಾಲಕಿಯ ಹೆಸರೇ ‘5ನೇ ಮಗು’.. ಶಾಲಾ ದಾಖಲಾತಿ ವೇಳೆ ಪರದಾಟ.. ಕೊನೆಗೆ CM ಹೇಳಬೇಕಾಯ್ತು!

'Madhu ka Panchwa Baccha': ಹೆಸರು ಆರತಿ. ಆದರೆ ಆಧಾರ್ ಕಾಡ್‍ನಲ್ಲಿ ಆರತಿ ಎಂಬ ಹೆಸರು ಇರಬೇಕಾದ ಜಾಗದಲ್ಲಿ, “ಬೇಬಿ ಫೈವ್ ಆಫ್ ಮಧು” (ಮಧುವಿನ ಐದನೇ ಮಗು) ಎಂದು ಬರೆಯಲಾಗಿತ್ತು. ಈ ಕಾರಣದಿಂದಾಗಿ, ಶಾಲೆಯವರು ಆ ಬಾಲಕಿಯನ್ನು ಶಾಲೆಗೆ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಮ್ಮ ಆಧಾರ್ ಕಾರ್ಡ್‌ನಲ್ಲಿ (Aadhaar Card) ನಮ್ಮದೇ ಹೆಸರಿರುತ್ತದೆ. ಕೆಲವೊಮ್ಮೆ ಹೆಸರಿನ ಅಕ್ಷರ ಅಥವಾ ವಿಳಾಸದಲ್ಲಿ ಸಣ್ಣಪುಟ್ಟ ತಪ್ಪುಗಳು(Mistakes)  ಆದಾಗ, ಅದನ್ನು ಸರಿಪಡಿಸುವ ಅವಕಾಶವೂ ಉಂಟು ಅನ್ನಿ. ಆದರೆ ಆಧಾರ್ ಕಾರ್ಡ್‍ನಲ್ಲಿ ಹೆಸರಿನ ಜಾಗದಲ್ಲಿ, ಹಾಸ್ಯಾಸ್ಪದ ವಾಕ್ಯವನ್ನು ಮುದ್ರಿಸಿದರೆ ಏನಾಗಬಹುದು..? ಉತ್ತರ ಪ್ರದೇಶದಲ್ಲಿ (Uttar Pradesh) ಅಂತದ್ದೊಂದು ಘಟನೆ ಬೆಳಕಿಗೆ ಬಂದಿದೆ. ಐದು ವರ್ಷದ ಪುಟ್ಟ ಹುಡುಗಿಯೊಬ್ಬಳ ಆಧಾರ್ ಕಾರ್ಡ್‍ನಲ್ಲಿ ಆಕೆಯ ಹೆಸರಿನ ಬದಲಿಗೆ ಇನ್ನೇನೋ ಮುದ್ರಣಗೊಂಡು, ಆ ಮುಗ್ಧ ಬಾಲಕಿಯ ಶಿಕ್ಷಣದ ಕನಸಿಗೆ ಭಂಗ ಉಂಟಾಗುವ ಸ್ಥಿತಿ ಬಂದಿತ್ತು. ಯಾವುದೇ ಕೆಲಸ ಮಾಡಬೇಕಿದ್ದರೂ, ಆಧಾರ್ ಕಾರ್ಡ್ ಅಗತ್ಯವಿರುವ ಈ ದಿನಗಳಲ್ಲಿ, ಆಧಾರ್ ಕಾರ್ಡ್ ಮಾಡುವ ಸಿಬ್ಬಂದಿ ತಮ್ಮ ಕೆಲಸದಲ್ಲಿ ಬೇಜವಾಬ್ದಾರಿತನ ತೋರಿದರೆ ಯಾವ ರೀತಿಯ ಅವಾಂತರ ಆಗಬಹುದು ಎಂಬುದಕ್ಕೆ ಈ ಘಟನೆ ಸರಿಯಾದ ಉದಾಹರಣೆ ಎನ್ನಬಹುದು.

  ಇದನ್ನೂ ಓದಿ: Shocking: ಪೊಲೀಸರ ಮೇಲೆಯೇ ಕಾರು ಚಲಾಯಿಸಿದ ಆಪ್ ಮುಖಂಡ.. ಬಾನೆಟ್ ಮೇಲೆ ಪೇದೆ ಪರದಾಟ

  ಮುಖ್ಯಮಂತ್ರಿಯೇ ಹೇಳಬೇಕಾಯಿತು..! 

  ಅದೇನೇ ಇದ್ದರೂ, ಕೊನೆಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸೂಚನೆಯಿಂದ ಈ ಪ್ರಕರಣ ಸುಖಾಂತ್ಯಗೊಂಡಿದೆ. ಅಷ್ಟಕ್ಕೂ, ಆ ಬಾಲಕಿಯ ಆಧಾರ್ ಕಾರ್ಡ್‍ನಲ್ಲಿ ಅಂತದ್ದೇನಿತ್ತು ಅಂತೀರಾ..? ಅವಳ ಹೆಸರು ಆರತಿ. ಆದರೆ ಆಧಾರ್ ಕಾಡ್‍ನಲ್ಲಿ ಆರತಿ ಎಂಬ ಹೆಸರು ಇರಬೇಕಾದ ಜಾಗದಲ್ಲಿ, “ಬೇಬಿ ಫೈವ್ ಆಫ್ ಮಧು” (ಮಧುವಿನ ಐದನೇ ಮಗು) ಎಂದು ಬರೆಯಲಾಗಿತ್ತು. ಈ ಕಾರಣದಿಂದಾಗಿ, ಶಾಲೆಯವರು ಆ ಬಾಲಕಿಯನ್ನು ಶಾಲೆಗೆ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು. ಆಧಾರ್ ಕಾರ್ಡ್‍ನಲ್ಲಿ “ಬೇಬಿ ಫೈವ್ ಆಫ್ ಮಧು” ಎಂದಿರುವುದನ್ನು ಕಂಡು ಶಾಲೆಯ ಸಿಬ್ಬಂದಿ ಮಾತ್ರವಲ್ಲ, ಬದೌನ್‌ ಜಿಲ್ಲೆಯ ಮ್ಯಾಜಿಸ್ಟ್ರೇಟ್‍ಗೆ ಕೂಡ ಶಾಕ್ ಆಗಿತ್ತಂತೆ.

  ಕೊನೆಗೂ ಅಡ್ಮಿಷನ್​​ ಆಯ್ತು..! 

  ಈಗ ಕೊನೆಗೂ ಆರತಿಗೆ ಶಾಲೆಗೆ ದಾಖಲಾತಿ ದೊರಕಿದೆ. ಉತ್ತರ ಪ್ರದೇಶದ ರಾಜ್ಯ ಶಿಕ್ಷಣ ಇಲಾಖೆ ಮತ್ತು ಶಾಲೆಯ ಪ್ರಾಂಶುಪಾಲರು ಸೀಮಾ ರಾಣಿ ಕೂಡ ಇದನ್ನು ದೃಢಪಡಿಸಿದ್ದಾರೆ. “ತನ್ನ ಮಗಳ ದಾಖಲಾತಿಗೆ ಏಪ್ರಿಲ್ 2 ರಂದು ಆ ಮಹಿಳೆ ಬಂದಿದ್ದರು. ನಾವು ಆಕೆಗೆ ಆಧಾರ್ ಕಾರ್ಡ್ ಅನ್ನು ಸರಿಪಡಿಸಿಕೊಳ್ಳುವಂತೆ ಹೇಳಿದ್ದೆವು. ಈಗ ಆಕೆಯನ್ನು ಶಾಲೆಗೆ ದಾಖಲಿಸಿಕೊಳ್ಳಲಾಗಿದೆ” ಎಂದು ಶಾಲೆಯ ಪ್ರಾಂಶುಪಾಲೆ ಸೀಮಾ ರಾಣಿ ತಿಳಿಸಿದ್ದಾರೆ.

  ಇದನ್ನೂ ಓದಿ: Sanath Jayasuriya: ಭಾರತವನ್ನು ‘ದೊಡ್ಡಣ್ಣ’ ಎಂದು ಕರೆದು ಥ್ಯಾಂಕ್ಸ್ ಹೇಳಿದ ಸನತ್ ಜಯಸೂರ್ಯ.. ಕಾರಣವೇನು?

  “ನಾನು ಮಗಳನ್ನು ದಾಖಲು ಮಾಡಿಸಲು ಶಾಲೆಗೆ ಹೋಗಿದ್ದೆ, ಆದರೆ ಶಿಕ್ಷಕಿ, ಅವಳ ಆಧಾರ್ ಕಾರ್ಡ್‍ನಲ್ಲಿದ್ದ “ಮಧುವಿನ ಐದನೇ ಮಗಳು” ಎಂಬ ಹೆಸರನ್ನು ಹೇಳಿ ಅಣಕಿಸಿದರು ಮತ್ತು ಅವಳಿಗೆ ದಾಖಲಾತಿ ನೀಡಲು ನಿರಾಕರಿಸಿದರು” ಎಂದು ಮಗುವಿನ ತಾಯಿ ಮಧು ಹೇಳಿದ್ದಾರೆ. “ಮಧುವಿನ ಐದನೇ ಮಗಳು” ಪ್ರಕರಣ ವೈರಲ್ ಆದ ಬಳಿಕ, ಅದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗಮನಕ್ಕೆ ಬಂತು. ಅವರ ಆದೇಶದ ಮೇರೆಗೆ ಬಾಲಕಿ ಆರತಿಗೆ ಶಾಲೆಯಲ್ಲಿ ದಾಖಲಾತಿ ನೀಡಲಾಯಿತು.

  ಆಧಾರ ಕಾರ್ಡ್​​ನಲ್ಲಿ ತಪ್ಪಾಗಿ ಮುದ್ರಣ  

  ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವ ಪ್ರಕಾರ, ಬಿಲ್ಸಿ ತೆಹಸಿಲ್‍ ಅಥವಾ ತಾಲೂಕಿನ ರಾಯ್‍ಪುರ್ ಗ್ರಾಮದ ನಿವಾಸಿಯಾಗಿರುವ ಆರತಿಯ ತಂದೆ ದಿನೇಶ್, ಈ ಮೊದಲು ತನ್ನ ಮಗಳನ್ನು ಪ್ರಾಥಮಿಕ ಶಾಲೆಗೆ ದಾಖಲಾತಿ ಮಾಡಿಸಲು ಹೋಗಿದ್ದರು. ಅಲ್ಲಿನ ಶಿಕ್ಷಕಿ ಏಕ್ತಾ ವರ್ಷ್ನೇ ಆ ಬಾಲಕಿಯನ್ನು ಶಾಲೆಗೆ ದಾಖಲು ಮಾಡಿಕೊಳ್ಳಲು ನಿರಾಕರಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಬಾಲಕಿಯ ಆಧಾರ್ ಕಾರ್ಡ್‍ನಲ್ಲಿ ತಪ್ಪಾಗಿ ಮುದ್ರಿತವಾಗಿರುವ ಹೆಸರನ್ನು ಸರಿ ಮಾಡಿಸಿಕೊಂಡು ಬರುವಂತೆ ಆ ಶಿಕ್ಷಕಿ ದಿನೇಶ್‍ಗೆ ಸೂಚಿಸಿದ್ದರು.

  “ಆಧಾರ್ ಕಾರ್ಡ್‍ಗಳನ್ನು ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ಸಿದ್ಧಪಡಿಸಲಾಗುತ್ತದೆ. ಒಟ್ಟಾರೆ ನಿರ್ಲಕ್ಷ್ಯದಿಂದ ಈ ತಪ್ಪು ಸಂಭವಿಸಿದೆ. ನಾವು ಬ್ಯಾಂಕು ಮತ್ತು ಪೋಸ್ಟ್ ಆಫೀಸ್‍ಗಳಿಗೆ ಎಚ್ಚರಿಕೆ ನೀಡುತ್ತೇವೆ ಮತ್ತು ಇಂತಹ ನಿರ್ಲಕ್ಷ್ಯಗಳಲ್ಲಿ ತೊಡಗಿರುವ ಸಿಬ್ಬಂದಿಯ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು” ಎಂದು ಬದೌನ್‌ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಾ ರಂಜನ್ ಹೇಳಿದ್ದಾರೆ.
  Published by:Kavya V
  First published: