UP Elections: ಜನವರಿ 31ಕ್ಕೆ ವರ್ಚ್ಯುಯಲ್ ರ್‍ಯಾಲಿ ಉದ್ದೇಶಿಸಿ‌ ಪ್ರಧಾನಿ ಮೋದಿ ಭಾಷಣ

ಈಗ ಪ್ರಧಾನಿ ಮೋದಿ‌ ಚುನಾವಣಾ ದಿನಾಂಕ ಘೋಷಣೆ ಆದ ಮೇಲೆ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
ನವದೆಹಲಿ (ಜ. 29): ಕೊರೋನಾ (Corona) ಮತ್ತು ಓಮೈಕ್ರಾನ್ (Omicron) ಹಿನ್ನೆಲೆ, ಐದು ರಾಜ್ಯಗಳ ಚುನಾವಣೆ ಪ್ರಚಾರಕ್ಕೆಂದು ಬೃಹತ್ ಸಭೆ, ಸಮಾರಂಭ ಹಾಗೂ ರ್‍ಯಾಲಿಗಳನ್ನು ಮಾಡುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ (Central Election Commission) ನಿರ್ಬಂಧ ವಿಧಿಸಿದೆ. ಹೀಗಾಗಿ ಎಲ್ಲಾ ಪಕ್ಷಗಳು ಈಗ ವರ್ಚ್ಯುಯಲ್ ರ್‍ಯಾಲಿ ಹಾಗೂ ಡಿಜಿಟಲ್ ಸಭೆಗಳ ಮೊರೆಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಜನವರಿ 31ರಂದು ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಉತ್ತರ ಪ್ರದೇಶದ ಚುನಾವಣೆಯ ವರ್ಚ್ಯುಯಲ್ ರ್‍ಯಾಲಿ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಡ್ಯಾಮೇಜ್ ಕಂಟ್ರೋಲ್ ಗೆ ಮೋದಿ ಮೂಲಕ ಪ್ರಯತ್ನ

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು ಮೊದಲ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗ ಪ್ರಧಾನಿ ಮೋದಿ‌ ಚುನಾವಣಾ ದಿನಾಂಕ ಘೋಷಣೆ ಆದ ಮೇಲೆ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಮೊದಲ ಹಂತದ ಮತದಾನಕ್ಕೂ ಮುನ್ನ ಮತ್ತೊಂದು ವರ್ಚ್ಯುಯಲ್ ರ್‍ಯಾಲಿ ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎನ್ನುತ್ತವೆ ಬಿಜೆಪಿ ಮೂಲಗಳು. ಮೂರು ರೈತ ವಿರೋಧಿ ಕಾನೂನುಗಳ ಬಗ್ಗೆ ನಡೆದ ರೈತ ಹೋರಾಟದ ಕಾರಣಕ್ಕೆ ಮೊದಲ ಹಾಗೂ ಎರಡನೇ ಹಂತದ ಮತದಾನ ನಡೆಯುವ ಪ್ರದೇಶಗಳಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ ಆಗಬಹುದು.‌ ಅದೇ ಕಾರಣಕ್ಕೆ ಮೋದಿ‌ ವರ್ಚ್ಯುಯಲ್ ರ್‍ಯಾಲಿ ಮೂಲಕ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Hair Export: ವಿದೇಶಕ್ಕೆ ಕೂದಲು ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ: ಕೊಪ್ಪಳದಲ್ಲಿ ಮತ್ತೆ ಗರಿಗೆದರಿದ ಕೂದಲು ಉದ್ಯಮ

ಬಿಜೆಪಿ ಮಾಸ್ಟರ್ ಪ್ಲ್ಯಾನ್

ಬಿಜೆಪಿ ಪಕ್ಷ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಬಲವಾಗಿದೆ. ಹಲವು ಚುನಾವಣೆಗಳಲ್ಲಿ ಸಾಮಾಜಿಕ ತಾಣಗಳ ಬಳಕೆ ಮಾಡಿ ಯಶಸ್ವಿಯೂ ಆಗಿದೆ. ಹೀಗಾಗಿ ಬಿಜೆಪಿ ವರ್ಚ್ಯುಯಲ್ ರ್‍ಯಾಲಿಗಳನ್ನು ನಡೆಸಲು ತಂತ್ರಗಾರಿಕೆ ಆರಂಭಿಸಿದೆ. ಪ್ರಚಾರಕ್ಕೆ 3ಡಿ ಸ್ಟುಡಿಯೋ ಮಿಕ್ಸ್, ಜೂಮ್ ಮತ್ತು ವೆಬ್ ಎಕ್ಸ್ ಅನ್ನು ಬಳಕೆ ಮಾಡುವಂತೆ ಪಕ್ಷದ ಮಾಹಿತಿ ತಂತ್ರಜ್ಞಾನ ಸೆಲ್ ಗೆ ಸೂಚನೆ ನೀಡಿದೆ. 3 ಡಿ ಸ್ಟುಡಿಯೋ ಮಿಕ್ಸ್ ನಲ್ಲಿ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಇರುವ ನಾಯಕರನ್ನು ಒಂದೇ ಸ್ಟೇಜ್ ನಲ್ಲಿರುವಂತೆ ಚಿತ್ರಿಸಲಾಗುತ್ತದೆ. ಜೊತೆಗೆ 1.8ಲಕ್ಷ ಪೋಲಿಂಗ್ ಬೂತ್ ವ್ಯಾಪ್ತಿಯಲ್ಲಿ 2 ವಾಟ್ಸಾಪ್ ಗ್ರೂಪ್ ರಚನೆಗ ಬಿಜೆಪಿ ಮುಂದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಮಾಜವಾದಿ ಪಕ್ಷ ಸಕ್ರಿಯ

ಬಿಜೆಪಿಗೆ ಸೆಡ್ಡು ಹೊಡೆಯಲು ಸಮಾಜವಾದಿ ಪಕ್ಷ ಸಹ ರೆಡಿಯಾಗಿದೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತದಾರರನ್ನು ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಫೇಸ್ ಬುಕ್, ಟ್ವಿಟರ್ ಹಾಗೂ ಯುಟ್ಯೂಬ್ ಗಳ ಮೂಲಕ ಬಿರುಸಿನ ಪ್ರಚಾರಕ್ಕೆ ಸಮಾಜವಾದಿ ಪಕ್ಷ ಆದ್ಯತೆ ನೀಡಲಿದೆ. ಮೋದಿ ಹಾಗೂ ಯೋಗಿ ಆದಿತ್ಯನಾಥ್ ಗೆ ತಿರುಗೇಟು ನೀಡಲು ಅಖಿಲೇಶ್ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಾಜವಾದಿ ಪಕ್ಷ ಸಕ್ರೀಯವಾಗಿದ್ದು ಆ ಪಕ್ಷದ ಪರ ಅಲೆ ಎಬ್ಬಿಸಲು ಪ್ರಯತ್ನಿಸುತ್ತಿದೆ.

ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಯತ್ನ

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಗೆಲ್ಲಲು ರಣತಂತ್ರ ರೂಪಿಸಿದ್ದಾರೆ. ಮಹಿಳಾ ಮಂತ್ರ ಜಪಿಸುತ್ತಿರೋ ಪ್ರಿಯಾಂಕಾ ಗಾಂಧಿ ಅವರು ಮತದಾರರ ಮನಸೆಳೆಯಲು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಕೊರಾನಾ ಹಿನ್ನೆಲೆ ಸಾರ್ವಜನಿಕ ಕಾರ್ಯಕ್ರಮ ರದ್ದುಗೊಳಿಸಿರೋ ಕಾಂಗ್ರೆಸ್ ಜಾಲತಾಣಗಳ ಮೊರೆ ಹೋಗಿದೆ. ವಾಟ್ಸಪ್, ಫೇಸ್ ಬುಕ್, ಟ್ವಿಟರ್ ಮೂಲಕ ಪ್ರಚಾರ ಕೈಗೊಳ್ಳಲು ಪಕ್ಷ ಮುಂದಾಗಿದೆ.

ಇದನ್ನೂ ಓದಿ:Morning Digest: ಕೂದಲು ರಫ್ತಿಗೆ ನಿರ್ಬಂಧ, ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್, ಚಿನ್ನದ ಬೆಲೆ ಇಳಿಕೆ, ಬೆಳಗಿನ ಟಾಪ್​ ನ್ಯೂಸ್​​ಗಳು

ಬಿಎಸ್ ಪಿ ಸೂತ್ರ

ಮಾಯಾವತಿ ನೇತೃತ್ವದ ಬಿಎಸ್ ಪಿ ಪಕ್ಷ ಚುನಾವಣೆ ಎದುರಿಸಲು ಸನ್ನದ್ಧವಾಗಿದೆ. ಸದ್ಯಕ್ಕೆ ಫೇಸ್ ಬುಕ್ ಅನ್ನು ಮಾತ್ರ ನೇರ ಪ್ರಚಾರಕ್ಕೆ ಬಳಕೆ ಮಾಡಲು ಮುಂದಾಗಿದೆ. ಇದಕ್ಕಾಗಿಯೇ ಹಲವು ಕ್ರಮಗಳನ್ನು ಕೈಗೊಂಡಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಮಾಯಾವತಿ ಈ ಬಾರಿ ಗೆಲುವಿಗೆ ರಣತಂತ್ರ ರೂಪಿಸೋದು ಗ್ಯಾರಂಟಿ. ಇನ್ನೊಂದೆಡೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೂಡ ಡಿಜಿಟಲ್ ಪ್ರಚಾರದಿಂದ ಹಿಂದುಳಿದಿಲ್ಲ. ಯೂಟ್ಯೂಬ್, ವಾಟ್ಸಾಪ್, ಫೇಸ್ ಬುಕ್, ಟ್ವಿಟರ್ ಮೂಲಕ ಅಬ್ಬರದ ಪ್ರಚಾರ ಶುರುಮಾಡಿದೆ. ಒಟ್ಟಾರೆ ಈ ಪಂಚರಾಜ್ಯ ಚುನಾವಣೆ ದೇಶದಲ್ಲಿ ಹೊಸ ಮಾದರಿಯ ಪ್ರಚಾರಕ್ಕೆ ನಾಂದಿ ಹಾಡಲಿದೆ.
Published by:Latha CG
First published: