ಉತ್ತರಪ್ರದೇಶ (ಜುಲೈ 04); ದೇಶದಲ್ಲೇ ಅತಿದೊಡ್ಡ ರಾಜ್ಯ ಎಂಬ ಹೆಗ್ಗಳಿಕೆಗೆ ಒಳಗಾಗಿರುವ ಉತ್ತರಪ್ರದೇಶದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆ ಯಲ್ಲಿ ಗೆಲ್ಲಲೇಬೇಕು, ಮತ್ತೆ ಅಧಿಕಾರ ಹಿಡಿಯಬೇಕು ಎಂಬ ಮಹತ್ವಾಕಾಂಕ್ಷೆ ಬಿಜೆಪಿಗೆ ಇದೆ. ಎಸ್ಪಿ, ಬಿಎಸ್ಪಿ ಕಾಂಗ್ರೆಸ್ ಪಕ್ಷಗಳಿಗೂ ಈ ಚುನಾವಣೆ ನಿರ್ಣಾಯಕ ವಾಗಿದೆ. ಅಲ್ಲದೆ, ಮುಂದಿನ ವರ್ಷದ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (All India Majlis-e-Ittehadul Muslimeen) ಪಕ್ಷವೂ ಸಹ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲಿರುವುದು ಖಚಿತವಾಗಿದೆ. ಓವೈಸಿ ಅವರ AIMIM ಪಕ್ಷ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಕುರಿತು ಓವೈಸಿ ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿದ್ದರು. ಅಲ್ಲದೆ, ಈ ಚುನಾವಣೆಯಲ್ಲಿ ಬಿಜೆಪಿ 300 ಕ್ಷೇತ್ರಗಳಲ್ಲಿ ಗೆಲ್ಲುತ್ತದೆಯೇ? ಎಂದು ಸವಾಲು ಹಾಕಿದ್ದರು. ಆದರೆ, ಈ ಸವಾಲನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವೀಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಯೋಗಿ ಆದಿತ್ಯನಾಥ್, "ಅಸಾದುದ್ದೀನ್ ಓವೈಸಿ ನೀಡಿರುವ ಸವಾಲನ್ನು ನಾನು ಸ್ವೀಕರಿಸಿದ್ದೇವೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ "300 ಕ್ಕೂ ಹೆಚ್ಚು ಸ್ಥಾನಗಳನ್ನು" ಗೆದ್ದು ಬಿಜೆಪಿ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಆದಿತ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಅಸಾದುದ್ದೀನ್ ಓವೈಸಿ ನಮ್ಮ ದೇಶದ ದೊಡ್ಡ ನಾಯಕ. ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸವಾಲು ಹಾಕಿದರೆ, ಬಿಜೆಪಿಯ ಕಾರ್ಯಕರ್ತರು ಅಸಾದುದ್ದೀನ್ ಓವೈಸಿ ಸವಾಲನ್ನು ಸ್ವೀಕರಿಸುತ್ತಾರೆ" ಎಂದು ಯೋಗಿ ಆದಿತ್ಯನಾಥ್ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪ್ರಚಾರ ಕಾರ್ಯ ಈಗಾಗಲೇ ಶುರುವಾಗಿದೆ. ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ತಮ್ಮ ಪಕ್ಷವು 2022 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 100 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಕಳೆದ ತಿಂಗಳೇ ಘೋಷಿಸಿದ್ದರು.
ಓಂ ಪ್ರಕಾಶ್ ರಾಜ್‌ಭರ್ ನೇತೃತ್ವದ ಎಸ್‌ಬಿಎಸ್‌ಪಿ ಮತ್ತು ಇತರ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸಂಕಲ್ಪ ಮೋರ್ಚಾ ಬ್ಯಾನರ್ ಅಡಿಯಲ್ಲಿ ಓವೈಸಿ ಪಕ್ಷವು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದೆ.
ವಿಧಾನಸಭಾ ಚುನಾವಣೆ ಮುಂಚಿತವಾಗಿ ನಡೆದಿರುವ ಉತ್ತರ ಪ್ರದೇಶ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 75 ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಗಳಲ್ಲಿ 67 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಪಕ್ಷದ ಈ ಗೆಲುವು ರಾಜ್ಯದ ಬಿಜೆಪಿ ನಾಯಕ ವಿಶ್ವಾಸವನ್ನು ಬಲಪಡಿಸಿದೆ. ಇದರಿಂದಾಗಿ ಯೋಗಿ ಆದಿತ್ಯನಾಥ್, 2022 ರ ವಿಧಾನಸಭಾ ಚುನಾವಣೆಯನ್ನು ಇದೇ ಮಾದರಿಯಲ್ಲಿ ಗೆಲ್ಲುವುದಾಗಿ ಪ್ರತಿಜ್ಞೆ ಮಾಡಿದ್ದು, "ನಾವು 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಫಿಲಿಪ್ಪೈನ್ಸ್ನಲ್ಲಿ ವಿಮಾನ ದುರಂತ; 85 ಮಂದಿ ಇದ್ದ ಮಿಲಿಟರಿ ವಿಮಾನ ಅಪಘಾತ
ಆದರೆ, ಈ ಬಾರಿಯ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಬಿಜೆಪಿಗೆ ಕಠಿಣ ಸವಾಲು ನೀಡಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಈ ಎರಡೂ ಪಕ್ಷಗಳು ಸದ್ಯಕ್ಕೆ ಒಡೆದ ಮನೆಯಾಗಿರುವುದು ಸಹ ಬಿಜೆಪಿ ಪಾಲಿಗೆ ಲಾಭವಾಗಲಿದೆ ಎಂದು ವ್ಯಾಖ್ಯಾನಿಸ ಲಾಗುತ್ತಿದೆ. ಇನ್ನೂ ಕಾಂಗ್ರೆಸ್ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ