UP Elections: ಇಂದು ಅತಿ‌ ಮಹತ್ವದ ಮೊದಲ ಹಂತದ ಮತದಾನ

ಪಶ್ಚಿಮ ಉತ್ತರ ಪ್ರದೇಶದ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿ ಬೆಳಗ್ಗೆ 8ಗಂಟೆಗೆ ಶುರುವಾಗುವ ಮತದಾನ ಸಂಜೆ 6 ಗಂಟೆವರೆಗೆ ನಡೆಯಲು ಅವಕಾಶ ಮಾಡಿಕೊಡಲಾಗಿದೆ.

ಉತ್ತರ ಪ್ರದೇಶ ಚುನಾವಣೆ

ಉತ್ತರ ಪ್ರದೇಶ ಚುನಾವಣೆ

  • Share this:
ನವದೆಹಲಿ, ಫೆ. 10: ರಾಷ್ಟ್ರ ರಾಜಕಾರಣದ ಮೇಲೂ ಗಮನಾರ್ಹ ಪರಿಣಾಮ ಬೀರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಈ ಬಾರಿ ಏಳು ಹಂತದಲ್ಲಿ ಮತದಾನ ನಡೆಯಲಿದ್ದು, ಇಂದು ಮೊದಲ ಹಂತದ ಮತದಾನವಾಗಲಿದೆ. ಕೊರೋನಾ (Corona) ಮತ್ತು ಓಮೈಕ್ರಾನ್ (Omicron) ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲದಿರುವುದರಿಂದ ಕೇಂದ್ರ ಚುನಾವಣಾ ಆಯೋಗ (Central Election Commission)‌ ವಿಶೇಷವಾದ ನಿಯಮಗಳೊಂದಿಗೆ ಮತದಾನ ನಡೆಸಲು ಅವಕಾಶ ನೀಡಿದೆ. ಇದೇ ಕಾರಣಕ್ಕೆ ಈ ಬಾರಿ ಫೆಬ್ರವರಿ 11ರವರೆಗೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಬೃಹತ್ ಸಭೆ, ಸಮಾರಂಭ, ಸಮಾವೇಶ, ಬೈಕ್ ರ್‍ಯಾಲಿಗಳಿಗೂ ನಿರ್ಬಂಧ ವಿಧಿಸಿದೆ.

ಮತದಾನಕ್ಕೆ 1 ಗಂಟೆ ಹೆಚ್ಚು ಸಮಯ

ಇಂದು ಪಶ್ಚಿಮ ಉತ್ತರ ಪ್ರದೇಶದ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿ ಬೆಳಗ್ಗೆ 8ಗಂಟೆಗೆ ಶುರುವಾಗುವ ಮತದಾನ ಸಂಜೆ 6 ಗಂಟೆವರೆಗೆ ನಡೆಯಲು ಅವಕಾಶ ಮಾಡಿಕೊಡಲಾಗಿದೆ.

ಮತದಾನವೂ ಕೊರೋನಾ ನಿಯಮಗಳ ಪ್ರಕಾರ ನಡೆಯಬೇಕಿರುವುದರಿಂದ ಅಂದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಯಬೇಕಿರುವುದರಿಂದ ಮತದಾನದ ಅವಧಿಯನ್ನು ಬೆಳಗ್ಗೆ 8ರಿಂದ ಸಂಜೆ 5ಗಂಟೆಯ ಬದಲಿಗೆ ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ನಿಗಧಿ ಮಾಡಲಾಗಿದೆ. ಅಂದರೆ 1 ಗಂಟೆ ಹೆಚ್ಚು ಸಮಯ ನೀಡಲಾಗಿದೆ.

ಇದನ್ನೂ ಓದಿ:  ತಮಿಳುನಾಡಿನ ವೈಗಾರು ಗುಂಡಾರು ನದಿ ಜೋಡಣೆಗೆ ಕೇಂದ್ರ ಅವಕಾಶ ನೀಡಿರುವುದು ದುರಂತ: HD Devegowda

ಅತಿ ಮಹತ್ವದ ಮೊದಲ ಹಂತ

ಈ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಏಳು ಹಂತಗಳ ಪೈಕಿ ಮೊದಲ ಹಂತದ ಮತದಾನ ಅತ್ಯಂತ ಮಹತ್ವ ಪಡೆದುಕೊಂಡಿದೆ. ಪಶ್ಚಿಮ ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿ ನಡೆಯುತ್ತಿರುವ ಮೊದಲ ಹಂತದ ಮತದಾನ ಆಡಳಿತಾರೂಢ (ಕೇಂದ್ರ ಮತ್ತು ರಾಜ್ಯ ಎರಡೂ ಕಡೆ) ಬಿಜೆಪಿ ಪಾಲಿಗೆ ಅತ್ಯಂತ ಕಷ್ಟಕರವಾಗಿ ಪರಿಣಮಿಸಿದೆ ಎಂದು ಕೂಡ ಹೇಳಲಾಗುತ್ತಿದೆ.‌

ಉತ್ತರ ಪ್ರದೇಶದಲ್ಲಿ ಕಳೆದ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಜಾಟ್ ಸಮುದಾಯದ ಪಕ್ಷ ಎಂದೇ ಹೇಳಲಾಗುವ ರಾಷ್ಟ್ರೀಯ ಲೋಕದಳ (RLD) ಜೊತೆ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ರಾಷ್ಟ್ರೀಯ ಲೋಕದಳ ಪಕ್ಷವು ಬಿಜೆಪಿ ಮೈತ್ರಿ ಕೂಟದಿಂದ ಹೊರಹೋಗಿ ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸಿದೆ.

ಮುಂದಿನ ಹಂತಗಳ ಮೇಲೂ ಪರಿಣಾಮ ಸಾಧ್ಯತೆ

ಕೇಂದ್ರ ಸರ್ಕಾರ ತಂದಿದ್ದ ಮೂರು ರೈತ ವಿರೋಧಿ ಕೃಷಿ ಕಾನೂನುಗಳ ಕಾರಣಕ್ಕೆ ಬಿಜೆಪಿ ವಿರುದ್ಧ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯ ಸಿಡಿದೆದ್ದಿದೆ. ಹಾಗಾಗಿ ಜಾಟ್ ಸಮುದಾಯದ ಪ್ರಾಬಲ್ಯ ಇರುವ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಆಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Hijab Controversy: ಬಿಕಿನಿಯೋ, ಹಿಜಾಬೋ..! ಅದು ಹೆಣ್ಮಕ್ಕಳ ಹಕ್ಕು ಎಂದ ಪ್ರಿಯಾಂಕಾ ವಾದ್ರಾ

ಇಂದು ನಡೆಯುವ ಮೊದಲ ಹಂತ ಮಾತ್ರವಲ್ಲ ಇದೇ 14ರಂದು ನಡೆಯುವ ಎರಡನೇ ಹಂತದಲ್ಲೂ ಬಿಜೆಪಿಗೆ ಹೊಡೆತ ಬೀಳಲಿದೆ. ಮೊದಲೆರಡು ಹಂತಗಳಲ್ಲಿ ಹಿನ್ನಡೆಯಾದರೆ ಅದೇ ಸಾರ್ವಜನಿಕ ಅಭಿಪ್ರಾಯ ಮುಂದಿನ ಹಂತಗಳಿಗೂ ವಿಸ್ತರಿಸಬಹುದು ಅಥವಾ ಪ್ರತಿಕೂಲ ಪರಿಣಾಮ ಬೀರಬಹುದೆಂದು ಬಿಜೆಪಿ ಚಿಂತಾಕ್ರಾಂತವಾಗಿದೆ.

ಅದೇ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ವರ್ಚ್ಯುಯಲ್ ರ್‍ಯಾಲಿ ನಡೆಸಿದ್ದಾರೆ.

SP-RLD ಸಾಲಿಡ್ ಮೈತ್ರಿ

ರಾಷ್ಟ್ರೀಯ ಲೋಕದಳ ಜಾಟ್ ಸಮುದಾಯದ ಪಕ್ಷ ಎಂದು ಹೇಗೆ ಜನಜನಿತವೋ‌ ಸಮಾಜವಾದಿ ಪಕ್ಷ ಯಾದವರ ಪಕ್ಷ ಎಂದು ಕೂಡ‌ ಪ್ರಸಿದ್ದಿ. ಸಮಾಜವಾದಿ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಬೆಂಬಲ ಕೂಡ ಇದೆ. ಹಾಗಾಗಿ ಈ ಬಾರಿ ಜಾಟ್, ಯಾದವ್ ಮತ್ತು ‌ಮುಸ್ಲಿಂ ಸಮುದಾಯಗಳು ಒಂದೇ ಕಡೆ ಸೇರಿರುವುದರಿಂದ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳ ಮೈತ್ರಿಕೂಟ ಮುನ್ನಡೆ ಸಾಧಿಸುವ ಸಾಧ್ಯತೆಗಳಿವೆ.

ಇಂದು ನಡೆಯುವ ಮತದಾನದಲ್ಲಿ ಸಚಿವರಾದ ಶ್ರೀಕಾಂತ್ ಶರ್ಮಾ, ಸುರೇಶ್ ರಾಣಾ, ಸಂದೀಪ್ ಸಿಂಗ್, ಕಪಿಲ್ ದೇವ್ ಅಗರ್ವಾಲ್, ಅತುಲ್ ಗಾರ್ಗ್ ಮತ್ತು ಚೌಧುರಿ ಲಕ್ಷ್ಮಿ ನಾರಾಯಣ್ ಸೇರಿದಂತೆ ಹಲವು ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.
Published by:Mahmadrafik K
First published: