ಬೆಂಕಿ ಹಚ್ಚಿದವರು ನೇಣಿಗೇರುವುದನ್ನು ನೋಡಿಯೇ ನಾನು ಸಾಯಬೇಕು; ಉನ್ನಾವೋ ಸಂತ್ರಸ್ತೆಯ ಆಸೆ ಕೊನೆಗೂ ಈಡೇರಲೇ ಇಲ್ಲ!

Unnao Case: ಗುರುವಾರ ತಮ್ಮ ವಕೀಲರ ಜೊತೆಗೆ ರಾಯ್​ಬರೇಲಿಯ ಕೋರ್ಟ್​ಗೆ ತೆರಳುತ್ತಿದ್ದಾಗ ಆಕೆಯ ಕಾರು ಅಡ್ಡಹಾಕಿದ್ದ ಐವರು ಆಕೆ ಕಾರಿನಿಂದ ಇಳಿಯುತ್ತಿದ್ದಂತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಬೆಂಕಿ ಹೊತ್ತಿ ಉರಿಯತೊಡಗಿದ್ದರಿಂದ ಸುಮಾರು ದೂರ ಸಹಾಯಕ್ಕಾಗಿ ಓಡಿದ ಯುವತಿಗೆ ಯಾರೂ ಸಹಾಯ ಮಾಡಿರಲಿಲ್ಲ. ಕೊನೆಗೆ ತಾನೇ ಆಂಬುಲೆನ್ಸ್​ಗೆ ಫೋನ್ ಮಾಡಿದ್ದಳು.

Sushma Chakre | news18-kannada
Updated:December 7, 2019, 3:07 PM IST
ಬೆಂಕಿ ಹಚ್ಚಿದವರು ನೇಣಿಗೇರುವುದನ್ನು ನೋಡಿಯೇ ನಾನು ಸಾಯಬೇಕು; ಉನ್ನಾವೋ ಸಂತ್ರಸ್ತೆಯ ಆಸೆ ಕೊನೆಗೂ ಈಡೇರಲೇ ಇಲ್ಲ!
ಪ್ರಾತಿನಿಧಿಕ ಚಿತ್ರ
  • Share this:
ಲಕ್ನೋ (ಡಿ. 7): ಉತ್ತರ ಪ್ರದೇಶದ ಉನ್ನಾವೋದಲ್ಲಿ 2017ರಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣ ಇದೀಗ ದುರಂತ ಅಂತ್ಯ ಕಂಡಿದೆ. ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಗಳು ಅತ್ಯಾಚಾರ ಸಂತ್ರಸ್ತೆಯ ಮೇಲೆ ಬೆಂಕಿ ಹಾಕಿದ್ದರು. ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದಿದ್ದ ಸಂತ್ರಸ್ತೆಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ 11.40ಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.

ಬೆಂಕಿ ಹೊತ್ತಿದ್ದರಿಂದ ಯುವತಿಯ ದೇಹ ಶೇ. 90ರಷ್ಟು ಸುಟ್ಟುಹೋಗಿತ್ತು. ಗುರುವಾರ ಮಧ್ಯಾಹ್ನದಿಂದ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ 40 ಗಂಟೆಗಳ ಕಾಲ ಸಾವು-ನೋವಿನ ನಡುವೆ ಹೋರಾಡಿದ ಯುವತಿ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾಳೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಯುವತಿಯನ್ನು ನೋಡಲು ಬಂದ ಅಣ್ಣನ ಬಳಿ ಆಕೆ ಕೊನೆಯ ಆಸೆಯನ್ನು ಹೇಳಿಕೊಂಡಿದ್ದಾಳೆ.

'ಏನಾದರೂ ಮಾಡಿ ನನ್ನನ್ನು ಉಳಿಸಿಕೋ ಅಣ್ಣ.. ನನಗೆ ಸಾಯೋಕೆ ಇಷ್ಟವಿಲ್ಲ. ನನ್ನನ್ನು ಈ ಸ್ಥಿತಿಗೆ ತಂದವರನ್ನು ನೇಣಿಗೇರಿಸುವುದನ್ನು ನಾನು ನೋಡಬೇಕು. ಒಂದುವೇಳೆ ನಾನು ಸತ್ತುಹೋದರೆ ಅವರಲ್ಲಿ ಯಾರನ್ನೂ ಬಚಾವಾಗಲು ಬಿಡಬೇಡ' ಎಂದು ತನ್ನ ಅಣ್ಣನ ಬಳಿ ಸಂತ್ರಸ್ತೆ ಬೇಡಿಕೊಂಡಿದ್ದಳು. ತನ್ನ ತಂಗಿ ಜೀವಂತವಾಗಿ ಮನೆಗೆ ವಾಪಾಸ್ ಬರುತ್ತಾಳೆ ಎಂದು ನಂಬಿದ್ದ ಅಣ್ಣ ಆಕೆಯನ್ನು ಉಳಿಸಿಕೊಳ್ಳುವುದಾಗಿ ಮಾತು ಕೊಟ್ಟಿದ್ದ. ಆದರೆ, ವಿಧಿಯಾಟವೇ ಬೇರೆ ಇತ್ತು.

ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಪ್ರಕರಣ; ಆಸ್ಪತ್ರೆಯಲ್ಲೇ ದುರಂತ ಅಂತ್ಯ ಕಂಡ ಯುವತಿ

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆಕೆಯ ಅಣ್ಣ, 'ಅತ್ಯಾಚಾರ ನಡೆದಿದ್ದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರೂ ತನ್ನ ರೀತಿ ಬೇರಾರಿಗೂ ಆಗಬಾರದು ಎಂದು ಇಷ್ಟು ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡಿದ ನನ್ನ ತಂಗಿಯನ್ನು ಹೆದರಿಸಲು ನೋಡಿದರು. ಆದರೂ ಆಕೆ ಹೆದರದ ಕಾರಣ ಜೀವಂತವಾಗಿ ಸುಟ್ಟುಹಾಕಿದ್ದಾರೆ' ಎಂದು ನೋವು ತೋಡಿಕೊಂಡಿದ್ದಾರೆ.

ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿಯಲ್ಲೊಬ್ಬನಾಗಿದ್ದ ಶುಭಂ 10 ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ. ಯುವತಿಯ ಮೇಲೆ ಬೆಂಕಿ ಹಾಕಿರುವ ಆರೋಪದಲ್ಲಿ ಮತ್ತೆ ಐವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಗುರುವಾರ ತಮ್ಮ ವಕೀಲರ ಜೊತೆಗೆ ರಾಯ್​ಬರೇಲಿಯ ಕೋರ್ಟ್​ಗೆ ತೆರಳುತ್ತಿದ್ದಾಗ ಆಕೆಯ ಕಾರು ಅಡ್ಡಹಾಕಿದ್ದ ಐವರು ಆಕೆ ಕಾರಿನಿಂದ ಇಳಿಯುತ್ತಿದ್ದಂತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಬೆಂಕಿ ಹೊತ್ತಿ ಉರಿಯತೊಡಗಿದ್ದರಿಂದ ಸುಮಾರು ದೂರ ಸಹಾಯಕ್ಕಾಗಿ ಓಡಿದ ಯುವತಿಗೆ ಯಾರೂ ಸಹಾಯ ಮಾಡಿರಲಿಲ್ಲ. ಕೊನೆಗೆ ಯಾರದೋ ಮೊಬೈಲ್ ತೆಗೆದುಕೊಂಡು ತಾನೇ ಆಂಬುಲೆನ್ಸ್​ಗೆ ಫೋನ್ ಮಾಡಿ ಆ ಯುವತಿ ಕುಸಿದುಬಿದ್ದಿದ್ದಳು. ಅಷ್ಟರಲ್ಲಾಗಲೇ ಬೆಂಕಿಯಿಂದ ಆಕೆಯ ದೇಹದ ಬಹುಭಾಗ ಸುಟ್ಟುಹೋಗಿತ್ತು. ನಂತರ ಆಕೆಯನ್ನು ರಾಯ್​ಬರೇಲಿಯಿಂದ ಹೆಲಿಕಾಪ್ಟರ್​ ಮೂಲಕ ದೆಹಲಿಯ ಸಫ್ದರ್​ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನದಿಂದ ಸಂತ್ರಸ್ತೆಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ನಿನ್ನೆ ರಾತ್ರಿ 11.10ರ ವೇಳೆಗೆ ಯುವತಿಗೆ ಹೃದಯಾಘಾತವಾಗಿತ್ತು. ವೈದ್ಯರು ಆಕೆಯನ್ನು ಉಳಿಸಲು ಎಷ್ಟೇ ಪ್ರಯತ್ನಪಟ್ಟರೂ 11.40ರ ವೇಳೆಗೆ ಯುವತಿ ಸಾವನ್ನಪ್ಪಿದ್ದಾಳೆ.

ಹೈದರಾಬಾದ್​ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನು ಎನ್​ಕೌಂಟರ್​ ಮಾಡಿದ ಪೊಲೀಸರುಮಾರ್ಚ್​ನಲ್ಲಿ ಗ್ರಾಮದ ಇಬ್ಬರು ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರ ಎಸಗಿ ಘಟನೆಯನ್ನು ದೃಶ್ಯೀಕರಣ ಮಾಡಿಕೊಂಡಿದ್ದರು. ಈ ಕುರಿತು ಯುವತಿ ರಾಯ್​ಬರೇಲಿ ಜಿಲ್ಲೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಇಲ್ಲಿನ ಸ್ಥಳೀಯ ನ್ಯಾಯಾಲಯ ಕೂಡ ವಿಚಾರಣೆ ನಡೆಸಿತ್ತು. ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಯುವತಿಯಿದ್ದ ಕಾರು ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಈ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಅಲ್ಲದೆ, ಈ ಪ್ರಕರಣವನ್ನು ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಆದಷ್ಟು ಬೇಗ ಈ ಪ್ರಕರಣವನ್ನು ಇತ್ಯರ್ಥಗೊಳಿಸಿ, ಆರೋಪಿಗಳನ್ನು ಬಂಧಿಸಿ ಎಂದು ಸಿಬಿಐಗೆ ತಾಕೀತು ಮಾಡಿತ್ತು.
First published:December 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ