Unlock 5.0: ಭಾರತದಲ್ಲಿ ಅ. 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Unlock 5.0 Guidelines: ಈಗಾಗಲೇ 13 ದೇಶಗಳಿಗೆ ವಿಮಾನ ಸಂಚರಿಸುವ ಕುರಿತು ಏರ್​ ಬಬಲ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದ ಅನುಸಾರ ಅಮೆರಿಕ, ಇಂಗ್ಲೆಂಡ್, ಸೌದಿ ರಾಷ್ಟ್ರಗಳು ಮುಂತಾದ ಕೆಲವು ದೇಶಗಳಿಗೆ ಭಾರತದಿಂದ ವಿಮಾನಗಳು ಸಂಚರಿಸಲಿವೆ.

  • Share this:

ನವದೆಹಲಿ (ಅ. 1): ಭಾರತದಲ್ಲಿ ಕೊರೋನಾ ವೈರಸ್ ಕಾಟ ಇನ್ನೂ ಕಡಿಮೆಯಾಗಿಲ್ಲ. ಪ್ರತಿದಿನ ಸುಮಾರು 80 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಅ. 31ರವರೆಗೆ ನಿರ್ಬಂಧಿಸಲಾಗಿದೆ. ಮಾರ್ಚ್​ 23ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಲಾಕ್​ಡೌನ್ ಅನ್ನು ಹಂತಹಂತವಾಗಿ ತೆರವುಗೊಳಿಸಲಾಗುತ್ತಿದ್ದು, ಅನ್​ಲಾಕ್​ 5ರಲ್ಲೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿಲ್ಲ. ವಿದೇಶಗಳಿಗೆ ಸಂಚರಿಸುವ ಮತ್ತು ವಿದೇಶಗಳಿಂದ ಆಗಮಿಸುವ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧವನ್ನು ಅ. 31ರವರೆಗೆ ವಿಸ್ತರಿಸಲಾಗಿದೆ.


ಈಗಾಗಲೇ ವಂದೇ ಭಾರತ್ ಮಿಷನ್​ನಡಿ ಲಕ್ಷಾಂತರ ಭಾರತೀಯರನ್ನು ವಿದೇಶಗಳಿಂದ ಸುರಕ್ಷಿತವಾಗಿ ಕರೆತರಲಾಗಿದೆ. ಸರ್ಕಾರದ ಅನುಮತಿ ಪಡೆದ ವಿಶೇಷ ವಿಮಾನಗಳ ಹೊರತಾಗಿ ಇನ್ನೊಂದು ತಿಂಗಳು ಅಂತಾರಾಷ್ಟ್ರೀಯ ವಿಮಾನಗಳು ಸಂಚರಿಸುವುದಿಲ್ಲ. ಕೊರೋನಾ ಅಬ್ಬರ ಹೆಚ್ಚಾಗಿರುವುದರಿಂದ ಇಂತಹ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಯಾಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಈಗಾಗಲೇ 13 ದೇಶಗಳಿಗೆ ವಿಮಾನ ಸಂಚರಿಸುವ ಕುರಿತು ಏರ್​ ಬಬಲ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದ ಅನುಸಾರ ಅಮೆರಿಕ, ಇಂಗ್ಲೆಂಡ್, ಸೌದಿ ರಾಷ್ಟ್ರಗಳು ಮುಂತಾದ ಕೆಲವು ದೇಶಗಳಿಗೆ ಭಾರತದಿಂದ ವಿಮಾನಗಳು ಸಂಚರಿಸಲಿವೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್ ರೇಪ್!; ವಿಷದ ಇಂಜೆಕ್ಷನ್ ನೀಡಿ, ಮೂಳೆ ಮುರಿದು ಯುವತಿಯ ಹತ್ಯೆ


ಏರ್​ ಬಬಲ್ ಒಪ್ಪಂದ ಮಾಡಿಕೊಂಡ ದೇಶಗಳ ಪಟ್ಟಿಗೆ ಭಾರತ ಭೂತಾನ್ ಮತ್ತು ಕೀನ್ಯಾ ದೇಶಗಳನ್ನು ಕೂಡ ಸೇರ್ಪಡೆ ಮಾಡಿದೆ. ಈ ದೇಶಗಳಿಗೆ ಕೂಡ ಭಾರತದಿಂದ ಇನ್ನುಮುಂದೆ ವಿಮಾನಗಳು ಸಂಚರಿಸಲಿವೆ. ಸದ್ಯಕ್ಕೆ ಭಾರತದಲ್ಲಿ ದೇಶೀಯ ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದೀಗ ಕೊರೋನಾ ಕೇಸ್​ಗಳು ಹೆಚ್ಚುತ್ತಲೇ ಇರುವುದರಿಂದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಹೆಚ್ಚಿನ ಎಚ್ಚರ ವಹಿಸಲಾಗುತ್ತಿದೆ. ಸದ್ಯಕ್ಕೆ ಭಾರತದಲ್ಲಿ ಶೇ. 60ರಷ್ಟು ಡೊಮೆಸ್ಟಿಕ್ ವಿಮಾನಗಳು ಸಂಚರಿಸುತ್ತಿವೆ.


ಆರಂಭದಲ್ಲಿ ಜರ್ಮನಿ, ಫ್ರಾನ್ಸ್​, ಅಮೆರಿಕದಂತಹ ಕೆಲವು ದೇಶಗಳೊಡನೆ ಮಾತ್ರ ಏರ್ ಬಬಲ್ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಬಳಿಕ, ಕೆನಡಾ, ಮಾಲ್ಡೀವ್ಸ್​, ಯುಎಇ, ಕತಾರ್ ಬಹ್ರೇನ್, ಜಪಾನ್ ಮುಂತಾದ ದೇಶಗಳ ಜೊತೆಯೂ ಭಾರತ ಒಪ್ಪಂದ ಮಾಡಿಕೊಂಡಿದೆ. ಸದ್ಯದ ಮಟ್ಟಿಗೆ ಅ. 31ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿರ್ಬಂಧಿಸಲಾಗಿದೆ.

Published by:Sushma Chakre
First published: