ಮಿರ್ಜಾಪುರ, ಉತ್ತರ ಪ್ರದೇಶ: ಪ್ರೀತಿ ಕುರುಡು (Love is Blind) ಎಂಬ ಮಾತನ್ನು ನಾವು ನೀವು ಕೇಳಿರುತ್ತೇವೆ, ಇದಕ್ಕೆ ನಮಗೆ ಸಾಕಷ್ಟು ಉದಾಹರಣೆಗಳು ಸಿಗಬಹುದು. ಯಾರು, ಯಾವಾಗ ಮತ್ತು ಎಲ್ಲಿ ಪ್ರೀತಿಯಲ್ಲಿ ಬೀಳುತ್ತಾರೋ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹದೊಂದು ಅಚ್ಚರಿಯ ಪ್ರಕರಣ ಉತ್ತರ ಪ್ರದೇಶದ (Uttar Pradesh) ಮಿರ್ಜಾಪುರ ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ. ಇಲ್ಲಿ ಚಿಕ್ಕಮ್ಮನ ಮನೆಗೆ ಮದುವೆಗೆ ಬಂದಿದ್ದ ಹುಡುಗಿ ಮದುವೆ ಮನೆಯಲ್ಲಿ ಒಬ್ಬ ಹುಡುಗನನ್ನು ನೋಡಿ ಪ್ರೀತಿಯಲ್ಲಿ ಬಿದ್ದಿದ್ದು, ಮರುದಿನವೇ ಇಬ್ಬರೂ ಮದುವೆಯಾಗುವ (Marriage) ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಿರ್ಜಾಪುರ ಜಿಲ್ಲೆಯ ವಿಂಧ್ಯಾಚಲ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೌರಾ ಗ್ರಾಮದಲ್ಲಿ ವಿಶಿಷ್ಟವಾದ ವಿವಾಹ ಸಮಾರಂಭವನ್ನು ನಡೆದಿದೆ. ಒಂದೇ ದಿನದಲ್ಲಿ ಪ್ರೀತಿಯಾಗಿದ್ದು, ಮರುದಿನ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಪ್ರೇಮಿಗಳು ಮದುವೆಯಾಗಿದ್ದಾರೆ. ಈ ಕಥೆ ಸಿನಿಮಾದಂತೆ ಕಾಣಿಸಬಹುದು, ಆದರೆ ಇದು ಸಂಪೂರ್ಣವಾಗಿ ನಿಜವಾದ ಘಟನೆಯಾಗಿದೆ.
ಚಿಕ್ಕಮ್ಮನ ಮನೆಗೆ ಬಂದಿದ್ದ ಹುಡುಗಿ
ಮಾರ್ಚ್ 14 ಮಂಗಳವಾರ ವಿರೋಹಿ-ಮಹದೌರಾ ಗ್ರಾಮದ ನಿವಾಸಿ ಚಂದ್ರಬಲಿ ಕುಶ್ವಾಹಾ ಅವರ ಮಗಳ ವಿವಾಹ ನಡೆದಿತ್ತು. ಪ್ರಯಾಗ್ರಾಜ್ ಜಿಲ್ಲೆಯ ಮಂಡಾ ನಿವಾಸಿಯಾಗಿರುವ ಅನಿತಾ ಮೌರ್ಯ ಎಂಬ ಯುವತಿ ತನ್ನ ಚಿಕ್ಕಮ್ಮನ ಊರಿಗೆ ಈ ಮದುವೆ ಕಾರ್ಯಕ್ರಮಕ್ಕೆ ಹಾಜರಾಗಲು ತನ್ನ ಕುಟುಂಬದೊಂದಿಗೆ ಬಂದಿದ್ದಳು. ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅನಿತಾ ಗ್ರಾಮದ ಕಮಲೇಶ್ ಎಂಬ ಯುವಕನನ್ನು ನೋಡಿ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಭೇಟಿಯಾದ ಮೊದಲ ದಿನವೇ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: Viral Video: ಗಂಡನ ಮನೆಗೆ ಹೊಸ ಸೊಸೆಯ ಎತ್ತಿನಗಾಡಿ ಸವಾರಿ!
ಯುವತಿ ಪೋಷಕರ ವಿರೋಧ
ಅನಿತಾ ಕಮಲೇಶ್ನನ್ನು ವಿವಾಹವಾಗಲು ನಿರ್ಧರಿಸಿದ್ದರಿಂದ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಅವರು ತಮ್ಮ ಮಗಳಿಗೆ ವಿವಾಹ ಮಾಡಿಕೊಳ್ಳುವುದು ಬೇಡ ಎಂದು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಯುವತಿ ಮಾತ್ರ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದಳು. ಕೊನೆಗೆ ಬೇಸರದಿಂದ ಇಬ್ಬರೂ ಮಗಳನ್ನು ಅಲ್ಲೇ ಬಿಟ್ಟು ತಮ್ಮ ಮನೆಗೆ ಮರಳಿದ್ದಾರೆ.
ಕನ್ಯಾದಾನ ಮಾಡಿದ ಚಿಕ್ಕಪ್ಪ ಮತ್ತು ಚಿಕ್ಕಮ್ಮ
ಬಾಲಕಿಯ ಪೋಷಕರು ಮನೆಗೆ ಮರಳಿದ ನಂತರ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕಮಲೇಶ್ನೊಂದಿಗೆ ಅನಿತಾಳ ಕನ್ಯಾದಾನ ಮಾಡಲು ಒಪ್ಪಿಕೊಂಡಿದ್ದಾರೆ. ಇದಾದ ಮರುದಿನ ಅಂದರೆ ಮಾರ್ಚ್ 15 ಬುಧವಾರದಂದು ಗ್ರಾಮದ ರಾಮ ಜಾನಕಿ ದೇವಸ್ಥಾನದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಹಿಂದೂ ಪದ್ಧತಿಯಂತೆ ಈ ವಿಶಿಷ್ಟ ವಿವಾಹ ನಡೆದಿದೆ.
ಗ್ರಾಮದ ದೇವಸ್ಥಾನದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ವಿವಾಹ ನಡೆದಿದೆ. ಈ ಮದುವೆಗೆ ವರ ಒಂದು ರೂಪಾಯಿ ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.
ಮೊದಲ ರಾತ್ರಿಯಲ್ಲಿ 20 ಸಾವಿರ ಬೇಡಿಕೆಯಿಟ್ಟ ವಧು
ಪತಿ-ಪತ್ನಿಯರ ನಡುವಿನ ಜಗಳಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಸುದ್ದಿಗಳನ್ನು ನೀವು ಕೇಳಿರಬಹುದು. ಆದರೆ ಇತ್ತೀಚಿಗೆ ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಮುನ್ನೆಲೆಗೆ ಬಂದಿರುವ ವಿಷಯ ಎಲ್ಲರನ್ನು ಅಚ್ಚರಿಗೊಳಿಸಿದೆ. ಏಕೆಂದರೆ ಮೊದಲ ರಾತ್ರಿಯ ದಿನ ವಧು ವರನಿಗೆ ವಿಚಿತ್ರವಾದ ಬೇಡಿಕೆ ಇಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ
ಮದುವೆಯ ದಿನದಂದು ನವ ವಧುವಿಗೆ ವಿವಿಧ ರೀತಿಯ ಉಡುಗೊರೆಗಳನ್ನು ನೀಡುವ ಸಂಪ್ರದಾಯವಿದೆ. ಜೊತೆಗೆ ಕೆಲವು ಕಡೆ ಜನರು ಒಳ್ಳೆಯ ಶಕುನವಾಗಿ ಹಣವನ್ನು ಕೊಡುತ್ತಾರೆ. ಇದೇ ವರನಿಗೆ ಶಾಪವಾಗಿದೆ. ವಧು ಸಂಪ್ರದಾಯದ ಲಾಭ ಪಡೆದುಕೊಂಡು ವರನಿಗೆ 20 ಸಾವಿರ ಕೇಳಿದ್ದಾಳೆ, ಆದರೆ ವರ 7 ಸಾವಿರ ನೀಡಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ವರ ಕೋಪದಿಂದ ಜಗಳ ಮಾಡಿದ್ದು, ವಧು ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದಾಳೆ. ಕೊನೆಗೆ ರಾಜಿ ಪಂಚಾಯಿತಿ ಮಾಡಿಸಿ ಗಂಡನ ಮನೆಗೆ ವಧುವನ್ನು ಕಳುಹಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ