ನವದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರ ಚೀನಾ ದೇಶದ (India China Conflict) ಬಗ್ಗೆ ತಾಳಿರುವ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಸಚಿವ ಜೈಶಂಕರ್, ರಾಹುಲ್ ಗಾಂಧಿಗೆ ಈ ಬಗ್ಗೆ ‘ಉನ್ನತ ಜ್ಞಾನ’ ಇದ್ದರೆ ನಾವು ಅವರ ಮಾತನ್ನು ಕೇಳಲು ಸಿದ್ಧ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್, ನಾನು ಚೀನಾದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ರಾಯಭಾರಿಯಾಗಿದ್ದೇನೆ. ನಾನು ಈ ಗಡಿ ಸಮಸ್ಯೆಗಳ ಬಗ್ಗೆ ಬಹಳ ಸಮಯದಿಂದ ವ್ಯವಹರಿಸುತ್ತಿದ್ದೇನೆ. ಗಡಿ ವಿಚಾರದಲ್ಲಿ ನಾನು ಹೆಚ್ಚು ಜ್ಞಾನವುಳ್ಳ ವ್ಯಕ್ತಿ ಎಂದು ಹೇಳುತ್ತಿಲ್ಲ. ಆದರೆ ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಗೊತ್ತಿರುವ ತಿಳುವಳಿಕೆಯ ಬಗ್ಗೆ ನನಗೆ ಖಚಿತತೆ ಇದೆ. ಇದರ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಇನ್ನೂ ಹೆಚ್ಚಿನ ಜ್ಞಾನ ಅಥವಾ ಬುದ್ಧಿವಂತಿಕೆ ಇದ್ದರೆ ನಾನು ಅದನ್ನು ಕೇಳಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Rahul Gandhi: ಮಾಡೋಕೆ ತುಂಬಾ ಕೆಲಸ ಇದೆ, ಆದ್ರೆ ನನಗೆ ಮಕ್ಕಳು ಬೇಕು; ಮದುವೆ ಬಗ್ಗೆ ರಾಹುಲ್ ಮಾತು
ನನಗೆ ಜೀವನ ಕಲಿಕಾ ಪ್ರಕ್ರಿಯೆ
ಅಲ್ಲದೇ, ನನಗೆ ಜೀವನ ಅನ್ನೋದು ಒಂದು ಕಲಿಕೆಯ ಪ್ರಕ್ರಿಯೆ ಎಂದಿರುವ ಸಚಿವ ಎಸ್ ಜೈ ಶಂಕರ್, ಯಾವುದಾದರೂ ಕಡೆಯಿಂದ ಒಂದು ಅಭಿಪ್ರಾಯ ಬರುತ್ತದೆ ಎಂದಾದರೆ, ನಾನು ಅದನ್ನು ಕೇಳಲು ನನ್ನ ಮನಸ್ಸನ್ನು ತೆರೆದಿಡುತ್ತೇನೆ, ಯಾವುದಕ್ಕೂ ನನ್ನ ಮನಸ್ಸನ್ನು ಮುಚ್ಚಿಟ್ಟಿಲ್ಲ ಎಂದು ಹೇಳಿದ್ದಾರೆ.
ಇನ್ನು ಚೀನಾದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಯಲ್ಲಿ ಸೈನಿಕರನ್ನು ನಿಯೋಜಿಸಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯೇ ಹೊರತು, ರಾಹುಲ್ ಗಾಂಧಿ ಅಲ್ಲ ಎಂದಿರುವ ಕೇಂದ್ರ ಸಚಿವ ಜೈ ಶಂಕರ್, ನಮ್ಮ ಕೇಂದ್ರ ಸರ್ಕಾರದಲ್ಲಿ ಗಡಿಯಲ್ಲಿನ ಮೂಲಸೌಕರ್ಯ ವೆಚ್ಚವನ್ನು ಐದು ಬಾರಿ ಹೆಚ್ಚಿಸಿದ್ದೇವೆ. ಈಗ ಹೇಳಿ, ರಕ್ಷಣಾತ್ಮಕ ಮತ್ತು ಹೊಂದಾಣಿಕೆಯ ವ್ಯಕ್ತಿ ಯಾರು? ನಿಜವಾಗಿ ಯಾರು ಸತ್ಯವನ್ನು ಹೇಳುತ್ತಿದ್ದಾರೆ? ಯಾರು ವಿಷಯಗಳನ್ನು ನಿಖರವಾಗಿ ವ್ಯಕ್ತಪಡಿಸುತ್ತಿದ್ದಾರೆ? ಯಾರು ಇತಿಹಾಸದೊಂದಿಗೆ ಕಾಲೆಳೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಜೈಶಂಕರ್ ಕಿಡಿಕಾರಿದರು.
ಇದನ್ನೂ ಓದಿ: Video: ವಿದೇಶಾಂಗ ಸಚಿವ ಜೈಶಂಕರ್ ಮತ್ತು ಪುತ್ರನಿಗೆ ರೆಸ್ಟೊರೆಂಟ್ ಪ್ರವೇಶಿಸಲು ಬಿಡದ ಸಿಬ್ಬಂದಿ, ಮುಂದೇನಾಯ್ತು?
ಇನ್ನು ಕಳೆದ ವರ್ಷ ಪ್ಯಾಂಗೊಂಗ್ ಲೇಕ್ ಪ್ರದೇಶದಲ್ಲಿ ಸೇತುವೆ ನಿರ್ಮಿಸಿರುವ ಚೀನಾ ವಿಚಾರವಾಗಿ ಕೇಂದ್ರವನ್ನು ಗುರಿಯಾಗಿಸಿ ಟೀಕಿಸಿದ್ದ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಜೈಶಂಕರ್, 1962 ರ ಯುದ್ಧದ ನಂತರ ಈ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ. ಆ ಪ್ರದೇಶವು ಯಾವಾಗ ಚೀನಾದ ನಿಯಂತ್ರಣಕ್ಕೆ ಬಂತು? 1958ರಲ್ಲಿ ಚೀನಿಯರು ಮೊದಲು ಅಲ್ಲಿಗೆ ಬಂದರು. 1962ರ ಅಕ್ಟೋಬರ್‌ನಲ್ಲಿ ಚೀನೀಯರು ಅದನ್ನು ವಶಪಡಿಸಿಕೊಂಡರು. ಆ ವಿಚಾರವನ್ನಿಟ್ಟುಕೊಂಡು ಈಗ ನೀವು 2023ರಲ್ಲಿ ಮೋದಿ ಸರ್ಕಾರವನ್ನು ದೂಷಿಸಲು ಹೊರಟಿದ್ದೀರಿ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ಅಲ್ಲದೇ, ರಾಜೀವ್ ಗಾಂಧಿ ಅವರು 1988 ರಲ್ಲಿ ಬೀಜಿಂಗ್‌ಗೆ ಹೋಗಿದ್ದರು. 1993 ಮತ್ತು 1996ರಲ್ಲಿ ಒಪ್ಪಂದಗಳಿಗೆ ಸಹಿ ಹಾಕಿದರು. ಆ ಒಪ್ಪಂದಗಳಿಗೆ ಸಹಿ ಹಾಕುವುದು ತಪ್ಪು ಎಂದು ನಾನು ಹೇಳುವುದಿಲ್ಲ ಎಂದು ಹೇಳಿದ ಸಚಿವ ಜೈ ಶಂಕರ್, ಇದು ರಾಜಕೀಯ ವಿಚಾರವಲ್ಲ, ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆ ಸಮಯದಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ