ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಈ ಬಾರಿ ನಾವು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೋಶಿ, ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಂಸದೀಯ ಪದ ಬಳಸಿದ್ದಾರೆ. ಈಗಾಗಲೇ ಅವರಿಗೆ ಈ ಸಂಬಮಧ ನೋಟಿಸ್ ಕೂಡ ನೀಡಲಾಗಿದೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಯಾವುದಾದರೂ ಸಾಕ್ಷಿಗಳನ್ನು ಒದಗಿಸಬೇಕಿತ್ತು. ಆದರೆ ಅವರು ಯಾವುದೇ ಸಾಕ್ಷಿಗಳನ್ನು ಒದಗಿಸಿಲ್ಲ. ನಾವೆಲ್ಲರೂ ಈ ದೇಶದ ಜನರಿಗೆ ಉತ್ತರದಾಯಿಗಳಾಗಿದ್ದೇವೆ. ಹೀಗಾಗಿ ರಾಹುಲ್ ಗಾಂಧಿ ಅವರು ಮಾಡಿರುವ ಆಧಾರ ರಹಿತ ಆರೋಪದ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ನೋಟಿಸ್ ನೀಡಿದ್ದಾರೆ. ಹೀಗಾಗಿ ಈ ಬಾರಿ ರಾಹುಲ್ ಗಾಂಧಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Rahul Gandhi: ಯೋಗಿಯಂತೆ ತಿರುಗಾಡುತ್ತಿರುವ ರಾಹುಲ್ ಗಾಂಧಿ; ನಿಜಕ್ಕೂ ಇದರ ಹಿಂದಿನ ಸತ್ಯವೇನಿರಬಹುದು?
ರಾಹುಲ್ ಗಾಂಧಿ ವಿರುದ್ಧ ಸ್ಪೀಕರ್‌ಗೆ ಪತ್ರ
ಬಿಜೆಪಿ ಮುಖಂಡ ನಿಶಿಕಾಂತ್ ದುಬೆ ಅವರು ಫೆಬ್ರವರಿ 8ನೇ ತಾರೀಕಿನಂದು ರಾಹುಲ್ ಗಾಂಧಿ ವಿರುದ್ಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಹೇಳಿಕೆಗಳು ಜನರನ್ನು ದಾರಿ ತಪ್ಪಿಸುವಂತಿದೆ. ಅವರು ಬಳಸಿರುವ ಪದಗಳು ಅವಹೇಳನಕಾರಿಯಾಗಿದ್ದು, ಅಸಂಸದೀಯ ಮತ್ತು ಅಶಿಸ್ತಿನಿಂದ ಕೂಡಿದೆ. ಅವರು ಪ್ರಧಾನ ಮಂತ್ರಿ ಹಾಗೂ ಸದನದ ಘನತೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ, ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ವಿರುದ್ಧ ಆರೋಪ ಮಾಡಿದ ಮೇಲೆ ಅದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬೇಕಿತ್ತು. ಆದರೆ ಅವರು ಅದಕ್ಕೆ ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ. ಕಾಂಗ್ರೆಸ್ ಸಂಸದರ ಹೇಳಿಕೆಗಳು ಯಾವುದೇ ದಾಖಲೆಗಳು ಇಲ್ಲದ್ದರಿಂದ ಸದನವನ್ನು ದಾರಿ ತಪ್ಪಿಸುತ್ತಿವೆ. ಅದಲ್ಲದೇ, ರಾಹುಲ್ ಗಾಂಧೀ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೂ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಈ ವರ್ತನೆ ಸದನ ಹಾಗೂ ಅದರ ಸದಸ್ಯರ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇದು ಸ್ಪಷ್ಟವಾಗಿ ಸದನದ ನಿಂದನೆ. ರಾಹುಲ್ ಗಾಂಧಿ ಅವರ ವಿರುದ್ಧ ಸದನದ ನಿಂದನೆ ಹಾಗೂ ಹಕ್ಕುಚ್ಯುತಿ ಹಿನ್ನೆಲೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ದುಬೆ ತಾವು ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Rahul Gandhi: ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ರಾಹುಲ್ ಗಾಂಧಿ ಖಂಡಿಸಿದ್ದೇಕೆ? ಇಲ್ಲಿದೆ ನೋಡಿ
ಅದಾನಿ-ಮೋದಿ ಸಂಬಂಧ ಕುರಿತು ಪ್ರಸ್ತಾಪ
ಕಳೆದ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಸದನದಲ್ಲಿ ಮಾತನಾಡಿದ್ದ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಉದ್ಯಮಿ ಅದಾನಿ ವಿವಾದದ ಕುರಿತು ಮಾತನಾರುವಾಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಅನೇಕ ಆರೋಪಗಳನ್ನು ಮಾಡಿ ಕೋಟ್ಯಧಿಪತಿ ಉದ್ಯಮಿ ಅದಾನಿಯ ಪರವಾಗಿ ಕೇಂದ್ರ ಸರ್ಕಾರ ಕೆಲವು ಸೆಕ್ಟರ್‌ಗಳಲ್ಲಿ ನಿಯಮಗಳನ್ನು ಬದಲಾಯಿಸಿದೆ ಎಂದು ಆರೋಪ ಮಾಡಿದ್ದರು.
ಈ ವೇಳೆ ರಾಹುಲ್ ಗಾಂಧಿ ಅವರು, ಸಿಎಂ ಆದಾಗಿನಿಂದ ನರೇಂದ್ರ ಮೋದಿ ಮತ್ತು ಅದಾನಿ ಪರಸ್ಪರ ಸಂಬಂಧ ಹೊಂದಿದ್ದಾರೆ. 2014ರ ಬಳಿಕ ದೊಡ್ಡ ವಿಸ್ಮಯದಂತೆ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಅದಾನಿ 2ನೇ ಸ್ಥಾನಕ್ಕೆ ಏರಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಮೋದಿ ಅದಾನಿ ಜೊತೆ ಇರುವ ಹಳೆಯ ಫೋಟೋ ತೋರಿಸಿ ಆರೋಪ ಮಾಡಿದ್ದರು. ಸದ್ಯ ಈ ಆರೋಪದಿಂದ ಪಾರಾಗಲು ರಾಹುಲ್ ಗಾಂಧಿ ಕಡೆಗೇ ತಿರುಗು ಬಾಣ ಬಿಟ್ಟಿರುವ ಬಿಜೆಪಿ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ