ನಾಗ್ಪುರ್, ಮಹಾರಾಷ್ಟ್ರ: ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿರುವ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರ ಕಚೇರಿಗೆ ಶನಿವಾರ ಬೆಳಗ್ಗೆ ಬೆದರಿಕೆ ಕರೆ (threat call) ಬಂದಿವೆ ಎಂದು ನಾಗ್ಪುರ್ ಪೊಲೀಸರು ತಿಳಿಸಿದ್ದಾರೆ. ಕಚೇರಿ ದೂರವಾಣಿ ನಂಬರ್ಗೆ ಬೆಳಗ್ಗೆ 11:30 ಹಾಗೂ 12:30ರ ನಡುವೆ ಮೂರು ಬಾರಿ ಕರೆ ಮಾಡಿ ಬೆದರಿಕೆಯೊಡ್ಡಿದ್ದಾರೆ . ಸಚಿವ ಗಡ್ಕರಿ ಅವರ ಜನಸಂಪರ್ಕ ಕಚೇರಿಯ ದೂರವಾಣಿ ಸಂಖ್ಯೆಗೆ ದಾವೂದ್ (Dawood) ಎಂಬ ವ್ಯಕ್ತಿಯ ಹೆಸರಿನಲ್ಲಿ ಕರೆ ಮಾಡಿ ಸಚಿವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕರೆ ಮಾಡಿದವರು 100 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಲ್ಯಾಂಡ್ಲೈನ್ಗೆ ಮೂರು ಬೆದರಿಕೆ ಫೋನ್ ಕರೆಗಳು ಬಂದಿವೆ. ವಿವರಗಳನ್ನು ಕಂಡು ಹಿಡಿಯಲಾಗುತ್ತಿದೆ. ಕರೆ ಮಾಡಿದವರು ಗಡ್ಕರಿ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಮ್ಮ ಅಪರಾಧ ವಿಭಾಗ ಸಿಡಿಆರ್ನಲ್ಲಿ(Call Detail Record) ಕೆಲಸ ಮಾಡುತ್ತದೆ ಎಂದು ನಾಗ್ಪುರದ ಡಿಸಿಪಿ ರಾಹುಲ್ ಮದನೆ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
100 ಕೋಟಿ ರೂಪಾಯಿಗೆ ಬೇಡಿಕೆ
ಸ್ಥಳೀಯ ಪೊಲೀಸರ ವರದಿಯ ಪ್ರಕಾರ ದಾವೂದ್ ಹೆಸರಿನಲ್ಲಿ ಕರೆ ಮಾಡಿರುವ ಆರೋಪಿಗಳು ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ 100 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ದುಷ್ಕರ್ಮಿಗಳು ಬೆಳಗ್ಗೆ 11:20, 11:40 ಹಾಗೂ 12: 32ರ ಸಮಯದಲ್ಲಿ ಬೆದರಿಕೆ ಕರೆಗಳನ್ನು ಮಾಡಿದ್ದಾರೆ.
ಭದ್ರತೆ ಹೆಚ್ಚಳ
ಜೀವ ಬೆದರಿಕೆ ಕರೆ ಬಂದಿರುವ ಬೆನ್ನಲ್ಲೇ ಹೆದ್ದಾರಿ ಸಚಿವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಸಚಿವರು ಭಾಗವಹಿಸುವ ಕಾರ್ಯಕ್ರಮಗಳು, ಕಚೇರಿಗಳಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ನಾಗ್ಪುರ ಡಿಸಿಪಿ ಮದನೆ ತಿಳಿಸಿದ್ದಾರೆ.
ಇದನ್ನೂ ಓದಿ: ರಿಯಲ್ ಸಿಂಗಂ ಖ್ಯಾತಿಯ ಅಣ್ಣಾಮಲೈಗೆ Z ಶ್ರೇಣಿ ಭದ್ರತೆ! ತಮಿಳುನಾಡು ಕಮಲ ನಾಯಕನಿಗೆ 33 ಕಮಾಂಡೋಗಳ ಕೋಟೆ!
ಕರ್ನಾಟಕದಿಂದ ಕರೆ
ಕೇಂದ್ರ ಸಚಿವರಿಗೆ ಬೆದರಿಕೆ ಕರೆ ಬಂದಿರುವ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸರು ಈಗಾಗಲೆ ಕಚೇರಿಗೆ ಕರೆ ಮಾಡಿದ್ದ ನಂಬರ್ ಅನ್ನು ಟ್ರೇಸ್ ಮಾಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಆ ಕರೆ ಕರ್ನಾಟಕದಿಂದ ಬಂದಿದೆ ಎಂದು ತಿಳಿದುಬಂದಿದೆ.
ನಾಗ್ಪುರದಲ್ಲಿರುವ ಗಡ್ಕರಿ
ನರೇಂದ್ರ ಮೋದಿ ಸರ್ಕಾರದಲ್ಲಿ ನಿತಿನ್ ಗಡ್ಕರಿ ಅತ್ಯುತ್ತಮ ಕೆಲಸ ಮಾಡುವ ಮಂತ್ರಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ನಿತಿನ್ ಗಡ್ಕರಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಿತಿನ್ ಗಡ್ಕರಿ ಅವರು ಟ್ವಿಟರ್ನಲ್ಲಿ 12.1 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ದೂರು ದಾಖಲು
ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಬಂದಿರುವ ಕುರಿತು ಅವರ ಸಾರ್ವಜನಿಕ ಸಂಪರ್ಕ ಕಚೇರಿಯಿಂದ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪೊಲೀಸ್ ಠಾಣೆ ನಾಗ್ಪುರದ ಗಡ್ಕರಿ ಅವರ ಕಚೇರಿಯಿಂದ ಒಂದು ಕಿ.ಮೀ. ದೂರದಲ್ಲಿದ್ದು, ಪೊಲೀಸರು ಕಚೇರಿ ಸಿಬ್ಬಂದಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ