ನವದೆಹಲಿ(ಫೆ. 06): ಸಿಎಎ, ಎನ್ಆರ್ಸಿ ವಿರುದ್ಧ ನಿರಂತರ ಪ್ರತಿಭಟನೆಗೆ ವೇದಿಕೆಯಾಗುವ ಮೂಲಕ ದೆಹಲಿಯ ಶಾಹೀನ್ ಬಾಗ್ ಇಡೀ ದೇಶದ ಗಮನ ಸೆಳೆಯುತ್ತಿದೆ. ಇಲ್ಲಿನ ಪ್ರತಿಭಟನೆಗಳು ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಿವೆ. ದೆಹಲಿಯ ರಾಜ್ಯ ಸರ್ಕಾರ ಹಾಗೂ ಕೇಂದ್ರ ವಿಪಕ್ಷಗಳು ಶಾಹೀನ್ ಬಾಗ್ ಪ್ರತಿಭಟನಾಕಾರರ ಪರ ಸಹಾನುಭೂತಿ ಹೊಂದಿದ್ದಾರೆ. ಆದರೆ, ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ಇಲ್ಲಿನ ಪ್ರತಿಭಟನಾಕಾರರ ವಿರುದ್ಧ ಕಿಡಿಕಾರುತ್ತಲೇ ಬಂದಿದ್ಧಾರೆ. ಕೆಲ ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪಟ್ಟಿಗೆ ಗಿರಿರಾಜ್ ಸಿಂಗ್ ಸೇರಿದ್ಧಾರೆ. ಕೇಂದ್ರ ಪಶುಸಂಗೋಪನೆ ಸಚಿವರಾದ ಅವರು ಶಾಹೀನ್ ಬಾಗ್ನಲ್ಲಿ ದೇಶದ ವಿರುದ್ಧ ದೊಡ್ಡ ಸಂಚು ರೂಪಿತವಾಗುತ್ತಿದೆ. ಆತ್ಮಾಹುತಿ ದಾಳಿಕೋರರ ಸೃಷ್ಟಿಯಾಗುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ಧಾರೆ.
“ಈ ಶಾಹೀನ್ ಬಾಗ್ ಈಗ ಆಂದೋಲನವಾಗಿ ಉಳಿದಿಲ್ಲ. ಇಲ್ಲಿ ಆತ್ಮಾಹುತಿ ದಾಳಿಕೋರರನ್ನು ಬೆಳೆಸಲಾಗುತ್ತಿದೆ. ದೇಶದ ರಾಜಧಾನಿಯಲ್ಲಿ ದೇಶದ ವಿರುದ್ಧ ಸಂಚು ರೂಪಿಸಲಾಗುತ್ತಿದೆ” ಎಂದು ಗಿರಿರಾಜ್ ಸಿಂಗ್ ತಮ್ಮ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ಅವರು ಒಂದು ವಿಡಿಯೋ ಕೂಡ ಸೇರಿಸಿದ್ಧಾರೆ.
यह शाहीन बाग़ अब सिर्फ आंदोलन नही रह गया है ..यहाँ सूइसाइड बॉम्बर का जत्था बनाया जा रहा है।
देश की राजधानी में देश के खिलाफ साजिश हो रही है। pic.twitter.com/NoD98Zfwpx
— Shandilya Giriraj Singh (@girirajsinghbjp) February 6, 2020
“ಈ ಮಕ್ಕಳ ಮಾತುಗಳನ್ನ ಕೇಳಿಸಿಕೊಳ್ಳಿ. ಇವರ ಮನಸ್ಸಲ್ಲಿ ಎಷ್ಟು ವಿಷ ತುಂಬಲಾಗಿದೆ… ಇದ ಖಿಲಾಫತ್ ಆಂದೋಲನವಲ್ಲದೇ ಮತ್ತಿನ್ನೇನು” ಎಂದು ಶಾಂಡಿಲ್ಯ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
इन बच्चों को सुने .इनके दिमाग़ में जो इतना जहर भरा जा रहा है ..ये खिलाफत आंदोलन नहीं तो और क्या है। pic.twitter.com/nWYSi3PXIX
— Shandilya Giriraj Singh (@girirajsinghbjp) February 6, 2020
ಖಿಲಾಫತ್ ಆಂದೋಲನ ಎಂಬುದು ಮೊದಲ ವಿಶ್ವ ಮಹಾಯುದ್ಧದ ನಂತರ ಟರ್ಕಿಯ ಆಟ್ಟಮನ್ ಇಸ್ಲಾಮೀ ಖಾಲೀಫರನ್ನು ರಕ್ಷಿಸಲು ಭಾರತೀಯ ಮುಸ್ಲಿಮರು 1919ರಲ್ಲಿ ಪ್ರಾಂಭಿಸಿದ ಆಂದೋಲನವಾಗಿದೆ. ಐದು ವರ್ಷ ಕಾಲ ನಡೆದ ಈ ಆಂದೋಲನದಲ್ಲಿ ಭಾರತೀಯ ಮುಸ್ಲಿಮರು ಬ್ರಿಟಿಷ್ ಆಡಳಿತದ ವಿರುದ್ಧ ತೀವ್ರತರದಲ್ಲಿ ಪ್ರತಿಭಟನೆ ನಡೆಸಿದ್ದರು. ಶೌಕತ್ ಅಲಿ, ಮೊಹಮ್ಮದ್ ಅಲಿ ಜೌಹಾರ್, ಹಕೀಮ್ ಅಜ್ಮಲ್ ಖಾನ್ ಮೊದಲಾದವರು ಈ ಆಂದೋಲನದ ನೇತೃತ್ವ ವಹಿಸಿದ್ದರು. 1924ರಲ್ಲಿ ಟರ್ಕಿ ದೇಶ ಖಾಲೀಫ್ ವ್ಯವಸ್ಥೆಯನ್ನೇ ಕಿತ್ತುಹಾಕಿ ಜಾತ್ಯತೀತ ಸಂವಿಧಾನ ರೂಪಿಸುವುದರೊಂದಿಗೆ 1924ರಲ್ಲಿ ಭಾರತದಲ್ಲಿ ಖಿಲಾಫತ್ ಆಂದೋಲನ ನಿಂತುಹೋಯಿತು.
ಇದನ್ನೂ ಓದಿ: ಶಾಹಿನ್ ಬಾಗ್ ಗುಂಡಿನ ದಾಳಿಕೋರ ಎಎಪಿಯವನಾಗಿದ್ದರೆ ಆತನಿಗೆ ಎರಡು ಪಟ್ಟು ಶಿಕ್ಷೆ ಕೊಡಿ; ಅರವಿಂದ ಕೇಜ್ರಿವಾಲ್
ಮುಸ್ಲಿಮರಿಗೆ ದೇಶಕ್ಕಿಂತ ಧರ್ಮವೇ ಹೆಚ್ಚು ಎಂಬುದು ಬಲಪಂಥೀಯರು ಆಗಿನಿಂದಲೂ ಮಾಡಿಕೊಂಡು ಬರುತ್ತಿರುವ ಆರೋಪವಾಗಿದೆ. ಹೀಗಾಗಿಯೇ, ಈಗ ಗಿರಿರಾಜ್ ಸಿಂಗ್ ಅವರು ಶಾಹೀನ್ ಬಾಗ್ ಪ್ರತಿಭಟನೆಯನ್ನು ಖಿಲಾಫತ್ ಆಂದೋಲನಕ್ಕೆ ಹೋಲಿಕೆ ಮಾಡಿದ್ದಾರೆ.
ಡಿಸೆಂಬರ್ 18ರಿಂದಲೂ ದೆಹಲಿಯ ಶಾಹೀನ್ ಬಾಗ್ನಲ್ಲಿ ದಿನದ 24 ಗಂಟೆಯೂ ಪ್ರತಿಭಟನೆಗಳು ನಡೆಯುತ್ತಿವೆ. ಸಿಎಎ, ಎನ್ಆರ್ಸಿ, ಎನ್ಪಿಆರ್ ಯೋಜನೆಗಳು ದೇಶದ ಮುಸ್ಲಿಮರನ್ನು ಹತ್ತಿಕ್ಕಲು ಮಾಡಿರುವ ಸಂಚು ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ