ನವದೆಹಲಿ: ಗುಜರಾತ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ (Fake Encounter Case) ನನ್ನ ಮೇಲೆ ಒತ್ತಡ ಹಾಕಿ ಆಗಿನ ಸಿಎಂ ನರೇಂದ್ರ ಮೋದಿ ಅವರನ್ನು ಸಿಲುಕಿಸಲು ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನನ್ನ ಮೇಲೆ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ನರೇಂದ್ರ ಮೋದಿ (Narendra Modi) ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ರೈಸಿಂಗ್ ಇಂಡಿಯಾ ಸಮ್ಮಿಟ್ (Rising India Summit) ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರನ್ನು ನಡೆದ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಿಲುಕಿಸುವಂತೆ ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು. ಆದರೂ ಆಗ ಬಿಜೆಪಿ ಯಾವತ್ತೂ ಗದ್ದಲ ಎಬ್ಬಿಸಲಿಲ್ಲ ಎಂದಿರುವ ಅಮಿತ್ ಶಾ, ಸೂರತ್‌ನ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸಿದೆ. ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಮತ್ತು ಶಾಸಕಾಂಗದ ಸದಸ್ಯತ್ವವನ್ನು ಕಳೆದುಕೊಂಡ ಏಕೈಕ ರಾಜಕಾರಣಿ ಅದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಹೇಳಿದರು.
ಇದನ್ನೂ ಓದಿ: Rising India Summit: ಕರ್ನಾಟಕದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಅಮಿತ್ ಶಾ
ಭವಿಷ್ಯಕ್ಕಾಗಿ ಮೋದಿಯ ದೂಷಣೆ
ಇನ್ನು, ರಾಹುಲ್ ಗಾಂಧಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯದ ಮೊರೆ ಹೋಗುವ ಬದಲು ತಮ್ಮ ಅಳಲನ್ನು ತೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ತನ್ನ ರಾಜಕೀಯ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಆರೋಪ ಹೊರಿಸುವ ಬದಲು ರಾಹುಲ್ ಗಾಂಧಿ ಹೈಕೋರ್ಟ್ ಮೆಟ್ಟಿಲೇರಲಿ. ಕಾಂಗ್ರೆಸ್ ಜನರಲ್ಲಿ ತಪ್ಪು ಕಲ್ಪನೆಯನ್ನು ಹರಡುತ್ತಿದೆ. ಕನ್ವಿಕ್ಷನ್ ಉಳಿಯಲು ಸಾಧ್ಯವಿಲ್ಲ. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಹೋಗಿ ನ್ಯಾಯಾಲಯ ತೀರ್ಪು ನೀಡಿದರೆ ಶಿಕ್ಷೆಗೆ ತಡೆ ನೀಡಬಹುದು ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ತಮ್ಮ ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿಲ್ಲ ಎಂದಿರುವ ಅಮಿತ್ ಶಾ. ಇದು ಯಾವ ರೀತಿಯ ದುರಹಂಕಾರ? ನಿಮಗೆ ಅನುಕೂಲ ಬೇಕು. ನೀವು ಸಂಸದರಾಗಿ ಮುಂದುವರಿಯಲು ಬಯಸುತ್ತೀರಿ ಆದರೆ ನ್ಯಾಯಾಲಯದ ಮುಂದೆ ಹೋಗುವುದಿಲ್ಲ. ಇಂತಹ ದುರಹಂಕಾರ ಎಲ್ಲಿ ಹುಟ್ಟುತ್ತದೆ ಎಂದು ಕಿಡಿಕಾರಿದರು. ಯುಪಿಎ ಸರ್ಕಾರದ ಅವಧಿಯಲ್ಲಿ 2013ರ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಲಾಲು ಪ್ರಸಾದ್, ಜೆ ಜಯಲಲಿತಾ ಮತ್ತು ರಶೀದ್ ಅಲ್ವಿ ಸೇರಿದಂತೆ 17 ಪ್ರಮುಖ ನಾಯಕರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದರು ಎಂದು ನೆನಪಿಸಿಕೊಂಡ ಅಮಿತ್ ಶಾ, ಚುನಾಯಿತ ಪ್ರತಿನಿಧಿಯು ಶಿಕ್ಷೆಯಾದ ತಕ್ಷಣ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾನೆ. ಆದರೆ, ಯಾರೂ ಇದರ ವಿರುದ್ಧ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಿಲ್ಲ, ಏಕೆಂದರೆ ಇದು ದೇಶದ ಕಾನೂನು ಎಂದು ಅವರು ಹೇಳಿದರು.
ಇದನ್ನೂ ಓದಿ: Karnataka Election 2023: ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಅಭಯ; ಫುಲ್ ಖುಷಿ ಆದ್ರಂತೆ ಚುನಾವಣಾ ಚಾಣಕ್ಯ
ಇನ್ನು ‘ರಾಹುಲ್ ಗಾಂಧಿಯವರ ಸಂಪೂರ್ಣ ಭಾಷಣವನ್ನು ಆಲಿಸಿ, ಅವರು ಕೇವಲ ನರೇಂದ್ರ ಮೋದಿ ಬಗ್ಗೆ ನಿಂದನೀಯ ಮಾತುಗಳನ್ನು ಆಡಿಲ್ಲ. ಅವರು ಇಡೀ ಮೋದಿ ಸಮುದಾಯ ಮತ್ತು ಒಬಿಸಿ ಸಮಾಜದ ಬಗ್ಗೆ ನಿಂದನೆಯ ಮಾತುಗಳನ್ನು ಆಡಿದ್ದಾರೆ ಎಂದ ಅಮಿತ್ ಶಾ, ಈ ದೇಶದ ಕಾನೂನು ಸ್ಪಷ್ಟವಾಗಿದೆ. ಸೇಡಿನ ರಾಜಕೀಯದ ಪ್ರಶ್ನೆಯೇ ಇಲ್ಲ. ಇದು ಅವರ ಸರ್ಕಾರದ ಅವಧಿಯಲ್ಲಿ ಬಂದ ಭಾರತದ ಸುಪ್ರೀಂ ಕೋರ್ಟ್‌ನ ತೀರ್ಪು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ