2024ರ ವೇಳೆಗೆ ದೇಶಾದ್ಯಂತ ಎನ್​ಆರ್​ಸಿ ಜಾರಿಗೆ ಬರಲಿದೆ; ಕೇಂದ್ರ ಗೃಹ ಸಚಿವ ಅಮಿತ್​ ಶಾ

ಬೌದ್ಧ, ಜೈನ್, ಹಿಂದು​ ಸೇರಿ ಎಲ್ಲ ಅಲ್ಪಸಂಖ್ಯಾತ ನಿರಾಶ್ರಿತರು ಎನ್​ಆರ್​ಸಿಯಿಂದ ಭಯಪಡುವ ಅಗತ್ಯವಿಲ್ಲ. ಅವರು ನಮ್ಮ ದೇಶದಲ್ಲಿ ಸುರಕ್ಷಿತವಾಗಿರಬಹುದು ಎಂದು ಶಾ ಹೇಳಿದ್ದರು. ಆದರೆ, ಅವರು ಮುಸ್ಲಿಂ ಸಮುದಾಯದವರ ಹೆಸರನ್ನು ಉಲ್ಲೇಖ ಮಾಡಿರಲಿಲ್ಲ. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದರು.

Rajesh Duggumane | news18-kannada
Updated:October 17, 2019, 11:56 AM IST
  • Share this:
ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ವಿರುದ್ಧ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇವರನ್ನು ಗುರುತಿಸಿ, ದೇಶದಿಂದ ಹೊರಗಟ್ಟಲು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಕಾರ್ಯವನ್ನು ಕೇಂದ್ರ ಆರಂಭಿಸಿದೆ. 2024ರ ವೇಳೆಗೆ ದೇಶಾದ್ಯಂತ ಇದನ್ನು ಜಾರಿಗೆ ತರಲು ಕೇಂದ್ರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

ನೆಟ್​ವರ್ಕ್​ 18 ಗ್ರೂಪ್ ಪ್ರಧಾನ ಸಂಪಾದಕ ರಾಹುಲ್ ಜೋಶಿ ಅವರು ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, “2014ರ ವೇಳೆಗೆ ಭಾರತದಲ್ಲಿ ಎನ್​ಆರ್​ಸಿ ಜಾರಿಗೆ ಬರಲಿದೆ. ಇವರನ್ನು ಹೊರ ಹಾಕಲು ವಿಶ್ವಸಂಸ್ಥೆಯಲ್ಲಿ ಅದರದ್ದೇ ಆದ ನಿಯಮವಿದೆ. ಅದನ್ನು ನಾವು ಪಾಲಿಸುತ್ತೇವೆ. ನಮ್ಮ ಪ್ರಕ್ರಿಯೆಯಲ್ಲಿ ತಪ್ಪು ಕಂಡು ಬಂದರೆ ನಾವು ಅದನ್ನು ಸರಿಪಡಿಸುತ್ತೇವೆ,” ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಹೀಗಾಗಿ ಈ ವಿಚಾರ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎನ್ನಲಾಗಿತ್ತು. ಇದನ್ನು ಅಮಿತ್​ ಶಾ ಕೂಡ ಒಪ್ಪಿಕೊಂಡಿದ್ದಾರೆ. “ವಲಸಿಗರನ್ನು ಹೊರ ಹಾಕಲು ಎನ್​ಆರ್​ಸಿ ಕಾರ್ಯರೂಪಕ್ಕೆ ತಂದಿದ್ದೇವೆ. ಇದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ,” ಎಂದರು ಅವರು,

ಇತ್ತೀಚೆಗೆ ಸಭೆಯೊಂದರಲ್ಲಿ ಮಾತನಾಡಿದ್ದ ಅಮಿತ್​ ಶಾ, ಬೇರೆ ದೇಶದಿಂದ ಬರುವ ಬೌದ್ಧ, ಜೈನ್, ಹಿಂದು​ ಸೇರಿ ಎಲ್ಲ ಅಲ್ಪಸಂಖ್ಯಾತ ನಿರಾಶ್ರಿತರು ಎನ್​ಆರ್​ಸಿಯಿಂದ ಭಯಪಡುವ ಅಗತ್ಯವಿಲ್ಲ. ಅವರು ನಮ್ಮ ದೇಶದಲ್ಲಿ ಸುರಕ್ಷಿತವಾಗಿರಬಹುದು ಎಂದು ಹೇಳಿದ್ದರು. ಆದರೆ, ಅವರು ಮುಸ್ಲಿಂ ಸಮುದಾಯದವರ ಹೆಸರನ್ನು ಉಲ್ಲೇಖ ಮಾಡಿರಲಿಲ್ಲ. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಉತ್ತರಿಸಿದ ಅಮಿತ್​ ಶಾ, “ಪಾಕಿಸ್ತಾನ, ಬಾಂಗ್ಲಾ ಸೇರಿ ಬೇರೆ ಬೇರೆ ದೇಶಗಳಲ್ಲಿ ಮುಸ್ಲಿಮರು ಅಲ್ಪ ಸಂಖ್ಯಾತರಲ್ಲ. ಅಲ್ಲಿ, ಬೌದ್ಧ, ಜೈನ್​ ಹಾಗೂ ಹಿಂದುಗಳು ಅಲ್ಪ ಸಂಖ್ಯಾತರು. ಹಾಗಾಗಿ ಅಲ್ಲಿಂದ ಬರುವ ಅಲ್ಪ ಸಂಖ್ಯಾತ ನಿರಾಶ್ರಿತರಿಗೆ ನಮ್ಮ ದೇಶದಲ್ಲಿ ರಕ್ಷಣೆ ನೀಡುತ್ತೇವೆ ಎನ್ನಲಾಗಿತ್ತು. ಧರ್ಮವನ್ನು ಬೆಳೆಸಲು ಮತ್ತು ರಕ್ಷಿಸಲು ಈ ದೇಶಗಳಿಂದ ಬಂದವರನ್ನು ಆಚೆ ಕಳಿಸುವುದು ಅನಿವಾರ್ಯ. ಆದರೆ ಮಕ್ಕಳು, ಹೆಂಗಸರು, ವೃದ್ಧರ ರಕ್ಷಣೆಗಾಗಿ ನಮ್ಮ ದೇಶಕ್ಕೆ ಬರುವವರು ನಿರಾಶ್ರಿತರೆಂದೇ ಪರಿಗಣಿಸುತ್ತೇವೆ, ”ಎಂದು ಸ್ಪಷ್ಟನೆ ನೀಡಿದರು.
First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ